Advertisement

Pension: 2006ರ ಹಿಂದೆ ನೇಮಕ ಆದವರಿಗೆ ಹಳೆಯ ಪಿಂಚಣಿ

01:31 AM Jan 25, 2024 | Team Udayavani |

ಬೆಂಗಳೂರು: ರಾಜ್ಯದ ಸರಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ ಯೊಂದು ಲಭಿಸಿದೆ. ರಾಜ್ಯದಲ್ಲಿ 2006ರ ಎಪ್ರಿಲ್‌ ಒಂದಕ್ಕಿಂತ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ, ಆ ದಿನಾಂಕದಂದು ಅಥವಾ ಅನಂತರದಲ್ಲಿ ರಾಜ್ಯ ಸರ ಕಾರದ ಸೇವೆಗೆ ಸೇರಿದ ಸಿಬಂದಿಗೆ ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್‌)ಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ರಾಜ್ಯ ಸರಕಾರ ನೀಡಿದೆ.

Advertisement

ಸದ್ಯ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಯಡಿಯಲ್ಲಿರುವ ಈ ಸಿಬಂದಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಬಯಸಿದಲ್ಲಿ ತಮ್ಮ ಅಭಿಪ್ರಾಯವನ್ನು 2024ರ ಜೂನ್‌ 30ರೊಳಗೆ, ನಿಗದಿತ ನಮೂನೆಯಲ್ಲಿ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೇರ ವಾಗಿ ಸಲ್ಲಿಸಬೇಕು.

ಒಂದು ಬಾರಿ ಮಾತ್ರ ತಮ್ಮ ಆಯ್ಕೆಯನ್ನು ಸಲ್ಲಿಸಲು ಅವಕಾಶ ಇರುವುದಾಗಿ ಆರ್ಥಿಕ ಇಲಾಖೆಯ ಆಡಳಿತ ಮತ್ತು ಸಮನ್ವಯದ ಸರ್ಕಾರದ ಉಪ ಕಾರ್ಯದರ್ಶಿ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.

ಒಂದು ವೇಳೆ ಸಿಬಂದಿ ನಿಗದಿತ ದಿನಾಂಕದೊಳಗೆ ತಮ್ಮ ಇಚ್ಛೆಯನ್ನು ದಾಖಲಿಸದಿದ್ದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ನೌಕರರು ಹಳೆ ಪಿಂಚಣಿ ಆಯ್ಕೆ ಮಾಡಿಕೊಂಡಲ್ಲಿ ಅವರು ನಿಗದಿತ ಅರ್ಹತೆ ಹೊಂದಿರುವುದನ್ನು ಸಕ್ಷಮ ನೇಮಕಾತಿ ಪ್ರಾಧಿಕಾರ ಖಚಿತ ಪಡಿಸಿಕೊಂಡು 2024ರ ಜುಲೈ 31ರೊಳಗೆ ಹಿಂದಿನ ಪಿಂಚಣಿಗೆ ಒಳಪಡಿಸಲು ಇಲಾಖಾ ಮುಖ್ಯಸ್ಥರಿಗೆ ಪ್ರಸ್ತಾವನೆ ಸಲ್ಲಿಸಬೇಕು. 2024ರ ಆಗಸ್ಟ್‌ 31 ರೊಳಗೆ ಹಳೆ ಪಿಂಚಣಿ ವ್ಯವಸ್ಥೆಗೆ ಒಳಪಡುವ ಅರ್ಹನೌಕರರ ಪಟ್ಟಿಯನ್ನು ಆರ್ಥಿಕ ಇಲಾಖೆಯ ಅನುಮೋದನೆಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಹಾಗೆಯೇ 2006ರ ಎಪ್ರಿಲ್‌ ಒಂದರ ಪೂರ್ವದಲ್ಲಿ ಹೊರಡಿಸಲಾದ ಅಧಿಸೂಚನೆಯನ್ವಯ ಕರ್ತವ್ಯಕ್ಕೆ ಹಾಜರಾಗಿ, ಬಳಿಕ ಅನ್ಯ ಇಲಾಖೆಯಲ್ಲಿನ ಹುದ್ದೆಗೆ ನೇಮಕಾತಿ ಹೊಂದಿದ ನೌಕರರು ಹಳೆ ಪಿಂಚಣಿಗಾಗಿನ ತಮ್ಮ ಹಿಂದಿನ ನೇಮಕಾತಿ ಪ್ರಾಧಿಕಾರಕ್ಕೆ ಜೂನ್‌ 30ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

Advertisement

ರಾಜ್ಯದಲ್ಲಿ 2006ರ ಏಪ್ರಿಲ್‌ ಒಂದಕ್ಕಿಂತ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಸದ್ಯ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಇರುವ 11 ಸಾವಿರಕ್ಕಿಂತ ಹೆಚ್ಚು ಸಿಬ್ಬಂದಿಗಳಿದ್ದಾರೆ. ಕೇಂದ್ರ ಸರ್ಕಾರವು 2003ರ ಡಿ.22ರ ಮೊದಲು ನೇಮಕಾತಿ, ನೇಮಕಾತಿಗಾಗಿ ಜಾಹೀರಾತು ಹೊರಡಿಸಿದ್ದ ಹುದ್ದೆಗಳಿಗೆ ಇಂತಹದ್ದೇ ಅವಕಾಶ ನೀಡಿ ಆದೇಶಿಸಿತ್ತು. ಈಗ ರಾಜ್ಯ ಸರಕಾರವು ಇದೇ ಮಾದರಿಯನ್ನು ಅನುಸರಿಸಿದೆ.

13 ಸಾವಿರ ಕುಟುಂಬಗಳಿಗೆ ನೆಮ್ಮದಿ: ಸಿಎಂ
2006ರ ಅನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13 ಸಾವಿರ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ. ಚುನಾವಣೆಗೂ ಮುನ್ನ ಎನ್‌ಪಿಎಸ್‌ ನೌಕರರು ಮುಷ್ಕರದ ವೇಳೆ ಸ್ಥಳಕ್ಕೆ ಭೇಟಿ ನೀಡಿ ನಾವು ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೆ. ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ. ಈ ನಿರ್ಧಾರ 13 ಸಾವಿರ ಕುಟುಂಬಗಳಿಗೆ ನೆಮ್ಮದಿ ನೀಡಿದೆ ಎಂದು ಭಾವಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಏನಿದು ಆದೇಶ?
ರಾಜ್ಯದಲ್ಲಿ 2006ರ ಎ. 1ಕ್ಕಿಂತ ಮುನ್ನ ಆಯ್ಕೆ ಹೊಂದಿದವರಿಗೆ ಹಳೆಯ ಪಿಂಚಣಿಗೆ ಸೇರಿಕೊಳ್ಳಲು ಅವಕಾಶ.
ಜೂ.30ರೊಳಗೆ ಸಕ್ಷಮ ಪ್ರಾಧಿಕಾರಕ್ಕೆ ನೇರ ಅರ್ಜಿ ಸಲ್ಲಿಸಬೇಕು.
ಒಂದು ಬಾರಿ ಮಾತ್ರ ತಮ್ಮ ಆಯ್ಕೆಯನ್ನು ಸಲ್ಲಿಸಲು ಅವಕಾಶ
ಹಳೆಯ ಪಿಂಚಣಿ ಆಯ್ಕೆ ಮಾಡಿಕೊಳ್ಳದಿದ್ದಲ್ಲಿ, ರಾಷ್ಟ್ರೀಯ ಪಿಂಚಣಿಯೇ ಮುಂದುವರಿಕೆ

Advertisement

Udayavani is now on Telegram. Click here to join our channel and stay updated with the latest news.

Next