Advertisement

ಫೇಸ್‌ಬುಕ್‌ ಗೆಳೆಯನನ್ನು ನಂಬಿ 2 ಕೋ.ರೂ. ಕಳೆದುಕೊಂಡ ವೃದ್ಧ

04:39 PM Aug 15, 2017 | Team Udayavani |

ಮುಂಬಯಿ: ಆನ್‌ಲೈನ್‌ ವಂಚನೆ ಕುರಿತು ಎಷ್ಟೇ ಅರಿವು ಮೂಡಿಸಿದರೂ ದಿಢೀರ್‌ ಶ್ರೀಮಂತರಾಗುವ ಹುಚ್ಚಿನಲ್ಲಿ  ಮೋಸ ಹೋಗುವುದು ನಿಂತಿಲ್ಲ. ಬಾಂದ್ರದ 72 ವರ್ಷದ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಗೆಳೆಯನ ಮೋಸದಿಂದಾಗಿ 2 ಕೋ. ರೂ. ಕಳೆದುಕೊಂಡಿದ್ದಾರೆ. 

Advertisement

ಅಫ್ಘಾನಿಸ್ಥಾನದಲ್ಲಿ ಕರ್ತವ್ಯದಲ್ಲಿರುವ ಅಮೆರಿಕದ ಸೇನಾ ಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನಿಂದ ಈ ವೃದ್ಧರಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಕ್ವೆಸ್ಟ್‌ ಬಂದಿತ್ತು. ಆರಂಭದಲ್ಲಿ ಮಾಮೂಲು ಸಂದೇಶ ರವಾನೆಗೆ ಸೀಮಿತವಾಗಿದ್ದ ಅವರ ಸ್ನೇಹ ದಿನ ಕಳೆದಂತೆ ಗಾಢವಾಯಿತು. ಅಫ್ಘಾನಿಸ್ಥಾನದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿವೆ. ನೀವೂ ಒಂದಿಷ್ಟು ಹಣ ಹಾಕಿ ನಾನೂ ಹಾಕುತ್ತೇನೆ. ಅನಂತರ ಇಬ್ಬರಿಗೂ ಧಾರಾಳ ಲಾಭ ಸಿಗಲಿದೆ ಎಂದು ಈ ವ್ಯಕ್ತಿ ಂದು ದಿನ ಹೇಳಿದ. ಅವನ ಮಾತನ್ನು ನಂಬಿದ ವೃದ್ಧರು ಅವನು ಹೇಳಿದ ಖಾತೆಗಳಿಗೆಲ್ಲ ಹಣ ಹಾಕುತ್ತಾ ಹೋದರು. ಈ ರೀತಿಯಾಗಿ ಅವರು 1.97 ಕೋ. ರೂ.ಗೆ ಪಂಗನಾಮ ಹಾಕಿಸಿಕೊಂಡಿದ್ದಾರೆ. 

ಮೋಸ ಹೋದದ್ದು ತಿಳಿದ ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಬೆಚ್ಚಿ ಬೀಳಿಸುವ ವಂಚನಾ ಜಾಲದ ಸುಳಿವುಗಳು ಸಿಕ್ಕಿವೆ. ಅಮೆರಿಕದ ಸೇನಾಧಿಕಾರಿ ಎಂದು ಹೇಳಿಕೊಂಡವ ಒಬ್ಬ ವ್ಯಕ್ತಿಯಾಗಿರಲಿಲ್ಲ ಬದಲಾಗಿ ಒಂದು ಮೋಸಗಾರರ ತಂಡವಾಗಿತ್ತು. ದಿಲ್ಲಿಯಿಂದ ಕಾರ್ಯಾಚರಿಸುತ್ತಿರುವ ಈ ತಂಡದ ಮಂಗಲ್‌ ಬಿಷ್ಣೋಯ್‌, ಅಮಿತ್‌ ಅಗರ್ವಾಲ್‌, ಸಮೀರ್‌ ಮರ್ಚಂಟ್‌ ಅಲಿಯಾಸ್‌ ಕರಣ್‌ ಶರ್ಮ, ಜಿತೇಂದ್ರ ರಾಠೊಡ್‌ ಮತ್ತು ಪರೇಶ್‌ ನಿಶದ್‌ ಎಂಬವರನ್ನು ಬಂಧಿಸಲಾಗಿದೆ.

ಈ ಗ್ಯಾಂಗ್‌ ಮುಂಬಯಿ ಮತ್ತು ದಿಲ್ಲಿಯಲ್ಲಿ 108 ಬ್ಯಾಂಕ್‌ ಖಾತೆಗಳನ್ನು ತೆರೆದಿದೆ. ಎಲ್ಲ ಖಾತೆಗಳಿಗೆ ನಕಲಿ ಪ್ಯಾನ್‌ ಕಾರ್ಡ್‌ಗಳನ್ನು ವಿಳಾಸದ ದಾಖಲೆ ಎಂದು ನೀಡ ಲಾಗಿತ್ತು. ನಕಲಿ ಪ್ಯಾನ್‌ಕಾರ್ಡ್‌ ಮಾಡಿಕೊಡುತ್ತಿದ್ದ ಮೀರಾ ರೋಡ್‌ನ‌ ನಯಾ ನಗರದ ಮೊಹಮ್ಮದ್‌ ಆರಿಫ್ ಶೇಕ್‌ ಎಂಬಾತನನ್ನು ಬಂಧಿಸಿದ್ದಾರೆ. ಅವನ ಕಚೇರಿಯಲ್ಲಿ 11 ನಕಲಿ ಪ್ಯಾನ್‌ ಕಾರ್ಡ್‌ಗಳು ಮತ್ತಿತರ ದಾಖಲೆಪತ್ರಗಳು ಪತ್ತೆಯಾಗಿವೆ. ನಕಲಿ ಪ್ಯಾನ್‌ಕಾರ್ಡ್‌ ತಯಾರಿಸುವುದರಲ್ಲಿ ಶೇಕ್‌ ಪರಿಣತನಾಗಿದ್ದ. 

ಈ ಖಾತೆಗಳಿಗೆ ಬಂದ ಹಣವನ್ನು ಆರೋಪಿಗಳು ತಕ್ಷಣ ಬೇರೆ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ದೇಶಾದ್ಯಂತ ಅವರ ಜಾಲ ಹರಡಿದೆ. ಈಗ ಸಿಕ್ಕಿಬಿದ್ದಿರುವುದಕ್ಕಿಂತಲೂ ಹೆಚ್ಚು ದುಷ್ಕರ್ಮಿಗಳು ಈ ಜಾಲದಲ್ಲಿ ಸಹಭಾಗಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next