ಬೆಂಗಳೂರು: ಅಮಾನ್ಯೀಕರಣಗೊಂಡ ಹಳೆ ನೋಟುಗಳ ಬದಲಾವಣೆ ಹೆಸರಲ್ಲಿ ವಂಚನೆ ಜಾಲ ಇನ್ನೂ ಸಕ್ರಿಯವಾಗಿದ್ದು ಈ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ಮೂಲದ ಶೇಕ್ ತುಪೆಲ್ ಅಲಿ ಹಾಗೂ ಭುವನೇಶ್ವರಿ ನಗರದ ಮುದಾಸೀರ್ ನಜೀರ್ ಬಂಧಿತರು. ಆರೋಪಿಗಳಿಂದ ಅಮಾನ್ಯಗೊಂಡ 1000 ರೂ. ಮುಖ ಬೆಲೆಯ1 ಕೋಟಿ ರೂ. ಜಪ್ತಿ ಮಾಡಲಾಗಿದೆ. ಆರೋಪಿ ಮುದಾಸಿರ್ ಮನೆಯಲ್ಲಿ ಹಳೆ ನೋಟು ಇಟ್ಟುಕೊಂಡು ಕಮಿಷನ್ ಆಸೆಗೆ ವಿನಿಮಯ ಮಾಡುವದಂಧೆಯಲ್ಲಿ ತೊಡಗಿದ್ದ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ
ಮುದಾಸಿರ್‌ನನ್ನು ಬಂಧಿಸಿ ಆತನ ಮನೆಯಲ್ಲಿದ್ದ ಅಮಾನ್ಯಗೊಂಡ 80 ಲಕ್ಷ ರೂ. ಜಪ್ತಿ ಮಾಡಲಾಯಿತು. ಆತನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ವೀರಣ್ಣನ ಪಾಳ್ಯದಲ್ಲಿ ವಾಸವಿರುವ ಶೇಕ್ ತುಪೆಲ್ ಬಗ್ಗೆ ಮಾಹಿತಿ ನೀಡಿದ. ಹೀಗಾಗಿ ಆತನನ್ನೂ ಬಂಧಿಸಿ ಆತನ ಬಳಿಯಿದ್ದ 20 ಲಕ್ಷ ರೂ. ಜಪ್ತಿ ಮಾಡಲಾಗಿದೆ. ರೆಹಮಾನ್ ಎಂಬವನ ಬಳಿಯಿಂದ 2.5 ಲಕ್ಷ ರೂ. ನೀಡಿ ಅಮಾನ್ಯಗೊಂಡ ನೋಟುಗಳ 1 ಕೋಟಿ ಪಡೆದಿರುವುದಾಗಿ ಆರೋಪಿ ಮುದಾಸೀರ್ ತಿಳಿಸಿದ್ದಾನೆ. ಮುದಾಸೀರ್ ಬಳಿಯಿಂದಆನೋಟು ಪಡೆದು ಕಮಿಷನ್ ಆಸೆಗೆ ನೇಪಾಳದ ಬ್ಯಾಂಕೊಂದರಲ್ಲಿ ಬದಲಾಯಿಸಿಕೊಡುವುದಾಗಿ ತಿಳಿಸಿದ್ದ ಎಂಬುದು ಇಬ್ಬರ ವಿಚಾರಣೆ ವೇಳೆ ಗೊತ್ತಾಗಿದೆ.
ಕಸ್ಟಡಿಗೆ ಆರೋಪಿಗಳು: ಆರೋಪಿಗಳು ಅಷ್ಟೊಂದು ಪ್ರಮಾಣದ ಹಣ ಹೇಗೆ ಸಂಗ್ರಹಿಸಿದ್ದರು ಎಂಬ ಬಗ್ಗೆ ಗೊಂದಲದ ಹೇಳಿಕೆ ನೀಡಿದ್ದಾರೆ. ನೇಪಾಳದಲ್ಲಿಯೂ ಅಮಾನ್ಯಗೊಂಡ ನೋಟುಗಳನ್ನು ಯಾವುದೇ ಬ್ಯಾಂಕ್ ಸ್ವೀಕರಿಸುವುದಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ, ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲು ಕಸ್ಟಡಿಗೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.