Advertisement

ಹಳೇ ಬಸ್‌ಪಾಸ್‌ ಪರಿಗಣಿಸದ ನಿರ್ವಾಹಕರು

06:38 PM Sep 04, 2021 | Team Udayavani |

ಹಾವೇರಿ: ವಿದ್ಯಾರ್ಥಿಗಳಿಗೆ ಹೊಸ ಬಸ್‌ಪಾಸ್‌ ಸಿಗುವ ತನಕ ಹಳೇ ಬಸ್‌ಪಾಸ್‌ ಪರಿಗಣಿಸಬೇಕೆಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಸೂಚಿಸಿದೆ. ಆದರೂ ಸಹ ಸಾರಿಗೆ ಸಂಸ್ಥೆ ನಿರ್ವಾಹಕರು ಹಳೇ ಬಸ್‌ಪಾಸ್‌ ಪರಿಗಣಿಸದ ಹಿನ್ನೆಲೆಯಲ್ಲಿ ನಗರದ ಶಾಲಾ, ಕಾಲೇಜುಗಳಿಗೆ ನಿತ್ಯ ಬರುವ ವಿದ್ಯಾರ್ಥಿಗಳು ದುಬಾರಿ ಟಿಕೆಟ್‌ ಪಡೆದು ಪ್ರಯಾಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ರಾಜ್ಯ ಸರ್ಕಾರ ಕೋವಿಡ್‌ ಮೂರನೇ ಅಲೆ ಆತಂಕದ ನಡುವೆಯೂ ಈಗಾಗಲೇ 9ರಿಂದ 12ನೇ ತರಗತಿಗಳ ಶಾಲಾ, ಕಾಲೇಜು ಆರಂಭಿಸಿದೆ. ಇದೀಗ 6ರಿಂದ 8ನೇ ತರಗತಿವರೆಗೂ ಸೆ.6ರಿಂದ ಶಾಲೆ ಆರಂಭಕ್ಕೆ ಮುಂದಾಗಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಈಗಾಗಲೇ ಪದವಿ ಕಾಲೇಜುಗಳು ಸಹ ಆರಂಭಗೊಂಡಿವೆ.

ಆದರೆ, ಇನ್ನು ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯದ ಕಾರಣ ವಿದ್ಯಾರ್ಥಿ ಗಳಿಗೆ ಬಸ್‌ಪಾಸ್‌ ದೊರತಿಲ್ಲ. ಇದರಿಂದ ವಿದ್ಯಾರ್ಥಿ ಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಆದೇಶ ಕಡೆಗಣನೆ: ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಳೇ ಬಸ್‌ಪಾಸ್‌ ತೋರಿಸಿ ವಿದ್ಯಾರ್ಥಿಗಳು ಪ್ರಯಾಣಿಸಬಹುದೆಂದು ಹೇಳಿದೆ. ಆದರೂ ಸಾರಿಗೆ ಸಂಸ್ಥೆ ನಿರ್ವಾಹಕರು ಆದೇಶ ಧಿಕ್ಕರಿಸಿ ವಿದ್ಯಾರ್ಥಿಗಳಿಗೆ ಟಿಕೆಟ್‌ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ಇನ್ನು ಕೆಲವರು ನಡು ರಸ್ತೆಯಲ್ಲೇ ವಿದ್ಯಾರ್ಥಿಗಳನ್ನು ಬಸ್‌ನಿಂದ ಕೆಳಗಿಳಿಸಿ ತೆರಳುತ್ತಿರುವುದು ಕಂಡು ಬಂದಿದೆ. ಇದರಿಂದ ನಿತ್ಯ ಪಟ್ಟಣದ ಶಾಲಾ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.

ಇದನ್ನೂ ಓದಿ:ಸಂತೆಕಟ್ಟೆ ಕೊಲೆ ಪ್ರಕರಣ: ಕಿರುಕುಳ, ಮದುವೆ ವಿಳಂಬವೇ ಕೊಲೆಗೆ ಕಾರಣ :ಯುವತಿ ಪೋಷಕರ ಹೇಳಿಕೆ

Advertisement

ವಿದ್ಯಾರ್ಥಿಗಳಿಗೆ ಹೊರೆ: ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳದಿಂದ ಖಾಸಗಿ ಸೇರಿದಂತೆ ಸರ್ಕಾರಿ ಬಸ್‌ಗಳ ಪ್ರಯಣ ದರ ಹೆಚ್ಚಳಗೊಂಡಿದೆ. ಹೀಗಾಗಿ, ನಿತ್ಯ ತರಗತಿಗಳಿಗೆ ಬರಬೇಕಾದ ವಿದ್ಯಾರ್ಥಿಗಳು ಬಸ್‌ ಪ್ರಯಾಣಕ್ಕಾಗಿ ನೂರಾರು ರೂ. ವೆಚ್ಚ ಮಾಡಬೇಕಾದ ದುಸ್ಥಿತಿ ಬಂದಿದೆ. ಗ್ರಾಮೀಣ ವಿದ್ಯಾರ್ಥಿಗಳು ನಗರಗಳಿಗೆ ಬರಲು ಬಹುತೇಕ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಅವಲಂಬಿಸಬೇಕಾಗಿದೆ. ಆದರೆ, ಹೊಸ ಬಸ್‌ಪಾಸ್‌ ಬರುವವರೆಗೂ ಹಳೇ ಬಸ್‌ಪಾಸ್‌ ತೋರಿಸಿ ಪ್ರಯಾಣಿಸಬಹುದೆಂಬ ಸರ್ಕಾರದ ಆದೇಶವನ್ನು ನಿರ್ವಾಹಕರು ಕಡೆಗಣಿಸುತ್ತಿರುವುದು ವಿದ್ಯಾರ್ಥಿಗಳಿಗೆ ತೆಲೆನೋವಾಗಿ ಪರಿಣಮಿಸಿದೆ.

ಸಮಯಾವಕಾಶಕ್ಕೆ ಆಗ್ರಹ: ಈಗಷ್ಟೇ ಶಾಲಾ, ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಶುರುವಾಗಿದೆ. ದಾಖಲಾತಿ ಪ್ರಕ್ರಿಯೆ ಮುಗಿದು ಗುರುತಿನ ಚೀಟಿ ಪಡೆದು ಬಳಿಕ ಕಾಲೇಜು ಪ್ರಾಚಾರ್ಯರ ದೃಢೀಕರಣದೊಂದಿಗೆ ಹೊಸ ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆ ಮುಗಿಯಲು ಇನ್ನೂ ಒಂದು ತಿಂಗಳು ಬೇಕಾಗಬಹುದು. ಅಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಹಳೆ ಬಸ್‌ಪಾಸ್‌ ತೋರಿಸಿ ಪ್ರಯಾಣಿಸಲು ಅವಕಾಶ ನೀಡಿದರೆ ಜಿಲ್ಲೆಯ ಬಹಳಷ್ಟು ಬಡ ಹಾಗೂ ಮಧ್ಯಮ ಮತ್ತು ರೈತ ಕುಟುಂಬಗಳ ಮಕ್ಕಳಿಗೆ ಅನುಕೂಲವಾಗಲಿದೆ ಎಂಬುದು ವಿದ್ಯಾರ್ಥಿ ಸಂಘಟನೆಗಳ ಆಗ್ರಹವಾಗಿದೆ.

ಈಗಾಗಲೇ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳ ಆದೇಶದಂತೆ ಹಳೇ ಬಸ್‌ಪಾಸ್‌ ತೋರಿಸುವ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅವಕಾಶ ನೀಡಬೇಕು. ಆದರೆ, ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ ನಿರ್ವಾಹಕರು ಆದೇಶ ಧಿಕ್ಕರಿಸಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ತೊಂದರೆ ನೀಡುತ್ತಿದ್ದಾರೆ. ಹಳೇ ಬಸ್‌ಪಾಸ್‌ ಇದ್ದರೂ ಟಿಕೆಟ್‌ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನು ಕೆಲವು ಬಸ್‌ ನಿರ್ವಾಹಕರು ನಡು ರಸ್ತೆಯಲ್ಲಿಯೇ ವಿದ್ಯಾರ್ಥಿ ಗಳನ್ನು ಬಸ್‌ನಿಂದ ಕೆಳಗೆ ಇಳಿಸಿ ತೆರಳುತ್ತಿರುವ ಘಟನೆಗಳು ನಡೆಯುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಳೇ ಬಸ್‌ಪಾಸ್‌ ಪರಿಗಣಿಸುವಂತೆ ನಿರ್ವಾಹಕರಿಗೆ ಸೂಚನೆ ನೀಡಬೇಕು.
-ಬಸವರಾಜ ಭೋವಿ, ಎಸ್‌ಎಫ್‌ಐ ಮುಖಂಡ

ಜಿಲ್ಲೆಯಲ್ಲಿ ಹಳೇ ಬಸ್‌ಪಾಸ್‌
ಪರಿಗಣಿಸದಿರುವ ಘಟನೆಗಳು ಗಮನಕ್ಕೆ ಬಂದಿದೆ. ಈ ಬಗ್ಗೆ ಬಸ್‌ ಚಾಲಕರು ಹಾಗೂ ನಿರ್ವಾಹಕರಿಗೆ ಮತ್ತೊಮ್ಮೆ ಸೂಚನೆ ನೀಡಲಾಗುವುದು.
ವಿದ್ಯಾರ್ಥಿಗಳು ಶಾಲಾ ಶುಲ್ಕ ರಶೀದಿ ಹಾಗೂ ಆಧಾರ್‌ ಕಾರ್ಡ್‌ ತೋರಿಸಿದರೆ ಬಸ್‌ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಈಗಾಗಲೇ ಹೊಸಬಸ್‌ಪಾಸ್‌ ವಿತರಣೆ ಆರಂಭಗೊಂಡಿದ್ದು, ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ ಹೊಸ ಬಸ್‌ಪಾಸ್‌ ಪಡೆಯಬೇಕು. ವಿ.ಎಸ್‌.ಜಗದೀಶ, ವಿಭಾಗೀಯ ನಿಯಂತ್ರಣಾಧಿಕಾರಿ, ಹಾವೇರಿ

-ವೀರೇಶ ಮಡ್ಲೂರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next