Advertisement

ಕಂಬ್ಳಿ ಹುಳದ ಪುರಾಣ

09:33 PM Oct 27, 2020 | Suhan S |

ನಾನು ಕುಂದಾಪುರದಿಂದ ಹೊರ್ಟು, ಕೋಟದಲ್ಲಿ ಬಸ್‌ ಇಂದ ಇಳ್ದೆ. ಕೋಟದಲ್ಲಿದ್ದ ಅಮ್ಮ, ಚಿಕ್ಕಮ್ಮ, ಅತ್ತೆ ಎಲ್ಲರನ್ನೂ ಕರೆದುಕೊಂಡು ಒಂದು ಕಾರ್ಯಕ್ರಮಕ್ಕೆ ಹೋಗ್ಬೇಕಿತ್ತು. ಹಾಗಾಗಿ ನಾನು ಕೋಟ ಬಸ್‌ಸ್ಟ್ಯಾಂಡ್‌ ಅಲ್ಲಿ ಕಾಯ್ಬೇಕಾಯ್ತು. ತುಂಬಾ ಬಿಸ್ತು ಇದ್ದಿದ್ರಿಂದ ಬಸ್‌ ಸ್ಟ್ಯಾಂಡ್‌ ಅಲ್ಲಿರೋ ಬೆಂಚ್‌ ಮೇಲೆ ಕೂತ್ಕೊಂಡೆ.

Advertisement

ಕೂಡ್ಲೇ ಅಲ್ಲೇ ನಿಂತಿದ್ದ ಒಬ್ರು- “ಪುಟ್ಟಿ, ಅಲ್ಲಿ ಕೂತ್ಕೋಬೇಡ, ಕಂಬ್ಳಿ ಹುಳ ಇದೆ’ ಅಂದ್ರು. “ಓಹ್‌! ಹೌದಾ?’ ಅಂತ ಹೇಳಿ, ಇಲ್ಲೇ ಎಲ್ಲೋ ಇದ್ಯೇನೋ ಅನ್ಕೊಂಡು, ನೋಡ್ಲಿಕ್ಕೂ ಹೋಗ್ದೆ, ಅಲ್ಲಿಂದ ಎದ್ದು ಬಂದು ನಿತ್ಕೊಂಡೆ. ಅಷ್ಟರಲ್ಲೇ ಅಲ್ಲೇ ಇರೋ ಅಂಗ್ಡಿಯೋರು, ಪುಟ್ಟಾ, ಪ್ಯಾಂಟ್‌ ಮೇಲೆ ಕಂಬ್ಳಿ ಹುಳ ಇದೆ ನೋಡು ಅಂದ್ರು. ಅವ್ರು ಹೇಳಿದ್ದೇ ತಡ, ಎದ್ನೋ ಬಿದ್ನೋ ಅಂತ ಪ್ಯಾಂಟ್‌ ಕೊಡವಲಿಕ್ಕೆ ಶುರು ಮಾಡಿದೆ.

ಅಂತೂ ಕಂಬ್ಳಿಹುಳ ಕೆಳಗ್‌ ಬಿತ್ತು. ಈ ರಗ್ಳೆ ಬೇಡ ಅಂತ ಅಲ್ಲಿಂದಾಚೆ ಬಂದು ಬಿಸ್ಲಲ್ಲಿ ನಿಂತ್ಕೊಂಡೆ. ಆನಂತರ ಸುಮ್ಮನೇ ಒಮ್ಮೆ ಬಸ್‌ ಸ್ಟ್ಯಾಂಡ್ ನೋಡ್ತೀನಿ, ಪುಟ್‌ ಪುಟ್ಟ ಕಂಬ್ಳಿಹುಳಗಳು. 1-2 ಅಲ್ಲಾ ರೀ.. ಬಸ್‌ ಸ್ಟ್ಯಾಂಡ್‌ ತುಂಬಾ! ಚಿಕ್ದಾಗಿ, ಬಿಳಿಯಾಗಿ ಇರೋದ್ರಿಂದ ಅವು ಕೂಡ್ಲೇ ಕಣ್ಣಿಗೆ ಕಾಣ್ಸೋದು ಇಲ್ಲ! (ಬ್ಲ್ಯಾಕ್‌ ಕಲರ್‌ ಪ್ಯಾಂಟ್‌ ಹಾಕೊಂಡ್‌ ಬಂದಿದ್ದು ಸಾರ್ಥಕ ಆಯ್ತು ಅನ್ಸಿದ್ದು ಮಾತ್ರ ಸುಳ್ಳಲ್ಲ). ಅಲ್ರೀ ನಂಗೆ ಕನ್ಸಾ ಬಿದ್ದಿರತ್ತೆ?! ಈ ರೇಂಜ್‌ಗೆ ಇಲ್ಲಿ ಕಂಬ್ಳಿಹುಳಗಳಿರ್ತಾ ವಂತ!! ಈ ಕಿರಿಕಿರಿಯೊಳ್ಗೆ ಅಮ್ಮಂಗೆ 2-3 ಸಲ ಕಾಲ್‌ ಮಾಡಿ- ನೀನ್‌ ಬೇಗ ಬರ್ತೀಯ ಅಥ್ವಾ ನಾನೇ ಮನೆಗ್‌ ಬರ್ಲಾ ಅಂತ ಬೈಯ್ದಿದ್ದೂ ಆಯ್ತು. ಅಂತೂ ಕೊನೆಗೆ 3 ಜನಾನೂ ಬಂದ್ರು. ಅಲ್ಲೇ ಇರೋ ರಿಕ್ಷಾ ಹತ್ತಿ ಕೂತ್ಕೊಂಡ್‌ ಕೂಡ್ಲೇ ನಮ್ಮನೆಯವ್ರು ಒಬ್ರೊಬ್ರೆಬ್ರೆ ಡ್ರೈವರ್‌ನ ಕೇಳ್ಳೋಕ್‌ ಶುರುಮಾಡಿದ್ರು. “ಸಿಕ್ಕಾಪಟ್ಟೆ ಕಂಬ್ಳಿಹುಳ ಅಂತೆ! ‘

“ಹೌದಮ್ಮ, ಹಿಂದೆ ಅರಳಿಮರ ಅರ್ಧಂಬರ್ಧ ಕಡಿªರೋದ್ರಿಂದ ಅಲ್ಲಿದಾವೆ. ಅವು ಶೀಟ್‌ ಮೇಲೆ ಬೀಳ್ತವೆ. ಈಗ ಬಿಸ್ತು ಜಾಸ್ತಿ ಆಗಿರೋದ್ರಿಂದ ಶೀಟ್‌ ಇಂದ ಕೆಳಗೆ ಬೀಳ್ತಿವೆ.’ “ಅದ್ಕೇನು ಹಾಕಿಲ್ವ?’ “2-3 ಸಲ ನಾವೆಲ್ಲ ಕ್ಲೀನ್‌ ಮಾಡಿದ್ವಿ, ಆದ್ರೆ ಏನೂ ಪ್ರಯೋಜನ ಆಗಿಲ್ಲ.’ “ಇಲ್ಬಂದು ಕೂತ್ಕೊಂಡೋರ್ದೇಲ್ಲಾ ಇದೇ ಕಥೆ ಅಲ್ವಾ?’ “ಹೌದು, ನಾವ್‌ ಆದಷ್ಟು ಹೇಳ್ತೀವಿ. ಇವ್ರಿಗೇನು ಹೇಳಿದೂಕೊಡ್ಲೇ ಎದ್ರು. ಆದ್ರೆ ನಿನ್ನೆ ಸಂಜೆ ಒಂದ್‌ ಗಮ್ಮತ್‌ ಆಗಿತ್ತು.’ “ಹೌದಾ? ಏನು?’ “ಒಂದ್‌ ಹುಡ್ಗಿ ನಿನ್ನೆ ಇಲ್ಬಂದು ಕೂತ್ಲು. ಅಂಗ್ಡಿಯೋರು, ರಿಕ್ಷಾದೋರು ಕರೆದರು. ಅವಳು ಇಯರ್‌ಫೋನ್‌ ಹಾಕ್ಕೊಂಡು ಕೂತಿದ್ಲು. ಹಾಗಾಗಿ ಯಾರ ಮಾತೂ ಆಕೆಗೆ ಕೇಳಿಸಿಲ್ಲ. ಕೂಡ್ಲೇ

ಹೊರಳು. ಆವಾಗ್ಲೂ ಕರೆದೀವಿ, ಕೈಸನ್ನೆ ಮಾಡಿದ್ವಿ. 10-12 ಹುಳಗಳು ಇದ್ದಿದ್ದು ಅವಳ ಅಂಗಿ ಮೇಲೆ. ಆದ್ರೆ ಅವ್ಳು ಈ ಲೋಕದಲ್ಲೇ ಇರ್ಲಿಲ್ಲ, ತಿರ್ಗಿನೂ ನೋಡ್ಡೆ ಹೋದ್ಳು ನಾವೂ ಎಷ್ಟು ಅಂತ ಕರ್ಯೋದು, ಸುಮ್ನಾದ್ವಿ. ಮನೆಗ್‌ ಹೋಗಿ ನೋಡ್ವಾಗ ಅವ್ಯವಸ್ಥೆ ಏನಾಗಿತ್ತೋ.’ ಇಷ್ಟರಲ್ಲಿ ನಾವ್‌ ಹೋಗ್ಬೇಕಾಗಿದ್‌ ಮನೆ ಬಂತು, ಇಳಿದ್ವಿ. ಊಟದ್ಮನೇಲಿ ನನ್‌ ವಿಷ್ಯ ಹೇಳಿ ನಮ್ಮನೆಯವ್ರು ನಕ್ಕಿದ್ದೂ ಆಯ್ತು. ಇದಾಗಿ 4-5 ತಿಂಗಾಳಾಯ್ತು. ಅಲ್ಲಿ ನಂತ್ರ ಏನ್ಮಾಡಿದ್ರು ಅಂತ ಗೊತ್ತಿಲ್ಲ. ಇವಾಗ್ಲೂ ನಂಗೆ “ಕೋಟ’ ಅಂದೂಕೊಡ್ಲೇ ನೆನ್ಗಾಗೋದೆ “ಕಂಬ್ಳಿಹುಳ’. ಮಧ್ಯ ರೋಡ್‌ ಅಲ್ಲಿ ಬೇಕಾದ್ರೆ ನಿಲ್ತಿನ್ರೀ, ಬಸ್‌ಸ್ಟ್ಯಾಂಡ್‌ಗೆ ಅಂತೂ ಹೋಗಲ್ಲ. ಇಲ್ಲಿಗೆ ಕಂಬ್ಳಿಹುಳದ ಪುರಾಣ ಮುಗೀತು.­

Advertisement

 

ಅರುಂಧತಿ, ಸಾಲಿಗ್ರಾಮ

Advertisement

Udayavani is now on Telegram. Click here to join our channel and stay updated with the latest news.

Next