ಶಿವಮೊಗ್ಗ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ವೃದ್ಧ ನಾಪತ್ತೆಯಾದಾಗ ಹುಡುಕಾಡಿದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ನೀಡಿದ ಉತ್ತರ “ಅವರು ಎರಡು ದಿನದ ಹಿಂದೆಯೇ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯೂ ಆಗಿದೆ” ಎಂದು! ಈ ಘಟನೆ ನಡೆದಿದ್ದು ಶಿವಮೊಗ್ಗದಲ್ಲಿ.
ಏನಿದು ಘಟನೆ
ಉಸಿರಾಟದ ತೊಂದರೆಯಿದ್ದ ಹಿನ್ನೆಲೆಯಲ್ಲಿ ಮಹಾದೇವಪ್ಪ ಎಂಬ ವೃದ್ಧರನ್ನ ಕುಟುಂಬದವರು ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಕೋವಿಡ್ ಟೆಸ್ಟ್ ನಲ್ಲಿ ಇವರಿಗೆ ಕೋವಿಡ್ ಸೋಂಕು ದೃಢವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಈ ಮಾಹಿತಿಯನ್ನು ಅಧಿಕಾರಿಗಳು ಮಹಾದೇವಪ್ಪ ಅವರ ಕುಟುಂಬಕ್ಕೆ ತಿಳಿಸಿರಲಿಲ್ಲ.
ನಂತರ ವಿಷಯ ತಿಳಿದು ಮೆಗ್ಗಾನ್ ಆಸ್ಪತ್ರೆಗೆ ಆಗಮಿಸಿದ ಕುಟುಂಬಿಕರು ಮಹಾದೇವಪ್ಪ ಬಗ್ಗೆ ವಿಚಾರಿಸಿದರೆ, ಆಸ್ಪತ್ರೆ ಸಿಬ್ಬಂದಿ ಮಾತ್ರ ಈ ಹೆಸರಿನವರು ಯಾರೂ ಇಲ್ಲ ಎಂದು ಕಳುಹಿಸಿದ್ದರು.
ಇದರಿಂದ ಕಂಗಾಲಾದ ಮಹಾದೇವಪ್ಪ ಕುಟುಂಬದವರು ವೃದ್ಧನಿಗಾಗಿ ಬಹಳಷ್ಟು ಹುಡುಕಾಡಿದರು. ಶಿಕಾರಿಪುರ ಆಸ್ಪತ್ರೆಯಲ್ಲಿ ಕೇಳಿದರೆ ಮೆಗ್ಗಾನ್ ಗೆ ಕರೆದುಕೊಂಡು ಹೋಗಿದ್ದಾರೆ ಎನ್ನುತ್ತಾರೆ, ಮೆಗ್ಗಾನ್ ಗೆ ಹೋದರೆ ಇಲ್ಲಿ ಯಾರೂ ಇಲ್ಲ ಎನ್ನುತ್ತಾರೆ. ಹೀಗೆ ಮೂರ್ನಾಲ್ಕು ದಿನ ಮೆಗ್ಗಾನ್ ಆಸ್ಪತ್ರೆಗೆ ಅಲೆದಾಡಿದರೂ ಯಾವುದೇ ಮಾಹಿತಿ ಸಿಗದಿದ್ದಾಗ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದಾರೆ,
ಮೃತ ವೃದ್ಧನ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಲು ಹೋದಾಗ ಎರಡು ದಿನದ ಹಿಂದೆ ವೃದ್ಧರು ಮೃತಪಟ್ಟಿದ್ದು ಅವರ ಅಂತ್ಯಕ್ರಿಯೆಯೂ ನಡೆದಿದೆ ಎಂದು ತಿಳಿದುಬಂದಿದೆ.
ಇದರಿಂದ ಆಕ್ರೋಶಗೊಂಡ ಕುಟುಂಬಿಕರು ಪ್ರಶ್ನಿಸಿದಾಗ, ಮಹಾದೇವಪ್ಪ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಾಗ ಅವರ ಜೊತೆ ಆಸ್ಪತ್ರೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಅವರನ್ನು ನಾವೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದೆವು. ಬಳಿಕ ಅವರ ಕುಟುಂಬದವರಿಗೆ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಹಾಗಾಗಿ ಅವರ ವಿರುದ್ಧ ಅಂದೇ ದೂರು ದಾಖಲಿಸಿದ್ದೇವೆ. ಎರಡು ದಿನದ ಹಿಂದೆ ಸೋಂಕಿನಿಂದ 90 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಅವರೇ ಮಹಾದೇವಪ್ಪನವರಾ ಅಥವಾ ಬೇರೆಯವರಾ ಎಂಬುದನ್ನು ಪರಿಶೀಲಿಸುತ್ತೇವೆ ಎನ್ನುತ್ತಿದ್ದಾರೆ ಆರೋಗ್ಯ ಅಧಿಕಾರಿಗಳು.