Advertisement

ಹಳೇ ಬಸ್‌ಗಳನ್ನು ಜಾಗರೂಕತೆಯಿಂದ ಓಡಿಸಲಾಗುತ್ತದೆ: ಡಿಸಿಎಂ ಲಕ್ಷ್ಮಣ ಸವದಿ

09:48 AM Mar 07, 2020 | Sriram |

ವಿಧಾನ ಪರಿಷತ್‌ : ವಯಸ್ಸಾದವರು ಜಾಗರೂಕವಾಗಿ ಓಡಾಡುತ್ತಾರೆ. ಹಾಗೆಯೇ ಹಳೇ ಬಸ್‌ ಗಳನ್ನು ಜಾಕರೂಕವಾಗಿ ಓಡಿಸಲಾಗುತ್ತಿದೆ. ಹಳೇಯ ಬಸ್‌ ಅಪಘಾತಕ್ಕೆ ಕಾರಣವಾಗಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

Advertisement

ಬಸ್‌ ಅಪಘಾತ ಕುರಿತು ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಬಿಜೆಪಿ ಸದಸ್ಯ ಡಾ.ವೈ.ಎ ನಾರಾಯಣಸ್ವಾಮಿ, ಹೆಚ್ಚುತ್ತಿರುವ ಬಿಎಂಟಿಸಿ ಬಸ್‌ ಗಳ ಅಪಘಾತಕ್ಕೆ ಹಳೇ ಬಸ್‌ಗಳ ತಾಂತ್ರಿಕ ದೋಷ ಕಾರಣ, ರಾಜ್ಯದ ಸಾರಿಗೆ ಬಸ್‌ಗಳ ತಾಂತ್ರಿಕ ದೋಷಗಳಿಂದ ಅನೇಕ ಅಪಘಾತಗಳಾಗುತ್ತಿವೆ. ಕಳಪೆ ಗುಣಮಟ್ಟದ ಪರಿಕರಗಳನ್ನು ಬಳಸುದರಿಂದ ಹೀಗಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಸ್‌ಗಳು ಹಳೆಯದಾಗಿದೆ ಎನ್ನುವ ಕಾರಣಕ್ಕೆ ಅಪಘಾತಗಳು ಸಂಭವಿಸುತ್ತಿವೆ ಎನ್ನುವುದು ಸತ್ಯಕ್ಕೆ ದೂರವಾದ ಆರೋಪ. ಹಳೆಯದಾದಷ್ಟು ಜಾಗೃತಿ ಹೆಚ್ಚಾಗಿರುತ್ತದೆ. ವಯಸ್ಸಾದವರು ಜಾಗರೂಕರಾಗಿ ಓಡಾಡುತ್ತಾರೆ. ಹಾಗೆಯೇ ಚಾಲಕರೂ ಹಳೇ ಬಸ್‌ಗಳನ್ನು ಜಾಗರೂಕತೆಯಿಂದ ಓಡಿಸುತ್ತಾರೆ ಎಂದರು.

ಇದಕ್ಕೆ ದನಿಗೂಡಿಸಿದ ಆಡಳಿತ ಪಕ್ಷದ ಸದಸ್ಯೆ ತೇಜಸ್ವಿನಿಗೌಡ, ಗ್ರಾಮೀಣ ಭಾಗಗಳಲ್ಲಿ ಇಂದು ಹಳೇ ಬಸ್‌ಗಳನ್ನು ಓಡಿಸಲಾಗುತ್ತಿದೆ. ಅಲ್ಲಿನ ಜನರಿಗೂ ಉತ್ತಮ ಬಸ್‌ಗಳಲ್ಲಿ ಓಡಾಡುವ ಆಸೆಯಿರುತ್ತದೆ ಈ ರೀತಿಯ ತಾರತಮ್ಯ ಸರಿಯಲ್ಲ ಎಂದರು.

ಮಾತು ಮುಂದುವರಿಸಿದ ಉಪಮುಖ್ಯಮಂತ್ರಿ, ತಾಂತ್ರಿಕ ದೋಷದಿಂದ ಕೇವಲ ಒಂದು ಅಪಘಾತ ದಾಖಲಾಗಿದೆ. ಹೀಗಾಗಿ ಬಸ್‌ಗಳು ಹಳೆಯದಾಗಿರುವುದೇ ಅಪಘಾತಕ್ಕೆ ಕಾರಣ ಎನ್ನುವುದು ಸುಳ್ಳು ಎಂದರು.

Advertisement

ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಕಾಂಗ್ರೆಸ್‌ ಸದಸ್ಯ ಎಚ್‌.ಎಂ.ರೇವಣ್ಣ ಈ ವಾದವನ್ನೂ ಒಪ್ಪಲು ಸಾದ್ಯವಿಲ್ಲ, ಬಸ್‌ ಹಾಗೂ ಮಾನವರನ್ನು ಹೋಲಿಸಲು ಆಗುವುದಿಲ್ಲ. ಬಸ್‌ ಹಳೆಯದಾದಷ್ಟು ಸಮಸ್ಯೆ ಹೆಚ್ಚು ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಸವದಿ, ಹತ್ತು ವರ್ಷ ಬಿಟ್ಟು ರೇವಣ್ಣ ಅವರು ವಿಧಾನಸೌಧಕ್ಕೆ ಬರುವಾಗ ಒಂದು ಕೋಲು ಹಿಡಿದುಕೊಂಡು ಜಾಗರೂಕತೆಯಿಂದ ಬರುತ್ತಾರೆಯೇ ಹೊರತು ಈಗಿನಂತೆ ಉತ್ಸಾಹದಿಂದ ಬರಲಾಗುವುದಿಲ್ಲ ಎಂದಾಗ ಸದನ ನಗೆಗಡಲಲ್ಲಿ ತೇಲಿತು.

ಎಲ್ಲರಿಗೂ ಉಚಿತ ಬಸ್‌ಪಾಸ್‌ ನೀಡಿ :
ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುಲು ಅನುಸರಿಸುತ್ತಿರುವ ವ್ಯವಸ್ಥೆ ಬಗ್ಗೆ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಸವದಿ, ರಿಯಾಯಿತಿ ದರದ ಬಸ್‌ ಪಾಸ್‌ ಪಡೆಯಲು ವಿದ್ಯಾರ್ಥಿಗಳು ಶಾಲಾ ಗುರುತಿನ ಚೀಟಿ ಹಾಗೂ ಶುಲ್ಕ ಪಾವತಿಸಿದ ರಶೀದಿಯನ್ನು ನೀಡಬೇಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುತ್ತಿರುವುದರಿಂದ ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕಾಗಿದೆ ಎಂದರು.

ಆ ವೇಳೆ ಸಲಹೆ ನೀಡಿದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ರಾಜ್ಯದಲ್ಲಿ ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ಒದಗಿಸಿದರೆ ಸಾಲದು. ಮಕ್ಕಳು ದೇವರಿದ್ದಂತೆ ಬೇರೆ ವರ್ಗಗಗಳಲ್ಲೂ ಆರ್ಥಿಕ ಸಮಸ್ಯೆ ಎದುರಿಸುವ ಕುಟುಂಬದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ನೀಡುವುದರ ಬದಲು ಆರ್ಥಿಕ ಪರಿಸ್ಥಿತಿಗನುಗುಣವಾಗಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಬಸ್‌ಪಾಸ್‌ ವಿವರಿಸುವಂತಹ ಮನವಿ ಮಾಡಿದರು.

ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿ, ಈ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಆಗ ಹೊರಟ್ಟಿಯವರ ಸಲಹೆಯನ್ನೂ ಪಡೆಯಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next