Advertisement

ನೋಟಿಸ್‌ ಪಡೆದವರಿಗೆ ಹಳೇ ದಂಡ!

12:20 AM Sep 28, 2019 | Team Udayavani |

ಬೆಂಗಳೂರು: ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ ದಂಡ ಪ್ರಮಾಣವನ್ನು ಸರ್ಕಾರ ಅರ್ಧಕ್ಕರ್ಧ ತಗ್ಗಿಸಿದೆ. ಇದರಿಂದ ಇಡೀ ರಾಜ್ಯದ ವಾಹನ ಸವಾರರು ಈಗ ನಿರಾಳರಾಗಿದ್ದಾರೆ. ಆದರೆ, ಅದೊಂದು ವರ್ಗಕ್ಕೆ ಮಾತ್ರ ಇನ್ನೂ ಈ ಹಿಂದಿನ ಭಾರಿ ಪ್ರಮಾಣದ ದಂಡವೇ ಅನ್ವಯಿಸುತ್ತದೆ. ಹಾಗಾಗಿ, ಅವರಿಗೆ ಸದ್ಯಕ್ಕೆ ನೆಮ್ಮದಿಯಿಲ್ಲ.

Advertisement

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಅಧಿಸೂಚನೆಯನ್ನು ಯಥಾವತ್ತಾಗಿ ಜಾರಿಗೊಳಿಸಿತ್ತು. ನಿಯಮ ಉಲ್ಲಂಘಿಸಿ, ದಂಡ ಪರಿಷ್ಕರಣೆಯಾದ ನಂತರ ಸಂಚಾರ ಪೊಲೀಸರಿಂದ ನೋಟಿಸ್‌ ಪಡೆದ ವಾಹನ ಸವಾರರೇ ಆ “ವಿಶೇಷ ವರ್ಗ’. ಹೀಗೆ ನೋಟಿಸ್‌ ಪಡೆದವರು ಸುಮಾರು 30 ಸಾವಿರಕ್ಕೂ ಅಧಿಕ ಜನರಿದ್ದಾರೆ. ಈಗ ಅವರು ಕೈ-ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಪೊಲೀಸರ ಕಣ್ತಪ್ಪಿಸಿ ಹೆಲ್ಮೆಟ್‌ ಮತ್ತು ಸೀಟ್‌ ಬೆಲ್ಟ್ ಹಾಕದಿರುವುದು, ಅತಿ ವೇಗ ಚಾಲನೆ, ಸಿಗ್ನಲ್‌ ಜಂಪ್‌, ಒನ್‌ವೇನಲ್ಲಿ ಸಂಚಾರ ಮಾಡಿ ಕ್ಯಾಮೆರಾ ಕಣ್ಣುಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಇಂತಹ ಸುಮಾರು 30 ಸಾವಿರ ಪ್ರಕರಣಗಳು ದಾಖಲಾಗಿದ್ದು, ಅದರ ದಂಡದ ಮೊತ್ತ ಅಂದಾಜು 37 ಲಕ್ಷ ರೂ. ಆಗಿದೆ. ಸೆ. 4ರಿಂದ ಸೆ. 21ರವರೆಗೆ 1,57,036 (ಎಲ್ಲ ರೀತಿಯ) ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1,18,830 ಪ್ರಕರಣಗಳಿಗೆ ಸ್ಥಳದಲ್ಲೇ ದಂಡ ಸಂಗ್ರಹಿಸಲಾಗಿದೆ.

ಸಿಸಿಟಿವಿ ಮಾತ್ರವಲ್ಲ ಆ್ಯಪ್‌ಗಳ ಮೂಲಕ, ಸ್ಥಳದಲ್ಲಿದ್ದ ಸಂಚಾರ ಪೊಲೀಸ್‌ ಮಾಹಿತಿ ಆಧರಿಸಿ ವಾಹನ ಸವಾರರಿಗೆ ದಂಡ ವಿಧಿಸುವ ನಿಯಮ ಚಾಲ್ತಿಯಲ್ಲಿದೆ. ಈ ಜಾರಿಯಾದ ನೋಟಿಸ್‌ ಪ್ರಕರಣಗಳೂ ಇದರಲ್ಲಿ ಸೇರಿವೆ. ಈ ರೀತಿಯ ಪ್ರಕರಣಗಳು ಕಳೆದ 17 ದಿನಗಳಲ್ಲಿ 37,206 ಪ್ರಕರಣಗಳು ದಾಖಲಾಗಿದ್ದು, ಅದರ ಮೊತ್ತ 37,997,000 ರೂ. ಎನ್ನಲಾಗಿದೆ.

ವಾಹನ ಸವಾರರ ಆಕ್ಷೇಪ: ನೋಟಿಸ್‌ ಪಡೆದ ಕೆಲ ವಾಹನ ಸವಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಸೆ. 3ರಿಂದ ಸೆ. 21ರ ಅವಧಿಯಲ್ಲೇ ಇರಬಹುದು. ಆದರೆ, ನೋಟಿಸ್‌ ತಲುಪಿರುವುದು ಅನಂತರದ ದಿನಗಳಲ್ಲಿ. ಹೀಗಾಗಿ ತಾವು ಹೊಸ ದಂಡವನ್ನೇ ಪಾವತಿಸುತ್ತೇವೆ ಎಂದಿದ್ದಾರೆ.

Advertisement

ಸಂಚಾರ ಪೊಲೀಸರ ಪ್ರಕಾರ ಇಂತಹ ಪ್ರಕರಣಗಳು ನಿತ್ಯ ಸಾವಿರಾರು. ಎಲ್ಲ ಪ್ರಕರಣಗಳಲ್ಲಿಯೂ ಅದೇ ದಿನ ನೋಟಿಸ್‌ ಜಾರಿ ಅಸಾಧ್ಯ. ಕೆಲ ವಾಹನ ಸವಾರರು ವಾಹನ ಖರೀದಿಸಿದಾಗ ಕಾಯಂ ವಿಳಾಸ ನೀಡದೆ ಹಾಲಿ ವಿಳಾಸ (ತಾತ್ಕಾಲಿಕ) ನೀಡುತ್ತಾರೆ. ಅಲ್ಲಿಗೆ ನೋಟಿಸ್‌ ನೀಡಿದರೆ, ಸಾಕಷ್ಟು ಬಾರಿ ವಾಪಸ್‌ ಬಂದಿವೆ. ಹೀಗಾಗಿ ಕಾಯಂ ವಿಳಾಸ ಪತ್ತೆಹಚ್ಚಿ ನೋಟಿಸ್‌ ಜಾರಿ ಮಾಡಬೇಕಾಗುತ್ತದೆ.

ಆದರೆ, ನಿಯಮ ಉಲ್ಲಂಘನೆ ಮಾಡಿದ ದಿನಾಂಕದಲ್ಲಿ ಯಾವ ದಂಡ ಜಾರಿಯಲ್ಲಿರುತ್ತದೆಯೋ ಅದನ್ನೇ ಪಾವತಿಸಬೇಕು. ಒಂದು ವೇಳೆ ಸೂಚಿಸಿದ ದಿನದೊಳಗೆ ದಂಡ ಪಾವತಿಸದಿದ್ದರೆ, ಅಂಥ ವಾಹನಗಳ ಸಂಖ್ಯೆಯನ್ನು ದಂಡ ಸಂಗ್ರಹಿಸುವ ಪಿಡಿಎ ಯಂತ್ರದಲ್ಲಿ ದಾಖಲಿಸಲಾಗುತ್ತದೆ. ಆ ವಾಹನ ಸವಾರ ನೇರವಾಗಿ ಸಿಕ್ಕಿಬಿದ್ದರೆ, ಹಳೇ ದಂಡ ಪಾವತಿ ಕಡ್ಡಾಯ ಎನ್ನುತ್ತಾರೆ ಸಂಚಾರ ಪೊಲೀಸರು.

ಪ್ರಕರಣಗಳ ಸಂಖ್ಯೆ ಕಡಿಮೆ: ಭಾರಿ ದಂಡಕ್ಕೆ ಆತಂಕಗೊಂಡಿರುವ ವಾಹನ ಸವಾರರು ಜಾಗೃತರಾಗುವುದರ ಜತೆಗೆ ನಿಯಮ ಪಾಲನೆಗೆ ಮುಂದಾಗಿದ್ದಾರೆ. ಸಂಚಾರ ಪೊಲೀಸರೇ ಹೇಳುವಂತೆ, ಪರಿಷ್ಕೃತ ದಂಡ ಜಾರಿ ಬಳಿಕ ನಾಲ್ಕೈದು ದಿನಗಳ ಕಾಲ ವಾಹನ ಸವಾರರು ಆಕ್ಷೇಪ ವ್ಯಕ್ತಪಡಿಸಿದರೂ, ಅನಂತರ ಬದಲಾಗಿದ್ದಾರೆ. ಹೀಗಾಗಿ ಶೇ.40-45 ಪ್ರಕರಣಗಳು ಕಡಿಮೆಯಾಗುತ್ತಿವೆ. ಪ್ರಮುಖವಾಗಿ ಹೆಲ್ಮೆಟ್‌ ಧರಿಸುವುದು, ಮದ್ಯ ಸೇವಿಸಿ ವಾಹನ ಚಾಲನೆ, ಅಧಿಕೃತ ದಾಖಲೆಗಳ ಕೊಂಡೊಯ್ಯುವುದು ನಗರ ಪ್ರದೇಶದಲ್ಲಿ ಕಂಡು ಬಂದಿದೆ. ಇನ್ನು ಗ್ರಾಮಾಂತರ ಪ್ರದೇಶದಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ದಂಡ ಕಟ್ಟಲು ಸಂಚಾರ ಪೊಲೀಸರ ಜತೆ ವಾಗ್ವಾದ ನಡೆಸುತ್ತಿದ್ದಾರೆ.

ಮಂದಗತಿಯ ಪಿಡಿಎ ಯಂತ್ರ: ನಗರ ಸಂಚಾರ ಪೊಲೀಸರು ದಂಡ ವಿಧಿಸಲು ಬಳಸುವ ಪಿಡಿಎ(ಪರ್ಸನಲ್‌ ಡಿಜಿಟಲ್‌ ಅಸಿಸ್‌ಟೆನ್ಸ್‌)ಯಂತ್ರದ ನಿರ್ವಹಣೆ ಹೊಣೆಯನ್ನು “ಟೆಲಿಬ್ರಹ್ಮ’ ಕಂಪನಿಗೆ ನೀಡಲಾಗಿದೆ. ಹೀಗಾಗಿ ಅಪ್‌ಡೇಟ್‌ ಮಾಡಲು ಯಾವುದೇ ಹಣ ಖರ್ಚಾಗುವುದಿಲ್ಲ. ಬದಲಿಗೆ ಒಮ್ಮೆ ಅಪ್‌ಡೇಟ್‌ ಮಾಡಲು ಕನಿಷ್ಟ ಒಂದೂವರೆ ದಿನ ಬೇಕಾಗಿದೆ. ಕೆಲವೊಮ್ಮೆ ಸರ್ವರ್‌ ನಿಧಾನವಾದರೆ ಹೆಚ್ಚುವರಿ ಒಂದು ದಿನ ತೆಗೆದುಕೊಳ್ಳುತ್ತದೆ. ಹೀಗಾಗಿ, ಪರಿಷೃತ ಜಾರಿಯಾದ(ಸೆ.3ರಿಂದ) ಕಳೆದ 22 ದಿನಗಳಲ್ಲಿ ನಾಲ್ಕೈದು ಬಾರಿ ಅಪ್‌ಡೇಟ್‌ ಮಾಡಲಾಗಿದೆ.

ಜತೆಗೆ ನೋಟಿಸ್‌ ಜಾರಿ ಮಾಡಿದರೂ ದಂಡ ಪಾವತಿಸದ ಮಾಹಿತಿಯನ್ನು ಅಲ್ಲಿಯೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಸೇರಿ ಮೇಲ್ದರ್ಜೆಯಲ್ಲಿರುವ ಅಧಿಕಾರಿಗಳಿಗೆ ಮಾತ್ರ ಪಿಡಿಎ ಯಂತ್ರದ ಮೂಲಕ ದಂಡ ವಿಧಿಸುವ ಅಧಿಕಾರವಿದೆ. ಹೀಗಾಗಿ ನಗರದಲ್ಲಿರುವ 44 ಸಂಚಾರ ಠಾಣೆಗಳಲ್ಲಿ 600 ಪಿಡಿಎ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ.

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next