Advertisement

ಹಳೆ ತಾ|ಕೇಂದ್ರದಲ್ಲಿ ಹೋಬಳಿಗೂ ಸೌಕರ್ಯವಿಲ್ಲ

05:37 PM Dec 20, 2021 | Team Udayavani |

ಉಪ್ಪಿನಂಗಡಿ: ಒಂದು ಕಾಲದಲ್ಲಿ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯಲ್ಲಿ ಹೋಬಳಿ ಕೇಂದ್ರಕ್ಕೆ ಬೇಕಾದ ಸವಲತ್ತುಗಳೇ ಇನ್ನೂ ಇಲ್ಲದ ಸ್ಥಿತಿ.

Advertisement

11 ಗ್ರಾಮಗಳ ವ್ಯಾಪ್ತಿ ಹೊಂದಿರುವ ಉಪ್ಪಿನಂಗಡಿ ಹೋಬಳಿ ಪುತ್ತೂರು ತಾಲೂಕಿನ ಎರಡನೇ ಅತೀ ದೊಡ್ಡ ವಾಣಿಜ್ಯ ಕೇಂದ್ರ. ರಾಷ್ಟ್ರೀಯ ಹೆದ್ದಾರಿ ಹತ್ತಿರದಲ್ಲಿರುವುದನ್ನು ಬಿಟ್ಟರೆ ಬೇರೇನೂ ಇಲ್ಲ ಎನ್ನಬಹುದು.
ಸ್ವಂತ ನಿವೇಶನವಿದ್ದರೂ ಗ್ರಾ.ಪಂ. ಕಟ್ಟಡದಲ್ಲಿ ಆಶ್ರಯ ಪಡೆದು ಕಚೇರಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿನ ನಾಡ ಕಚೇರಿಯದ್ದು. ಎಂಟು ವರ್ಷಗಳ ಹಿಂದೆ ಒಂಬತ್ತು ಸೆಂಟ್ಸ್‌ ಸ್ವಂತ ನಿವೇಶನದಲ್ಲಿದ್ದ ಕಟ್ಟಡ ಶಿಥಿಲಗೊಂಡು ಛಾವಣಿ ಕುಸಿದು ಅಪಾಯದ ಅಂಚಿನಲ್ಲಿದ್ದ ವಿಚಾರ ತಿಳಿದ ಆಗಿನ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸಹಾಯಕ ಕಮಿಶನರ್‌ ಮೂಲಕ ಗ್ರಾ.ಪಂ. ಆಡಳಿತದೊಂದಿಗೆ ಮಾತುಕತೆ ನಡೆಸಿ ಗ್ರಾ.ಪಂ.ನ ಒಂದು ಪಾರ್ಶ್ವದಲ್ಲಿ ಒಂದು ವರ್ಷದ ಅವಧಿಗೆಂದು ಅನುಮತಿ ಪಡೆಯಲಾಗಿತ್ತು. ನೂತನ ಕಟ್ಟಡ ರಚನೆಗೆ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಗೊಳ್ಳದಿರುವುದರಿಂದ ಮೂರು ವರ್ಷಗಳಿಂದ ಗ್ರಾ.ಪಂ. ಕಟ್ಟಡದಲ್ಲಿ ಉಳಿದುಕೊಂಡಿದೆ.

ಹೋಬಳಿಯ ಸೌಲಭ್ಯ ಇಲ್ಲ
ಬ್ರಿಟಿಷ್‌ ಕಾಲದ ಅವಧಿಯಲ್ಲಿ ಉಪ್ಪಿನಂಗಡಿ ತಾಲೂಕು ಕೇಂದ್ರವಾಗಿತ್ತು. ನೆರೆಪೀಡಿತ ಪ್ರದೇಶವಾದ ಕಾರಣಕ್ಕೆ ಪುತ್ತೂರಿಗೆ ಸ್ಥಳಾಂತರವಾಗಿತ್ತು. ಈ ಹೋಬಳಿ ಮಟ್ಟದ ನಾಡಕಚೇರಿ 11 ಗ್ರಾಮಗಳಿಗೆ 12 ಕಿ.ಮೀ. ದೂರದಲ್ಲಿದೆ. ಆದರೆ ಹೆದ್ದಾರಿ ಬದಿಯಲ್ಲಿಯೇ ಇರುವುದರಿಂದ ಸಂಚಾರ ದೃಷ್ಟಿಯಿಂದ ಸಹಕಾರಿ ಎಂದೆನಿಸಿದೆ.

ವಸತಿ ಗೃಹವೇ ಕಚೇರಿ
ಜಾತಿ ಆದಾಯ, ಜನನ ಮರಣ ನೋಂದಣಿ, ಪಿಂಚಣಿ, ಸಣ್ಣ ರೈತ ಮುಂತಾದ ದಾಖಲೆಗಳಿಗೆ ಸಾರ್ವಜನಿಕರು ಬಂದರೆ ಸರ್ವರ್‌ ಸಮಸ್ಯೆ ಇಲ್ಲಿ ಸಾಮಾನ್ಯ ಎಂಬಂತಿದೆ. ಒಂದು ಕೆಲಸಕ್ಕೆ ಮೂರು ನಾಲ್ಕು ಬಾರಿ ಅಲೆದಾಡುವ ಸ್ಥಿತಿ ಇಲ್ಲಿನದು. ಗ್ರಾಮ ಚಾವಡಿಯಲ್ಲಿ ಕಂದಾಯ ನಿರೀಕ್ಷಕರಿಗೆ ಕೊಠಡಿ ಇಲ್ಲದೆ ತಾತ್ಕಾಲಿಕವಾಗಿ ಕಂದಾಯ ಇಲಾಖೆ ವಸತಿ ಗೃಹವನ್ನೇ ಕಚೇರಿಯನ್ನಾಗಿಸುವ ಪರಿಸ್ಥಿತಿ ಉದ್ಬವಿಸಿದೆ. ಡಿ ಗ್ರೂಪ್‌ನ ಎರಡು ಹುದ್ದೆ ಭರ್ತಿಯಾಗಿಲ್ಲ. ಇಲ್ಲಿಗೆ ಪೂರ್ಣಾವಧಿ ಕಂದಾಯ ನಿರೀಕ್ಷಕರೇ ಇಲ್ಲ. ಅವರ ಬದಲಿಗೆ ಗ್ರಾಮ ಕರಣಿಕರನ್ನೇ ಪ್ರಭಾರವಾಗಿ ನೇಮಿಸಲಾಗಿದೆ. ಕರ್ತವ್ಯ ದಲ್ಲಿರುವ ಗ್ರಾಮ ಕರಣಿಕರು ನಿವೃತ್ತ ಸೇನಾನಿ ಯಾಗಿದ್ದು, ಅವರಿಗೆ ರಾಜ್ಯ ಅಗ್ನಿ ಶಾಮಕ ದಳದ ಎಸ್‌ಐ ಹುದ್ದೆಗೆ ನೇಮಕಾತಿ ಆದೇಶ ಬಂದಿದೆ. ಇದರಿಂದಾಗಿ ಈ ಹುದ್ದೆಯೂ ಖಾಲಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಪಾಳು ಬಿದ್ದ ಕಟ್ಟಡ
ಸ್ವಂತ ನಿವೇಶನದಲ್ಲಿ ಸರಕಾರದ ಲಕ್ಷಾಂತರ ರೂಪಾಯಿ ಮೌಲ್ಯದ ಸೋಲಾರ್‌ ಪ್ಲೇಟ್‌ ಹಳೇ ಕಟ್ಟಡದಲ್ಲಿ ಪಾಳು ಬಿದ್ದಿದ್ದು ಪಕ್ಕದಲ್ಲೇ ಪೊಲೀಸ್‌ ಠಾಣೆ ಇರುವುದರಿಂದ ಇದಕ್ಕೆ ರಕ್ಷಣೆ ದೊರೆತಿದೆ.

Advertisement

ಹೋಬಳಿ ಗ್ರಾಮಗಳು
ಹೋಬಳಿ ವ್ಯಾಪ್ತಿಯಲ್ಲಿ ಉಪ್ಪಿನಂಗಡಿ, 34ನೇ ನೆಕ್ಕಿಲಾಡಿ, ಬಜತ್ತೂರು, ಹಿರೇಬಂಡಾಡಿ, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಚಿಕ್ಕಮುಟ್ನೂರು, ಬನ್ನೂರು, ಕಬಕ, ಕೋಡಿಪ್ಪಾಡಿ ಪಟ್ನೂರು ಸೇರಿ 11 ಗ್ರಾಮಗಳಿವೆ.

ಹೋಬಳಿ ಮಟ್ಟದ ಉಪ್ಪಿನಂಗಡಿ ನಾಡ ಕಚೇರಿಯ ಕಟ್ಟಡದ ವಿಚಾರ ಮನವರಿಕೆಯಾಗಿದೆ. ಈಗಾಗಲೇ ಈ ಬಗ್ಗೆ ಸರಕಾರಕ್ಕೆ 20 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಜಿಲ್ಲೆಯ ಶಾಸಕರಿಗೆ ವಿಷಯ ಮನವರಿಕೆ ಮಾಡಿ ಸರಕಾರದ ಮಟ್ಟದಲ್ಲಿ ಮಂಜೂರಾತಿಗೆ ಪ್ರಯತ್ನಿಸಲಾಗುವುದು.
-ಡಾ| ರಾಜೇಂದ್ರ, ಜಿಲ್ಲಾಧಿಕಾರಿ

ಸ್ವಂತ ಕಟ್ಟಡಕ್ಕೆ ಸರಕಾರಕ್ಕೆ ಅನುದಾನದ ಅಂದಾಜುಪಟ್ಟಿ ಕಳುಹಿಸಲಾಗಿದೆ. ಮಂಜೂರಾತಿ ಪ್ರಕ್ರಿಯೆ ನಡೆದಿಲ್ಲ. ಕಚೇರಿಯಲ್ಲಿ ಡಿ ಗ್ರೂಪ್‌ ಹಾಗೂ ಕಂದಾಯ ನಿರೀಕ್ಷಕರ ಹುದ್ದೆ ಖಾಲಿ ಉಳಿದಿದೆ.
-ಚೆನ್ನಪ್ಪ, ಉಪ ತಹಶೀಲ್ದಾರ್‌

– ಎಂ.ಎಸ್‌.ಭಟ್‌ ಉಪ್ಪಿನಂಗಡಿ

 

Advertisement

Udayavani is now on Telegram. Click here to join our channel and stay updated with the latest news.

Next