Advertisement

ಬಸ್‌ ರಿಪೇರಿಗೆ ಹಳೇ ಕಾಲದ ಪದ್ಧತಿ

11:43 AM Sep 20, 2017 | |

ಬೆಂಗಳೂರು: ನಗರದ ನಾಗರಿಕರ ಆರಾಮದಾಯಕ ಪ್ರಯಾಣಕ್ಕಾಗಿ ಬಿಎಂಟಿಸಿಯ ಅತ್ಯಾಧುನಿಕ ಬಸ್‌ಗಳು ರಸ್ತೆಗಿಳಿದಿವೆ. ಆದರೆ, ಅವುಗಳ ರಿಪೇರಿಗೆ ಸೂಕ್ತ ವ್ಯವಸ್ಥೆಯೇ ಇಲ್ಲ. ಈ ಅಸಮರ್ಪಕ ನಿರ್ವಹಣೆಯಿಂದ ಬಸ್‌ ಪ್ರಯಾಣ ಪ್ರಯಾಣಿಕರಿಗೆ ತೊಂದರೆಯಾಗಿ ಪರಿಣಮಿಸಿದೆ. 

Advertisement

ದೇಶದಲ್ಲೇ ಅತಿ ಹೆಚ್ಚು ಮತ್ತು ಅತ್ಯಾಧುನಿಕ ಬಸ್‌ಗಳನ್ನು ಹೊಂದಿರುವ ಹೆಗ್ಗಳಿಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯದ್ದು. ಅಷ್ಟೇ ಅಲ್ಲ, ಆ ಎಲ್ಲ ಬಸ್‌ಗಳು ಎಲ್ಲೆಲ್ಲಿ ಯಾವ ವೇಗಮಿತಿಯಲ್ಲಿ ಸಾಗುತ್ತಿವೆ ಎಂಬುದನ್ನು ಕುಳಿತಲ್ಲಿಂದಲೇ ನೋಡುವ “ಚತುರ ಸಾರಿಗೆ ವ್ಯವಸ್ಥೆ’ಯನ್ನೂ ನಿಗಮ ಹೊಂದಿದೆ. ಆದರೆ, ಆ ಬಸ್‌ ಯಾವ ಸ್ಥಿತಿಯಲ್ಲಿದೆ ಎಂಬುದರ ನಿಖರ ಮಾಹಿತಿ ಮಾತ್ರ ಲಭ್ಯವಿಲ್ಲ!

ಹೌದು, ಈಗಲೂ ಬಸ್‌ಗಳ ನಿರ್ವಹಣೆ, ಸಲಕರಣೆಗಳ ಬಳಕೆ, ಉಪಕರಣಗಳ ಖರೀದಿ ಮತ್ತು ದಾಸ್ತಾನು ಪ್ರಕ್ರಿಯೆಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಬಿಎಂಟಿಸಿ ವಿಫ‌ಲವಾಗಿದೆ. ತನ್ನ ವ್ಯಾಪ್ತಿಯಲ್ಲಿ 6,429 ಬಸ್‌ಗಳಿವೆ. ಈ ಪೈಕಿ ಭಾರತ್‌-3 ಮತ್ತು ಭಾರತ್‌-4 ಮಾದರಿಯ ಶೇ. 75ರಷ್ಟು ವಾಹನಗಳಿದ್ದು, ಇವುಗಳ ನಿರ್ವಹಣೆ ಎಲೆಕ್ಟ್ರಾನಿಕ್‌ ಸಲಕರಣೆಗಳಿಂದ ಆಗಬೇಕು. ಆದರೆ, ಅತ್ಯಾಧುನಿಕ ಸೌಲಭ್ಯಗಳ ಅಲಭ್ಯತೆಯಿಂದ ಈಗಲೂ ಸಾಂಪ್ರದಾಯಿಕ ಸಲಕರಣೆಗಳನ್ನೇ ನಿಗಮದ ತಾಂತ್ರಿಕ ವರ್ಗ ಅವಲಂಬಿಸಿದೆ.

ಸಲಕರಣೆಗಳೇ ಇಲ್ಲ
ಬಿಎಂಟಿಸಿ ಬಸ್‌ಗಳು ಮೇಲ್ದರ್ಜೆಗೆ ಏರಿವೆ. ಆದರೆ, ಅವುಗಳ ನಿರ್ವಹಣಾ ವ್ಯವಸ್ಥೆ ಹಾಗೇ ಇದೆ. ಬಹುತೇಕ ಘಟಕಗಳಲ್ಲಿ ಲಭ್ಯ ಇರುವುದು ಒಂದು ವೆಲ್ಡಿಂಗ್‌, ಮತ್ತೂಂದು ಗೆùಂಡಿಂಗ್‌ ಮಷಿನ್‌ ಮಾತ್ರ. ಬೋಲ್ಟ್ ಟೈಟ್‌ ಮಾಡುವುದರಿಂದ ಹಿಡಿದು ಎಲ್ಲವೂ ಈಗಲೂ ಮ್ಯಾನ್ಯುವಲ್‌ ಆಗಿಯೇ ನಡೆಯುತ್ತಿದೆ. 20ರಿಂದ 25 ಟನ್‌ ತೂಕದ ಬಸ್‌ಗಳನ್ನು ಎತ್ತುವ ಬುಲ್‌ಜಾಕ್‌ಗಳು ಕೂಡ ಸಮರ್ಪಕವಾಗಿ ಇಲ್ಲದಿರುವುದು ಪೀಣ್ಯ 2ನೇ ಹಂತದಲ್ಲಿ ಬರುವ ಘಟಕಗಳಿಗೆ “ಉದಯವಾಣಿ’ ಭೇಟಿ ನೀಡಿದಾಗ ಕಂಡುಬಂತು. 

ಅಲ್ಲದೆ, ಕಳಪೆ ಗುಣಮಟ್ಟದ ಸಲಕರಣೆಗಳ ಖರೀದಿ ಮತ್ತು ತಾಂತ್ರಿಕ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇದೆಲ್ಲದರಿಂದ ತರಾತುರಿಯಲ್ಲಿ ನಿರ್ವಹಣೆಯಾಗಿ ಬಸ್‌ಗಳು ರಸ್ತೆಗಿಳಿಯುತ್ತಿವೆ. ಇದರ ಪರಿಣಾಮವೇ ಎಲ್ಲೆಂದರಲ್ಲಿ ಬಸ್‌ಗಳ ಚಕ್ರ ಕಳಚಿಬೀಳುವುದು, ಬಸ್‌ಗಳು ಕೆಟ್ಟು ನಿಲ್ಲುವಂಥ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಬಿಎಂಟಿಸಿ ತಾಂತ್ರಿಕ ವಿಭಾಗದ ಮೇಲ್ವಿಚಾರಕರೊಬ್ಬರು ಆರೋಪಿಸುತ್ತಾರೆ. 

Advertisement

ತಿಂಗಳಾದ್ರೂ ಬಂದಿಲ್ಲ ಗ್ರೀಸ್‌!
ಬರೀ ವೀಲ್‌ ಬೇರಿಂಗ್‌ ಗ್ರೀಸ್‌ಗಾಗಿ ಒಂದೂವರೆ ತಿಂಗಳಿಂದ ಬಿಎಂಟಿಸಿ ಕೇಂದ್ರ ಉಗ್ರಾಣ ಮತ್ತು ಖರೀದಿ ವಿಭಾಗಕ್ಕೆ ಕೇಳಿಕೊಳ್ಳಲಾಗಿದೆ. ಇದುವರೆಗೆ ಲಭ್ಯವಾಗಿಲ್ಲ. ಹಾಗಾಗಿ, ಚಾಸಿ ಗ್ರೀಸ್‌ (ಮಲ್ಟಿ ಪರ್ಪ್‌ಸ್‌ ಗ್ರೀಸ್‌) ಬಳಕೆ ಮಾಡಲಾಗುತ್ತಿದೆ. ಇದೆಲ್ಲದರ ಮಧ್ಯೆ ನಿತ್ಯ ಪ್ರತಿಯೊಂದು ಘಟಕಗಳಿಂದ ನೂರಾರು ಬಸ್‌ಗಳ ನಿರ್ವಹಣೆ ಆಗಬೇಕು. ಈ ಪೈಕಿ 20ರಿಂದ 25 ವಾಹನಗಳು ರಿಪೇರಿಗೆ ಬಂದಿರುತ್ತವೆ. ಅವುಗಳನ್ನೂ ನಿಗದಿತ ಕಾಲಮಿತಿಯಲ್ಲಿ ದುರಸ್ತಿ ಮಾಡಬೇಕು ಎಂದು ಹೆಸರು ಹೇಳಲಿಚ್ಚಿಸದ ತಾಂತ್ರಿಕ ವಿಭಾಗದ ಮೇಲ್ವಿಚಾರಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು. 

ಬಾಗಿಲುಗಳ ಬಗ್ಗೆ ಸಿಗ್ನಲ್‌ ಬರುವ ವ್ಯವಸ್ಥೆಯೂ ಇಲ್ಲ 
ಬಸ್‌ಗಳಿಗೆ ಯಾವ ಬಿಡಿಭಾಗವನ್ನು ಯಾವಾಗ ಹಾಕಲಾಗಿದೆ? ಬಸ್‌ಗಳಲ್ಲಿ ಅಳವಡಿಸಿದ ಬಿಡಿಭಾಗದ ಕಾರ್ಯಕ್ಷಮತೆ ಹೇಗಿದೆ? ಪ್ರಸ್ತುತ ಬಸ್‌ನ ಸ್ಥಿತಿಗತಿ ಹೇಗಿದೆ? ಇದೆಲ್ಲದರ ಮಾಹಿತಿಯನ್ನೂ ತಂತ್ರಜ್ಞಾನ ಬಳಸಿಕೊಂಡು ವ್ಯವಸ್ಥಿತವಾಗಿ ಕ್ರೂಡೀಕರಿಸಿ ಇಡಬಹುದಾದ ವ್ಯವಸ್ಥೆಯೇ ಬಿಎಂಟಿಸಿಯಲ್ಲಿ ಇಲ್ಲ. ಕೇವಲ 3-4 ಲಕ್ಷದ ಕಾರಿನಲ್ಲೆ ಬಾಗಿಲು ಸರಿಯಾಗಿ ಹಾಕಿಕೊಳ್ಳದಿದ್ದರೆ, ಸೂಚನೆ ಬರುತ್ತದೆ.

ಹೀಗಿರುವಾಗ, ಕೋಟಿ ರೂ. ಕೊಟ್ಟು ಖರೀದಿಸುವ ವೋಲ್ವೋ ಬಸ್‌ಗಳಲ್ಲೂ ಈ ವ್ಯವಸ್ಥೆ ಅಳವಡಿಸಿಕೊಳ್ಳಬಹುದು. ಆದರೆ, ಇದಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ಬಸ್‌ಗಳ ಬಿಡಿಭಾಗಗಳ ಖರೀದಿ, ಅಳವಡಿಕೆ, ಸಲಕರಣೆಗಳ ಬಳಕೆ ಮತ್ತಿತರ ಉದ್ದೇಶಗಳಿಗೆ ತಂತ್ರಜ್ಞಾನ ಬಳಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. 

ತಿಂಗಳ ಅಂತರದಲ್ಲಿ 3 ಘಟನೆ
* ಆಗಸ್ಟ್‌ 26ರಂದು ಪೀಣ್ಯ ಬಳಿ ಸಂಚರಿಸುತ್ತಿದ್ದ ಬಸ್‌ನ ಚಕ್ರ ಕಳಚಿಬಿದ್ದಿತು. 
* ಸೆ. 13ರಂದು ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆ ವೇಳೆ ವೋಲ್ವೋ ಬಸ್‌ನಲ್ಲಿ ಎಸಿ ಕೈಕೊಟ್ಟಿತು. ನಂತರ ಬದಲಿ ಬಸ್‌ ವ್ಯವಸ್ಥೆ ಮಾಡಲಾಯಿತು. ಅದು ಮತ್ತೆ ಅಂಬೇಡ್ಕರ್‌ ಕಾಲೊನಿ ಬಳಿ ಕೈಕೊಟ್ಟಿದ್ದರಿಂದ ಮುಖ್ಯಮಂತ್ರಿಗಳು ಕಾರಿನಲ್ಲೇ ತೆರಳಿದರು. 
* ಸೆ. 18ರಂದು ಮೈಲಸಂದ್ರದ ಬಳಿ ಮತ್ತೂಂದು ಬಸ್‌ನ ಚಕ್ರ ಕಳಚಿಬಿತ್ತು. 

3 ಹಂತಗಳಲ್ಲಿ ನಿರ್ವಹಣೆ
ಬಿಎಂಟಿಸಿಯಲ್ಲಿ ಮೂರು ಪ್ರಕಾರಗಳಲ್ಲಿ ಬಸ್‌ಗಳ ನಿರ್ವಹಣೆ ನಡೆಯುತ್ತದೆ. ನಿತ್ಯ ಮತ್ತು ಪ್ರತಿ ವಾರ ಹಾಗೂ 20 ಸಾವಿರ ಕಿ.ಮೀ. ಸಂಚರಿಸಿದ ನಂತರ ಬಸ್‌ಗಳನ್ನು ನಿರ್ವಹಣೆ ಮಾಡಲಾಗುತ್ತದೆ. ನಿತ್ಯದ ನಿರ್ವಹಣೆಯಲ್ಲಿ ಡೀಸೆಲ್‌ ಹಾಕುವುದು, ವಾಟರ್‌ ವಾಷಿಂಗ್‌, ನಟ್ಟು-ಬೋಲ್ಟ್ ಟೈಟ್‌ ಮತ್ತಿತರ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಲಾಗುತ್ತದೆ.

ನಿಗಮದ ವ್ಯಾಪ್ತಿಯಲ್ಲಿ 45 ಘಟಕಗಳಿವೆ. ಪ್ರತಿ ಘಟಕದಲ್ಲಿ 150ರಿಂದ 200 ಬಸ್‌ಗಳು ಇವೆ. ಒಂದೊಂದು ಪಾಳಿಯಲ್ಲಿ 70ರಿಂದ 80 ವಾಹನಗಳಿರುತ್ತವೆ. ಹಾಗಾಗಿ, ಅಲ್ಪಾವಧಿಯಲ್ಲಿ ಸಿಬ್ಬಂದಿ ಕೊರತೆ ನಡುವೆ ಇದೆಲ್ಲವನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡಲು ಆಗುತ್ತಿಲ್ಲ ಎಂಬುದು ತಾಂತ್ರಿಕ ಸಿಬ್ಬಂದಿ ಆರೋಪ.

ಚ್ಚೆತ್ತುಕೊಂಡ ಬಿಎಂಟಿಸಿಯಿಂದ ಆ್ಯಪ್‌ 
ತಿಂಗಳ ಅಂತರದಲ್ಲಿ ನಡೆದ ಮೂರು ಪ್ರಕರಣಗಳಲ್ಲಿ ಬಿಎಂಟಿಸಿಯ ನಿರ್ವಹಣಾ ವೈಫ‌ಲ್ಯ ಜಗ್ಗಜ್ಜಾಹೀರಾಗಿದೆ. ಈ ಹಿನ್ನೆಲೆಯಲ್ಲಿ ನಿರ್ವಹಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿರುವ ಬಿಎಂಟಿಸಿ, ಮೊಬೈಲ್‌ ಆ್ಯಪ್‌ ಮೂಲಕ ಪ್ರತಿಯೊಂದು ಬಸ್‌ನ ಸ್ಥಿತಿಗತಿಯನ್ನು ದಾಖಲಿಸಲು ನಿರ್ಧರಿಸಿದೆ. ಈ ಸಂಬಂಧ ಪ್ರತ್ಯೇಕ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇ-ಆಡಳಿತ ವಿಭಾಗವು ಈ ಕಾರ್ಯಕೈಗೆತ್ತಿಕೊಂಡಿದೆ. ತಿಂಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ “ಉದಯವಾಣಿ’ಗೆ ತಿಳಿಸಿದ್ದಾರೆ. 

ಪ್ರತಿ ಬಸ್‌ನಲ್ಲಿ ಕಂಡುಬರುವ ತಾಂತ್ರಿಕ ಸಮಸ್ಯೆಗಳನ್ನು ಆಯಾ ಬಸ್‌ ಚಾಲಕ-ನಿರ್ವಾಹಕರು ಈ ನೂತನ ಆ್ಯಪ್‌ನಲ್ಲಿ ದಾಖಲಿಸುತ್ತಾರೆ. ಹೀಗೆ ದಾಖಲಿಸಿದ ದೂರು ತಾಂತ್ರಿಕ ಸಿಬ್ಬಂದಿಗೆ ಹೋಗುತ್ತದೆ. ನಂತರ ಎಂದಿನಂತೆ ಆ ಬಸ್‌, ಡಿಪೋ ಪ್ರವೇಶಿಸುತ್ತದೆ. ಆಗ ಆ ತಾಂತ್ರಿಕ ಸಿಬ್ಬಂದಿ ನಿರ್ದಿಷ್ಟ ಸಮಸ್ಯೆಯನ್ನು ಗುರುತಿಸಿ ಬಗೆಹರಿಸುತ್ತಾರೆ. ಅಷ್ಟೇ ಅಲ್ಲ, ಬಗೆಹರಿದಿರುವುದನ್ನು ಆ್ಯಪ್‌ನಲ್ಲಿ ಪುನಃ ಅಪ್‌ಲೋಡ್‌ ಮಾಡುತ್ತಾರೆ. ಇದಾದ ನಂತರ ಆ ಚಾಲಕ-ನಿರ್ವಾಹಕರು ಅದನ್ನು ದೃಢೀಕರಿಸುತ್ತಾರೆ. 

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಸ್‌ನಲ್ಲಿ ಕಂಡುಬರುವ ತಾಂತ್ರಿಕ ಸಮಸ್ಯೆಯನ್ನು ಚಾಲಕ-ನಿರ್ವಾಹಕರು ಫೋಟೋ ಸಹಿತಿ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲಿದ್ದಾರೆ. ಇದು ನೇರವಾಗಿ ಸಮಸ್ಯೆಗೆ ಸಂಬಂಧಿಸಿದ ತಾಂತ್ರಿಕ ಸಿಬ್ಬಂದಿಗೇ ಹೋಗುತ್ತದೆ. ಅದನ್ನು ಆತ ಸರಿಪಡಿಸಿ, ಮತ್ತೆ ಫೋಟೋ ಸಹಿತ ಅಪ್‌ಲೋಡ್‌ ಮಾಡಬೇಕು. ಈ ವ್ಯವಸ್ಥೆ ಮುಂದಿನ ಆರು ತಿಂಗಳಲ್ಲಿ ಬರಲಿದೆ ಎಂದು ಪೊನ್ನುರಾಜ್‌ ಮಾಹಿತಿ ನೀಡಿದರು. 

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next