Advertisement

ಹಳೆ ಟೈಟಲ್‌ ಹೊಸ ಸಿನಿಮಾ: ಎಡಕಲ್ಲು ಮೇಲೊಂದು ಸಂದೇಶ

11:51 AM Apr 16, 2018 | |

“ಎಡಕಲ್ಲು ಗುಡ್ಡದ ಮೇಲೆ’ – ಈ ಸಿನಿಮಾ ಹೆಸರು ಕೇಳಿದಾಗ ನಿಮಗೆ ಪುಟ್ಟಣ್ಣ ಕಣಗಾಣಲ್‌ ಅವರ ಹೆಸರು ನೆನಪಿಗೆ ಬರುತ್ತದೆ. ಏಕೆಂದರೆ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರವನ್ನು ನಿರ್ದೇಶಿಸಿದವರು ಪುಟ್ಟಣ್ಣ. ಚಂದ್ರಶೇಖರ್‌, ಜಯಂತಿ, ಆರತಿ ಮುಖ್ಯಯಲ್ಲಿ ನಟಿಸಿದ್ದ ಈ ಚಿತ್ರ ಅಂದು ದೊಡ್ಡ ಯಶಸ್ಸು ಕಂಡಿತ್ತು. ಈಗ ಮತ್ತೆ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಸುದ್ದಿ ಮಾಡುತ್ತಿದೆ.

Advertisement

ಆದರೆ, ಇದು ಪುಟ್ಟಣ್ಣ ಕಣಗಾಲ್‌ ನಿರ್ದೇಶನದ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರವಲ್ಲ, ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರ. ಹೌದು, ಹಳೆಯ ಯಶಸ್ವಿ ಸಿನಿಮಾಗಳ ಶೀರ್ಷಿಕೆಗಳನ್ನಿಟ್ಟುಕೊಂಡು ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆ ಸಾಲಿಗೆ “ಎಡಕಲ್ಲು ಗುಡ್ಡದ ಮೇಲೆ’ ತಂಡ ಕೂಡಾ ಸೇರುತ್ತದೆ. ವಿವಿನ್‌ ಸೂರ್ಯ ಎನ್ನುವವರು ಹೊಸ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ನಿರ್ದೇಶಕರು.

ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ನಿರ್ದೇಶಕ ವಿವಿನ್‌ ಹೇಳುವಂತೆ, ಪುಟ್ಟಣ್ಣ ಅವರ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲವಂತೆ. “ನನಗೆ ಪುಟ್ಟಣ್ಣ ಅವರ ಚಿತ್ರದ ಟೈಟಲ್‌ ಮರುಬಳಕೆ ಮಾಡಿದರ ಕುರಿತು ಹೆಮ್ಮೆಯೂ ಇದೆ ಜೊತೆಗೆ ಎಚ್ಚರಿಕೆಯೂ ಇದೆ. ಆ ಟೈಟಲ್‌ನಡಿ ಸಿನಿಮಾದಲ್ಲಿ ಒಳ್ಳೆಯ ಅಂಶಗಳನ್ನೇ ಹೇಳಿದ್ದೇನೆ’ ಎನ್ನುವುದು ವಿವಿನ್‌ ಮಾತು.

ಚಿತ್ರದಲ್ಲಿ ತಂದೆ-ತಾಯಿಯ, ಸಂಬಂಧಗಳ ಮೇಲೆ ಪ್ರೀತಿ ತೋರಿಸದೇ, ಹಣ, ಆಸ್ತಿ ಹಿಂದೆ ಬಿದ್ದಾಗ ಏನೇನಾಗುತ್ತದೆ ಎಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರಂತೆ. ನಿರ್ದೇಶಕರಿಗೆ “ಎಡಕಲ್ಲು ಗುಡªದ ಮೇಲೆ’ ಚಿತ್ರದಲ್ಲಿ ನಟಿಸಿದ ಹಿರಿಯ ಕಲಾವಿದರಾದ ಚಂದ್ರಶೇಖರ್‌, ಜಯಂತಿ ಹಾಗೂ ಆರತಿಯವರನ್ನು ಈ ಚಿತ್ರದಲ್ಲೂ ಬಳಸಿಕೊಳ್ಳಬೇಕೆಂಬ ಆಸೆ ಇತ್ತಂತೆ. ಆದರೆ, ಜಯಂತಿ ಅವರ ಅನಾರೋಗ್ಯ ಹಾಗೂ ಆರತಿಯವರು ಸಂಪರ್ಕಕ್ಕೆ ಸಿಗದ ಕಾರಣ ಅವರಿಬ್ಬರನ್ನು ಬಳಸಿಕೊಳ್ಳಲಾಗಲಿಲ್ಲವಂತೆ.

ಚಂದ್ರಶೇಖರ್‌ ಅವರು ಇಲ್ಲಿ ನಾಯಕನ ಪಾತ್ರ ಮಾಡಿದ್ದಾಗಿ ಹೇಳಿಕೊಂಡರು ವಿವಿನ್‌. ಚಿತ್ರದಲ್ಲಿ ನಕುಲ್‌ ನಾಯಕರಾಗಿ ನಟಿಸಿದ್ದಾರೆ. ಸ್ವಾತಿ ಶರ್ಮಾ ನಾಯಕಿ. “ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮೊದಲ ಚಿತ್ರದಲ್ಲೇ ನಟನೆಗೆ ಅವಕಾಶವಿರುವ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ’ ಎನ್ನುವುದು ಸ್ವಾತಿ ಮಾತು. ಚಿತ್ರದಲ್ಲಿ ಹಿರಿಯ ನಟರಾದ ದತ್ತಣ್ಣ, ಮನ್‌ದೀಪ್‌ರಾಯ್‌, ರವಿಭಟ್‌, ಮೂಗು ಸುರೇಶ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಆಶಿಕ್‌ ಕಿರಣ್‌ ಸಂಗೀತ ಚಿತ್ರಕ್ಕಿದೆ. ಚಿತ್ರವನ್ನು ಜಿ.ಪಿ.ಪ್ರಕಾಶ್‌ ನಿರ್ಮಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next