Advertisement

ಬಿಇಒ ಕಚೇರಿ: ಸ್ವಾತಂತ್ರ್ಯ ಪೂರ್ವ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ

10:26 PM Sep 16, 2019 | mahesh |

ಪುತ್ತೂರು: ತಾಲೂಕಿನ ಸುಮಾರು 314 ಶಾಲೆಗಳ ಮೇಲುಸ್ತುವಾರಿಯ ಕಾರ್ಯಭಾರವನ್ನು ಹೊಂದಿರುವ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯೇ ಸಮರ್ಪಕ ಕಟ್ಟಡ ವ್ಯವಸ್ಥೆ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿದೆ.

Advertisement

ತಾಲೂಕಿನ ಬಹುತೇಕ ಇಲಾಖೆಗಳು ಕಾಲ ಕಾಲಕ್ಕೆ ಹೊಸ ಕಟ್ಟಡಗಳನ್ನು ಮಾಡಿ ಕೊಂಡಿವೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಾತ್ರ ಇನ್ನೂ ಹಳೆಯ ಅಪಾಯಕಾರಿ ಕಟ್ಟಡದಲ್ಲಿಯೇ ದಿನ ಕಳೆಯುತ್ತಿದೆ. ಕಟ್ಟಡ ಸಮಸ್ಯೆ ಕುರಿತು ಎರಡು ವರ್ಷ ಗಳಿಂದ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶ ಕರ ಕಚೇರಿಗೆ ಮನವಿ ನೀಡಲಾಗಿದ್ದರೂ ಇದುವರೆಗೂ ಸ್ಪಂದನೆ ಇಲ್ಲ ಎನ್ನುವುದು ಇಲಾಖೆಯ ಅಧಿಕಾರಿಗಳ ಅಳಲು.

ಸ್ವಾತಂತ್ರ್ಯ ಪೂರ್ವದ ಕಟ್ಟಡ
1938ರಲ್ಲಿ ಅಂದರೆ ಸುಮಾರು 80 ವರ್ಷಗಳ ಹಿಂದೆ ಈ ಕಟ್ಟಡ ನಿರ್ಮಾಣವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಷ್ಟೂ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರ ಸಾಕಷ್ಟು ಬದಲಾವಣೆಗಳನ್ನು ಕಂಡರೂ ಇಲಾಖೆಯ ಕಟ್ಟಡ ಮಾತ್ರ ಅದೇ ವ್ಯವಸ್ಥೆಯೊಂದಿಗೆ ಕಷ್ಟದಲ್ಲಿ ಮುನ್ನಡೆಯುತ್ತಿದೆ.

ಅವ್ಯವಸ್ಥೆ
ಪುತ್ತೂರು ತಾಲೂಕಿನ 23 ಸರಕಾರಿ ಪ್ರೌಢಶಾಲೆಗಳು, 181 ಸರಕಾರಿ ಪ್ರಾ. ಶಾಲೆಗಳು, 22 ಅನು ದಾನಿತ ಪ್ರೌಢ ಶಾಲೆಗಳು, 13 ಅನುದಾನಿತ ಪ್ರಾಥಮಿಕ ಶಾಲೆಗಳು, 36 ಅನುದಾನ ರಹಿತ ಪ್ರೌಢಶಾಲೆಗಳು ಹಾಗೂ 39 ಅನುದಾನರಹಿತ ಪ್ರಾಥಮಿಕ ಶಾಲೆಗಳ ಕೇಂದ್ರವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಸ್ತುತ ಇರುವ ಸಿಬಂದಿಗೂ ಕುಳಿತುಕೊಳ್ಳಲು ಸ್ಥಳವಿಲ್ಲ. ಕೊಠಡಿಗಳು ಇಕ್ಕಟ್ಟಾಗಿದ್ದು, ಮಳೆಯಾದಾಗ ಸೋರುವ ಸಮಸ್ಯೆಯೂ ಇದೆ.

ದಾಖಲೆಗಳು ನಾಶ!
ಈ ಕಟ್ಟಡದಲ್ಲಿ ಪುತ್ತೂರು ತಾಲೂಕಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದಾಖಲೆಗಳಿವೆ. ಮಳೆ ನೀರು ಸೋರುತ್ತಿರುವುದರಿಂದ ಈ ದಾಖಲೆಗಳು ಹಾಳಾಗುವ ಅಪಾಯ ಎದುರಾಗಿದೆ. ಇನ್ನೊಂದೆಡೆ ಕಟ್ಟಡದ ಗೋಡೆಗಳು ಬಿರುಕು ಬಿಟ್ಟು ಅಪಾಯದ ಸೂಚನೆಯನ್ನು ನೀಡುತ್ತಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಳೆಯ ಕಚೇರಿ ಕಟ್ಟಡಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ.

Advertisement

ಹೊಸ ಕಟ್ಟಡದ ನಿರೀಕ್ಷೆ
ಕಟ್ಟದ ಅತ್ಯಂತ ಹಳೆಯದಾಗಿದೆ. ಇಲಾಖೆಯಲ್ಲಿ ಸ್ವಂತ ಕಟ್ಟಡದ ನಿರ್ವಹಣೆಗೆ ಅನುದಾನ ಸಿಗುವುದಿಲ್ಲ. ಈ ಹಿಂದಿನ ಶಿಕ್ಷಣಾಧಿಕಾರಿ ಹೊಸ ಕಟ್ಟಡದ ಅನಿವಾರ್ಯತೆಯ ಕುರಿತು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಿದ್ದಾರೆ. ಶೀಘ್ರ ಹೊಸ ಕಟ್ಟಡ ಲಭಿಸುವ ನಿರೀಕ್ಷೆ ಇದೆ.
– ವಿಷ್ಣುಪ್ರಸಾದ್‌, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

ಅಧಿಕಾರಿಗಳು ತತ್‌ಕ್ಷಣ ಗಮನಹರಿಸಿ
ಸಮಾಜದಲ್ಲಿ ಉತ್ತಮ ನಾಗರಿಕರನ್ನು ಬೆಳೆಸುವ ಶಿಕ್ಷಣ ವ್ಯವಸ್ಥೆಯನ್ನು ನಿಭಾಯಿಸುವ ಮುಖ್ಯ ಕಚೇರಿ ಕಟ್ಟಡವೂ ಹೊಸ ವ್ಯವಸ್ಥೆ ಸರಿಯಾಗಿ ನಿರ್ಮಾಣವಾಗಬೇಕಿತ್ತು. ಕಟ್ಟಡ ಹಳೆಯದಾಗಿ ಅಪಾಯಕಾರಿ ಯಾಗುತ್ತಿದ್ದರೂ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ. ತತ್‌ಕ್ಷಣ ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳು ಮತ್ತು ಸರಕಾರ ಈ ಕುರಿತು ಗಮನ ಹರಿಸಿ ಮುತುವರ್ಜಿ ವಹಿಸಬೇಕಾಗಿದೆ..
– ಲೋಕೇಶ್‌ ಅಲುಂಬುಡ, ಸಾಮಾಜಿಕ ಕಾರ್ಯಕರ್ತರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next