Advertisement

ಕುರುಗೋಡು: ಹಳೆ ಶಾಲೆ ಕಟ್ಟಡ ಕುಸಿತ: ಅಪಾಯದಿಂದ ಪಾರಾದ ಮಕ್ಕಳು!

01:10 PM Aug 22, 2022 | Team Udayavani |

ಕುರುಗೋಡು: 1943 ರಲ್ಲಿ ನಿರ್ಮಾಣಗೊಂಡಿದ್ದ ಕಲ್ಲುಕಂಭ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡದ ಮೇಲ್ಚಾವಣಿ ಕಳೆದ ಎರಡು-ಮೂರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿರುವ ಘಟನೆ ನಡೆದಿದೆ.

Advertisement

ಇದೇ ಕಟ್ಟಡದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದು, ಮಕ್ಕಳು ಹೊರಗಡೆ ಹೋದ ಸಂದರ್ಭ ಕಟ್ಟಡ ಬಿದ್ದಿದ್ದರಿಂದ ಅದೃಷ್ಟವಶಾತ್ ಭಾರಿ ಪ್ರಮಾಣದ ಅನಾಹುತ ತಪ್ಪಿದೆ. ಕಳೆದ ಕೆಲ ದಿನಗಳ ಹಿಂದೆ ವಾರ ಪೂರ್ತಿ ಸುರಿದ ಮುಂಗಾರು ಜಿಟಿ ಜಿಟಿ ಮಳೆ ಪರಿಣಾಮ ಹಳೆ ಕಟ್ಟಡದ ಮೇಲ್ಚಾವಣಿ ಶಿಥಿಲಗೊಂಡು ಕುಸಿದಿದೆ.

ಈಗಾಗಲೇ ಸರಕಾರದಿಂದ ಡಿಎಂಎಪ್ ಯೋಜನೆ ಅಡಿಯಲ್ಲಿ ಶಾಲೆ ಕಟ್ಟಡ ದುರಸ್ತಿಗೆ ಅನುದಾನ ಬಿಡುಗಡೆಗೊಂಡಿದ್ದು, ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ದುರಸ್ತಿ ಕಾರ್ಯಕ್ಕೆ ಮುಂದಾಗದ ಕಾರಣ ಮೇಲ್ಚಾವಣಿ ಕುಸಿದಿದೆ. ಸರಕಾರಿ ಶಾಲೆ ಮೇಲ್ಚಾವಣಿ ಕುಸಿದ ಪರಿಣಾಮ ವಿದ್ಯಾರ್ಥಿಗಳಲ್ಲಿ ಭೀತಿ ಎದುರಾಗಿದೆ.

ಕಲ್ಲಕಂಭ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಒಟ್ಟು 203 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದು, 5 ಜನ ಖಾಯಂ ಶಿಕ್ಷಕರು, 3 ಜನ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಮುಖ್ಯ ಶಿಕ್ಷಕರು ಇಲ್ಲದ ಕಾರಣ ಶಾಲೆಯ ಶಿಕ್ಷಕರೇ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.  ಶಾಲೆಯ ಹಳೆಯ ಕಟ್ಟಡ ಕುಸಿದ ಕಾರಣ ಪಕ್ಕದಲ್ಲಿರುವ ಇನ್ನೂ ಮೂರು ಕಟ್ಟಡಗಳು ಕೂಡ ಬಿರುಕು ಬಿಟ್ಟು ಅಲ್ಲಲ್ಲಿ ಶಿಥಿಲಗೊಂಡಿವೆ. ಇದರಿಂದ ಅ ಕಟ್ಟಡಗಳು ಕೂಡ ಯಾವ ಸಂದರ್ಭದಲ್ಲೂ ಕುಸಿದು ಬೀಳುವ ಸಂಭವ ಇರುವುದರಿಂದ ವಿದ್ಯಾರ್ಥಿಗಳನ್ನು ಹೊಸ ಕಟ್ಟಡಗಳಿಗೆ ಸ್ಥಳಾಂತರ ಮಾಡಲಾಗಿದೆ.

Advertisement

6 ಹೊಸ ಕಟ್ಟಡಗಳಿದ್ದು, ಇದರಲ್ಲಿ ಮೂರು ಚಿಕ್ಕದು ಹಾಗೂ ಮೂರು ದೊಡ್ಡ ಕಟ್ಟಡಗಳಿವೆ. ಇದರಲ್ಲಿ ಒಂದನ್ನು ಅಂಗನವಾಡಿ ಕೇಂದ್ರಕ್ಕೆ ಬಳಕೆ ಮಾಡಲಾಗುತ್ತಿದ್ದು, 5 ಕಟ್ಟಡಗಳಲ್ಲಿ 203 ವಿದ್ಯಾರ್ಥಿಗಳು ಪಾಠ ಕಲಿಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಹೆಚ್ಚು ವಿದ್ಯಾರ್ಥಿಗಳು ಇರುವುದರಿಂದ 5 ಕಟ್ಟಡಗಳಲ್ಲಿ ವಿದ್ಯಾಭ್ಯಾಸ ಪಡೆಯುವುದಕ್ಕೆ ತುಂಬಾ ತೊಂದರೆ ಆಗುತ್ತಿದ್ದು, ಹೆಚ್ಚುವರಿ ಕೊಠಡಿಗಳ ಅಗತ್ಯತೆಯ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾಯುತಿದ್ದಾರೆ. ಸುಮಾರು ವರ್ಷಗಳಿಂದ ಹಿಂದಿ ಮತ್ತು ಕನ್ನಡ ವಿಷಯಕ್ಕೆ ಶಿಕ್ಷಕರ ಕೊರತೆ ಕಾಡುತ್ತಿದ್ದು, ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು ಬೀಳುವಂತಾಗಿದೆ. ಇಂತಹ ಪರಿಸ್ಥಿತಿಯಿಂದ ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳು ನಶಿಸಿ ಹೋಗುವಂತಹ ಸನ್ನಿವೇಶಗಳು ಮೇಲ್ನೋಟಕ್ಕೆ ಕಾಣುತ್ತಿರುವುದು ದುರಂತದ ಸಂಗತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next