Advertisement
ಮಹೇಶ್ ಅವರದ್ದು ಒಂದು ಉದಾಹರಣೆ ಅಷ್ಟೇ. ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ದಂಡದ ಪ್ರಮಾಣವನ್ನು ಸಾಕಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಸಾವಿರಾರು ವಾಹನ ಸವಾರರಲ್ಲಿ ಈ ಪ್ರಶ್ನೆಗಳು ಎದ್ದಿವೆ. ಆದರೆ, ಇವುಗಳ ಬಗ್ಗೆ ಸಂಚಾರ ಪೊಲೀಸರಲ್ಲೇ ಗೊಂದಲ ಇದೆ! ಮದ್ಯ ಸೇವಿಸಿ ವಾಹನ ಚಾಲನೆ ಹೊರತುಪಡಿಸಿ (ಕೋರ್ಟ್‌ನಲ್ಲಿ ಪಾವತಿಸಬೇಕು) ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ, ತ್ರಿಬಲ್ ರೈಡಿಂಗ್, ಚಾಲನಾ ಪರವಾನಗಿ, ವಿಮೆ ಇಲ್ಲದಿರುವುದು, ಸಿಗ್ನಲ್ ಜಂಪ್ ಮಾಡುವುದು ಸೇರಿದಂತೆ ಲಕ್ಷಾಂತರ ಉಲ್ಲಂಘನೆ ಪ್ರಕರಣಗಳಲ್ಲಿ ಇನ್ನೂ ದಂಡ ಪಾವತಿ ಆಗಿಲ್ಲ.
Related Articles
Advertisement
ಸಾಫ್ಟ್ವೇರ್ ಅಪ್‌ಡೇಟ್ ಆಗಿಲ್ಲ: ಈ ಮಧ್ಯೆ ದಂಡ ಸಂಗ್ರಹಕ್ಕೆ ಬಳಸುವ ಪಿಡಿಎ(ಪರ್ಸನಲ್ ಡಿಜಿಟಲ್ ಅಸಿಸ್‌ಟೆನ್ಸ್)ಯಂತ್ರದ ಸಾಫ್ಟ್ವೇರ್ ಅಪ್‌ಡೇಟ್ ಆಗದ ಕಾರಣ ಜುಲೈ 20ರಿಂದಲೂ ಹಳೇ ದಂಡವನ್ನು ಸಂಗ್ರಹಿಸಲಾಗುತ್ತಿದೆ. ರಾಜ್ಯ ಸರ್ಕಾರ ಜುನ್ 25ರಂದು ಪರಿಷ್ಕೃತ ದರದ ಅಧಿಸೂಚನೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪಿಡಿಎ ಸಾಫ್ಟ್ವೇರ್ ಅಪ್‌ಡೇಟ್ ಮಾಡಿಕೊಳ್ಳುವ ಸಲುವಾಗಿ ಜುಲೈ 20ರಿಂದ ಹೊಸ ದರ ಅನ್ವಯ ಆಗಲಿದೆ ಎಂದು ಹೇಳದ್ದರು. ಆದರೂ ಇದುವರೆಗೂ ಸಾಫ್ಟ್ವೇರ್ ಅಪ್‌ಡೇಟ್ ಆಗಿಲ್ಲ.
ಬಹಳ ದಿನಗಳ ಹಿಂದೆಯೇ ಸಾಫ್ಟ್ವೇರ್ ಅಪ್‌ಡೇಟ್ ಮಾಡಲಾಗಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಪಿಡಿಎ ಯಂತ್ರ ಅದಕ್ಕೆ ಸ್ಪಂದಿಸುತ್ತಿಲ್ಲ. ಹೊಸ ಮೊತ್ತ ಉಲ್ಲೇಖೀಸಿದರೆ ರಿಜಕ್ಟ್ ಆಗುತ್ತಿದೆ. ಹೀಗಾಗಿ ಹಳೇ ಮೊತ್ತವನ್ನೇ ಸಂಗ್ರಹಿಸುತ್ತಿದ್ದು, ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯದಲ್ಲೇ ಸಾಪ್ಟ್ವೇರ್ ಅಪ್‌ಡೇಟ್ ಮಾಡಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದರು.
ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ: ಹೊಸ ನಿಯಮದ ಪ್ರಕಾರ ಶೇ.100ರಷ್ಟು ದಂಡದ ಮೊತ್ತ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಚಾಲನಾ ಪರವಾನಗಿ ಇಲ್ಲದೆ ಚಾಲನೆ ಮಾಡಿದರೆ 100 ರೂ. ಪಾವತಿಸಬೇಕಿತ್ತು. ಆದರೆ, ಪರಿಷ್ಕೃತ ದರದ ಪ್ರಕಾರ 1000 ರೂ. ಕಟ್ಟಬೇಕು. ಆದರೆ, ಸಾಫ್ಟ್ವೇರ್ ಅಪ್‌ಡೇಟ್ ಆಗದ ಕಾರಣ ಪ್ರತಿನಿತ್ಯ ದಾಖಲಾಗುವ ಸುಮಾರು 23 ಸಾವಿರ ಪ್ರಕರಣಗಳಿಗೆ 2 ಕೋಟಿ ರೂ.ಗೂ ಅಧಿಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಸಂಚಾರ ಪೊಲೀಸರಿಗೂ ಗೊಂದಲ – ಸವಾರರ ಜತೆ ವಾಗ್ವಾದ: ಸಂಚಾರ ಪೊಲೀಸರ ಪ್ರಕಾರ ಸುಮಾರು 30ಕ್ಕೂ ಹೆಚ್ಚು ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಳ್ಳಬಹುದು. ಆದರೆ, ಈ ಪ್ರಕರಣ ಪೈಕಿ ಯಾವುದಕ್ಕೆ ಪರಿಷ್ಕೃತ ದಂಡ ವಿಧಿಸಬೇಕು, ಯಾವುದಕ್ಕೆ ಹಳೇ ದಂಡ ಹಾಕಬೇಕು ಎಂಬ ಗೊಂದಲ ಸಂಚಾರ ಪೊಲೀಸರಲ್ಲೇ ಉಂಟಾಗಿದೆ. ಮತ್ತೂಂದೆಡೆ ನಿಯಮ ಉಲ್ಲಂಘನೆ ಮಾಡುತ್ತಿದ್ದಂತೆ ವಾಹನ ಸವಾರರನ್ನು ತಡೆದು ದಂಡ ಕಟ್ಟುವಂತೆ ಹೇಳುವ ಸಂಚಾರ ಪೊಲೀಸರ ಮೇಲೆ ಕೆಲ ವಾಹನ ಸವಾರರು ವಾಗ್ವಾದಕ್ಕೆ ಮುಂದಾದ ಘಟನೆಗಳು ಕಳೆದೆರಡು ದಿನಗಳಲ್ಲಿ ನಗರದಲ್ಲಿ ನಡೆದಿವೆ.
ಪರಿಷ್ಕೃತ ದರದ ಬಗ್ಗೆ ಮಾಹಿತಿ ಇಲ್ಲದ ವಾಹನ ಸವಾರರು ಈ ರೀತಿಯ ವರ್ತನೆ ತೋರುತ್ತಿದ್ದು, ಸರ್ಕಾರ ಹಾಗೂ ಸಂಚಾರ ವಿಭಾಗದಿಂದ ಹೊರಡಿಸಿರುವ ಹೊಸ ಆದೇಶವನ್ನು ತೋರಿಸಿದ ಬಳಿ ಸುಮ್ಮನಾಗುತ್ತಿದ್ದಾರೆ. ಮತ್ತೂಂದೆಡೆ ಸಾಫ್ಟ್ವೇರ್ ಅಪ್‌ಡೇಟ್ ಆಗದಿರುವುದು ದೊಡ್ಡ ತಲೆನೋವಾಗಿದೆ ಎನ್ನುತ್ತಾರೆ ಸಂಚಾರ ಪೊಲೀಸರು.
ಜುಲೈ 20ರಿಂದ ಮಾತ್ರ ಹೊಸ ಪರಿಷ್ಕೃತ ದರ ಅನ್ವಯ ಆಗಲಿದೆ. ಈ ಹಿಂದಿನ ಉಲ್ಲಂಘನೆಗೆ ಹಳೇ ಮೊತ್ತವನ್ನೇ ಪಾವತಿಸಬೇಕು. ಇದರಲ್ಲಿ ಯಾವುದೇ ಗೊಂದಲ ಇಲ್ಲ.-ಪಿ.ಹರಿಶೇಖರನ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ * ಮೋಹನ್ ಭದ್ರಾವತಿ