ಬೆಂಗಳೂರು: ‘ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮಯ್ಯ ಅವರ ಮೇಲೆ ಲವ್ ಇದೆ. ಆದರೆ, ಹಳೆಯ ಹೀರೋ ಬಗ್ಗೆ ಈಗ ನೆನಪು ಮಾಡಿಕೊಳ್ಳಬಾರದು. ಹಳೆಯ ಲವ್ವರ್ ನೆನಪಾದರೂ ಬಹಿರಂಗವಾಗಿ ಮಾತನಾಡಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಸಲಹೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನನ್ನಷ್ಟು ಸಿದ್ದರಾಮಯ್ಯ ಅವರನ್ನು ಇಷ್ಟ ಪಡುವ ವ್ಯಕ್ತಿ ಯಾರೂ ಇಲ್ಲ. ಅವರು ಹಳೆಯ ಹೀರೋ. ಈಗ ನಾವೇ ಕುಮಾರಸ್ವಾಮಿಯವರನ್ನು ಹೊಸ ಹೀರೋ ಮಾಡಿದ್ದೇವೆ. ಹಳೆಯದನ್ನು ಮರೆತು ಐದು ವರ್ಷ ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕು. ಕೆಲವು ಸಿನಿಮಾಗಳು 10-15 ವಾರ ಓಡುತ್ತವೆ. ಜೆಡಿಎಸ್ ಜತೆಗೆ ನಮ್ಮದು ಐದು ವರ್ಷ ಕಾಂಟ್ರಾಕ್ಟ್ ಇದೆ. ಇದು ಐದು ವರ್ಷ ಓಡುತ್ತದೆ’ ಎಂದು ಹೇಳಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಸ್ವಲ್ಪ ತಾಳ್ಮೆ ವಹಿಸಿಕೊಳ್ಳಬೇಕು. ನಾನು ದೇವೇಗೌಡರ ಜತೆಗೆ ಕೆಲಸ ಮಾಡಿದ್ದೇನೆ. ದೇವೇಗೌಡರಂತೆ ಕುಮಾರಸ್ವಾಮಿ ಅವರಿಗೂ ತಾಳ್ಮೆ ಮುಖ್ಯ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಮೋದಿ, ಹೆಗಡೆಗೆ ವ್ಯಂಗ್ಯ: ಪ್ರಧಾನಿ ಮೋದಿಯವರೂ ಘೋದ್ರಾ ಘಟನೆಯಿಂದ ಮೇಲೆ ಬಂದವರು. ಅನಂತ ಕುಮಾರ್ ಹೆಗಡೆ ಪಾಕಿಸ್ತಾನದೊಂದಿಗೆ ಹಸ್ತಲಾಘವ ಮಾಡಿದರೆ ಕೈ ಕತ್ತರಿಸಿ ಎಂದು ಹೇಳಿದ್ದರು. ಪಾಕಿಸ್ತಾನದ ಪ್ರಧಾನಿ ಕರೆಯದಿದ್ದರೂ ಪ್ರಧಾನಿ ಮೋದಿ, ನವಾಜ್ ಷರೀಫ್ ಅವರನ್ನು ಅಪ್ಪಿಕೊಂಡು ದೇಶದ ಮರ್ಯಾದೆ ಕಳೆದು ಬಂದಿದ್ದರು. ಅವರನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಅನಂತಕುಮಾರ್ ಹೆಗಡೆ ಮೊದಲು ಹಿಂದೂ ಧರ್ಮವನ್ನು ಅರ್ಥ ಮಾಡಿಕೊಳ್ಳಲಿ, ಹಿಂದೂ ಧರ್ಮ ವಸುದೈವ ಕುಟುಂಬಕಂ, ಸರ್ವೇ ಜನಾಃ ಸುಖೀನೋ ಭವಂತು ಎಂದು ಹೇಳುತ್ತದೆ. ಅವರಿಗೆ ಹಿಂದೂ ಧರ್ಮದ ಬಗ್ಗೆ ಮುಸಲ್ಮಾನರು ಪಾಠ ಹೇಳುವಂತಾಗಬಾರದು ಎಂದು ಹೇಳಿದರು.