ವಿಟ್ಲ:ವಿಟ್ಲ ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲೆಗೆ ಬೆಂಗಳೂರು ಉದ್ಯಮಿ, ಸುಪ್ರಜಿತ್ ಫೌಂಡೇಶನ್ ಅಧ್ಯಕ್ಷ ಅಜಿತ್ ಕುಮಾರ್ ರೈ ಅವರು ಕೊಡುಗೆಯಾಗಿ ನೀಡಿದ 1.25 ಕೋ. ರೂ. ವೆಚ್ಚದ ಶ್ರೀಮತಿ ಮತ್ತು ಡಾ| ಕೆ. ಮಂಜುನಾಥ ರೈ ವಿದ್ಯಾ ಸೌಧದ ಉದ್ಘಾಟನ ಸಮಾರಂಭ ಗುರುವಾರ ನಡೆಯಿತು.
ಬೆಂಗಳೂರು ಸುಪ್ರಜಿತ್ ಫೌಂಡೇಶನ್ ಅಧ್ಯಕ್ಷ ಅಜಿತ್ ಕುಮಾರ್ ರೈ ಅವರು ಕಟ್ಟಡವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು. 1971ರಲ್ಲಿ ಇದೇ ಶಾಲೆಯಲ್ಲಿ 7ನೇ ತರಗತಿ ಓದಿರುವ ತಾನು ಆರಂಭಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪೂರೈಸಿದ್ದೇನೆ. ಗುರಿ ಇರಿಸಿಕೊಂಡು ಮುನ್ನುಗ್ಗಬೇಕು, ಆಗ ಸಾಧನೆ ಮಾಡಲು ಸಾಧ್ಯ. ಕಲಿತ ಶಾಲೆಯನ್ನು ಸ್ಮರಣೆಯಲ್ಲಿ ಇರಿಸಿಕೊಳ್ಳುವುದರ ಜತೆಗೆ ತಾನು ಕಲಿತಿರುವುದು ಏನನ್ನು ಎಂಬ ಅರಿವು ಹೊಂದಿರುವುದು ಮುಖ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇಂಗ್ಲೆಂಡಿನ ಇಯನ್ ವಿಲಿಯಮ್ಸನ್ ಅವರು ನೂತನ ಕಟ್ಟಡಕ್ಕೆ ಅವಶ್ಯವಿರುವ 17.50 ಲಕ್ಷ ರೂ. ವೆಚ್ಚದ ಪೀಠೊಪಕರಣಗಳನ್ನು ನೀಡಿ ಮಾತನಾಡಿದರು. ಇಂತಹ ಶಾಲೆಯಲ್ಲೇ ತಾನೂ ಶಿಕ್ಷಣ ಪಡೆದಿದ್ದೇನೆ, ಭಾರತ ದೇಶದಲ್ಲಿ ಸುತ್ತಾಡಿದ್ದೇನೆ, ಅತ್ಯಂತ ಸಂತೋಷದ ವಾತಾವರಣ ಇಲ್ಲಿದೆ ಎಂದರು.
ವಿದ್ಯಾಂಗ ಉಪನಿರ್ದೇಶಕ ವೈ. ಶಿವರಾಮಯ್ಯ ಅವರು ಅಜಿತ್ ಕುಮಾರ್ ರೈ ಅವರಿಂದ ಕಟ್ಟಡ ಕೀಲಿಕೈ ಪಡೆದು, ಮಾತನಾಡಿ ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪೈ ಅವರ ಅಪೇಕ್ಷೆಯಂತೆ ಇದೇ ಶಾಲೆಯನ್ನು ಪ್ರೌಢಶಾಲೆಯನ್ನಾಗಿಸುವ ಪ್ರಯತ್ನ ಮಾಡಲಾಗುವುದು. ಸರಕಾರಿ ಶಾಲೆಯಲ್ಲಿ ಎಲ್ಲ ಸೌಲಭ್ಯಗಳನ್ನು ನೀಡಿದರೂ ಏನೋ ಕೊರತೆಯಿದೆ ಎಂದು ಜನ ಭಾವಿಸುತ್ತಾರೆ. ಆದರೆ ನಾಗರಿಕರ, ಪೋಷಕರ, ಹಳೆ ವಿದ್ಯಾರ್ಥಿಗಳ ಸಹಕಾರವಿದ್ದಾಗ ಅದನ್ನೆಲ್ಲ ನೀಗಿಸಲು ಸಾಧ್ಯ. ವಿಟ್ಲ ಶಾಲೆಯು ಎಲ್ಲ ಶಾಲೆಗಳಿಗೆ ಮಾದರಿಯಾಗಿದೆ ಎಂದರು.
ಅರುಣ ಕುಮಾರ್ ರೈ, ತುಮಕೂರು ಯೂನಿಯನ್ ಕ್ರಿಶ್ಚನ್ ಕಾಲೇಜು ಉಪನ್ಯಾಸಕಿ ಡಾ| ಆರತಿ ಜೆ. ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಎನ್. ಅವರು ಭಾಗವಹಿಸಿದ್ದರು. ಇದೇ ಸಂದರ್ಭ ಎಂಜಿನಿಯರ್ ರಾಘವೇಂದ್ರ ಪೈ ಅವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸಲಹೆಗಾರ ಎಂ. ಅನಂತಕೃಷ್ಣ ಹೆಬ್ಟಾರ್ ಅವರು ಪ್ರಸ್ತಾವನೆಗೈದರು. ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪೈ ಸ್ವಾಗತಿಸಿದರು. ಶಿಕ್ಷಕಿ ರಮಾ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಬಿ. ವಂದಿಸಿದರು.