ಬೇಲೂರು: ತಾಲೂಕಿನ ಕುಶಾವರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ವಿದೇಶದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಾವು ಕಲಿತ ಶಾಲೆಗೆ 5 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಿಸುವ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ತಾಲೂಕಿನ ಕುಶಾವರ ಗ್ರಾಮದ ಕೆ.ಸಿ.ಚಿಕ್ಕೇಗೌಡ ಮತ್ತು ಸೀತಮ್ಮ ಅವರ ಮಗಳಾದ ಅಹಲ್ಯಾ ಅವರು ಶಾಲೆ ನಿರ್ಮಾಣಕ್ಕೆ 5ಲಕ್ಷ ರೂ. ದೇಣಿಗೆ ನೀಡಿದ್ದು, ಕಟ್ಟಡ ಸಂಪೂರ್ಣ ಉತ್ತಮ ಗುಣ ಮಟ್ಟದಲ್ಲಿ ನಿರ್ಮಾಣವಾಗಿದ್ದು, ಫೆ. 15ರಂದು ಉದ್ಘಾಟನೆಗೊಳ್ಳಲಿದೆ.
ಎಲ್‌ಕೆಜಿ, ಯುಕೆಜಿ ಆರಂಭ: 2018ರಲ್ಲಿ ಶಾಲೆಯಲ್ಲಿ ಕುಶಾವರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ಎಲ್‌ಕೆಜಿ ಮತ್ತು ಯುಕೆಜಿ ಶಾಲೆ ಆರಂಭಿಸಿದ್ದು, ಇದಕ್ಕಾಗಿ ಕಟ್ಟಡದ ಕೊರತೆಯುಂಟಾಗಿತ್ತು. ಇದನ್ನು ಮನಗಂಡ ಅಹಲ್ಯಾ ಅವರು ತಮ್ಮ ಸ್ವಂತ ಖರ್ಚಿನಿಂದ ಹೊಸ ಕಟ್ಟಡ ನಿರ್ಮಾಣ ಮಾಡಿ ಗ್ರಾಮದ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿರುವುದು ಶ್ಲಾಘನೀಯವಾಗಿದೆ.
ಶಾಲಾ ಕಟ್ಟಡ ಅಭಿವೃದ್ಧಿಗೆ ಚಿಂತನೆ: 1962ರಲ್ಲಿ ಆರಂಭಗೊಂಡ ಶಾಲೆ ಶಿಥಿಲಗೊಂಡಿದೆ. ಇದನ್ನು ಮನಗೊಂಡಿರುವ ಶಾಲೆಯಲ್ಲಿ ಕಲಿತಿರುವ ಹಿರಿಯ ವಿದ್ಯಾರ್ಥಿಗಳು ಶಾಲೆಯ ಕಟ್ಟಡ ಅಭಿವೃದ್ಧಿಗೆ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಬಗ್ಗೆ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಸಮಿತಿಯ ಖಜಾಂಚಿ ಕೆ.ಸಿ. ಮಂಜುನಾಥ್
ಉದಯವಾಣಿಯೊಂದಿಗೆ ಮಾತನಾಡಿದರು.
ಮಲೆನಾಡು ಪ್ರದೇಶವಾದ ಕುಶಾವರ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ತೊಂದರೆಯಾಗದಂತೆ ನಿಗಾವಹಿಸಲು ಈ ಶಾಲೆಯಲ್ಲಿ ಕಲಿತಿರುವ ವಿದ್ಯಾರ್ಥಿಗಳೆಲ್ಲಾ ಸೇರಿ ಸಮಿತಿ ರಚಿಸಿದ್ದು, ಸಮಿತಿಯಲ್ಲಿ 200 ವಿದ್ಯಾರ್ಥಿಗಳು ಸದಸ್ಯರಾಗಿದ್ದು, ಪ್ರತಿಯೊಬ್ಬರೂ 1ಸಾವಿರ ರೂ. ನೀಡಿದ್ದಾರೆ. 23 ವಿದ್ಯಾರ್ಥಿಗಳು ತಲಾ 5 ಸಾವಿರ ರೂ. ನೀಡಿ ಶಾಲೆಯ ಅಭಿವೃದ್ಧಿಗೆ ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸಮಿತಿ ನಿರ್ದೇಶಕ ಚೇತನ್‌ಕುಮಾರ್ ಮಾತನಾಡಿ, ಶಾಲೆಗೆ ಕೂಲಿ ಕಾರ್ಮಿಕರು ಬಡವರ ಮಕ್ಕಳೇ ಬರುತ್ತಿದ್ದಾರೆ. ಸರ್ಕಾರಿ ಶಾಲೆಗೆ ಹಿರಿಯ ವಿದ್ಯಾರ್ಥಿಗಳು ಸೇರಿ ಶಾಲೆ ಅಭಿವೃದ್ಧಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಹಳೇ ವಿದ್ಯಾರ್ಥಿಗಳ ಕಾಳಜಿಗೆ ಶ್ಲಾಘನೆ: ಶಿಕ್ಷಕಿ ಅನ್ನಪೂರ್ಣ ಮಾತನಾಡಿ, 2 ವರ್ಷಗಳ ಹಿಂದೆ ಹಿರಿಯ ವಿದ್ಯಾರ್ಥಿಗಳ ಸಮಿತಿ ಮಾಡಬೇಕು ಎಂದು ಶಿಕ್ಷಕರಾದ ರಾಮೇಗೌಡ ಇವರ ಪ್ರೇರಣಿಯಿಂದ ಇಂದು ಸಮಿತಿ ರಚನೆಯಾಗಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿರುವುದು ಶ್ಲಾಘನೀಯ.
ಶಾಲೆಗೆ ಅಗತ್ಯವಾದ ಬೀರು, ಟೀವಿ ಮತ್ತು ಮಕ್ಕಳಿಗೆ ಕೂರಲು ಚೇರ್‌ಗಳನ್ನು ಹಿರಿಯ ವಿದ್ಯಾರ್ಥಿಗಳು ನೀಡಿದ್ದು ಅಹಲ್ಯಾ ಅವರು ನೂತನ ಕಟ್ಟಡ ನಿರ್ಮಿಸಿ ಕೊಟ್ಟಿರುವುದನ್ನು ಗಮನಿಸಿದ ಅವರ ಸೇಹಿತೆ ನೀತಾ ಶಾಲೆಯ ಅಭಿವೃದ್ಧಿಗೆ 50 ಸಾವಿರ ರೂ. ನೀಡುವ ಮೂಲಕ ಕಲಿತ ಶಾಲೆಯ ಅಭಿವೃದ್ಧಿಗೆ ಶ್ರಸುತ್ತಿರುವುದು ಪ್ರಶಂಸನೀಯ ಎಂದರು.
* ಡಿ.ಬಿ.ಮೋಹನ್‌ಕುಮಾರ್.