ಶಿರ್ವ: “ಕಾಲ ಸರಿಯಿಲ್ಲ ಕಣ್ರೀ.. ಹಿಂದಿನ ಕಾಲದಲ್ಲಿ ಅಪರಿಚಿತರು ಬಂದರೂ ಊಟ ಹಾಕಿಸಿ ಕಳುಹಿಸುತ್ತಿದ್ದೆವು, ಈಗ ನೀರು ಕೊಡಲು ಭಯವಾಗುತ್ತದೆ..” ಎನ್ನುವ ಮಾತುಗಳನ್ನು ನಾವು ಕೇಳಿರುತ್ತೇವೆ. ಇಂತಹುದೇ ಘಟನೆ ಶನಿವಾರ ನಡೆದಿದೆ. ಅದೂ ಉಡುಪಿ ಜಿಲ್ಲೆಯ ಶಿರ್ವ ಗ್ರಾಮದ ಬಂಟಕಲ್ಲು ಬಳಿ!
ಹೌದು, ಬಾಯಾರಿಕೆಯಾಗುತ್ತಿದೆ ನೀರು ಕೊಡಿ ಎಂದು ಒಬ್ಬಂಟಿ ಮಹಿಳೆಯ ಮನೆಗೆ ಬಂದ ಅಪರಿಚಿತನೋರ್ವ ಆಕೆಯ ಕತ್ತಿಗೆ ಕೈ ಹಾಕಿ ಚಿನ್ನದ ಸರವನ್ನು ದೋಚಿ ಪರಾರಿಯಾಗಿರುವ ಘಟನೆ ಬಂಟಕಲ್ಲು ದೇವಸ್ಥಾನದ ಬಳಿ ಶನಿವಾರ ಸಂಜೆ ನಡೆದಿದೆ.
ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಿವಾಸಿ ವಸಂತಿ (72 ವ) ಚಿನ್ನದ ಸರ ಕಳೆದುಕೊಂಡ ಮಹಿಳೆ. ಶನಿವಾರ ಸಂಜೆ 6.30ರ ಸುಮಾರಿಗೆ ಮನೆಯ ಬಳಿ ಬೈಕ್ ನಲ್ಲಿ ಬಂದ ಅಪರಿಚಿತ ವಸಂತಿ ಅವರ ಬಳಿ ಕುಡಿಯಲು ನೀರು ಕೊಡುವಂತೆ ಕೇಳಿದ. ವಸಂತಿ ಅವರು ನೀರು ತರಲು ಮನೆಯೊಳಗೆ ಹೋದಾಗ ಆಕೆಯನ್ನು ಹಿಂಬಾಲಿಸಿದ ಆತ ಮನೆಯೊಳಗೆ ಹೋಗಿ ಆಕೆಯ ಕುತ್ತಿಗೆಯಲ್ಲಿದ್ದ 36 ಗ್ರಾಂ ತೂಕದ 1.60 ಲಕ್ಷ ರೂ ಮೌಲ್ಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಬೇಡ ಬೇಡವೆಂದರೂ ಗಿಫ್ಟ್ ಕಳುಹಿಸಿ ಮಹಿಳೆಗೆ 14.91 ಲ.ರೂ. ವಂಚನೆ!
ವಂಚಕ ಕಪ್ಪು ಬಣ್ಣದ ಬೈಕ್ ನಲ್ಲಿ ಬಂದಿದ್ದು, ನೀಲಿ ಬಣ್ಣದ ಗೆರೆಗಳಿರುವ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಕಪ್ಪುಬಣ್ಣದ ಹೆಲ್ಮೆಟ್ ಧರಿಸಿದ್ದ.
ಸರ ಕಳೆದುಕೊಂಡ ವಸಂತಿ ಅವರು ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.