Advertisement

ಹಳೆಯ ಕಟ್ಟಡ: ಆರೋಗ್ಯ ರಕ್ಷಕರಿಗೆ ನಿತ್ಯ ಭಯ

01:02 PM Jun 17, 2018 | Team Udayavani |

ನಗರ : ಸುತ್ತಲೂ ವಿಪರೀತ ಬೆಳೆದಿರುವ ಕಾಡು, ನಡುವೆ ಶತಮಾನ ಮೀರಿಸಿದ ವಸತಿ ಕಟ್ಟಡಗಳು, ಕಟ್ಟಡದ ಮೇಲೂ ಚಾಚಿಕೊಂಡಿರುವ ಅಪಾಯಕಾರಿ ಬೃಹತ್‌ ಗಾತ್ರದ ಮರಗಳು. ಇವುಗಳ ಮಧ್ಯದಲ್ಲಿ ನಿತ್ಯ ಭಯದ ಬದುಕು. ಇದು ಪುತ್ತೂರು ಸರಕಾರಿ ಆಸ್ಪತ್ರೆ ಸಿಬಂದಿಯ ವಸತಿಗೃಹಗಳ ಪರಿಸ್ಥಿತಿ. ನೂರಾರು ಸಾರ್ವಜನಿಕರಿಗೆ ದಿನಂಪ್ರತಿ ಆರೋಗ್ಯ ರಕ್ಷಣೆ ನೀಡುವ ಪುತ್ತೂರು ಸರಕಾರಿ ಆಸ್ಪತ್ರೆಯ ಸಿಬಂದಿ ಹಾಗೂ ಕುಟುಂಬಗಳು ಇಲ್ಲಿ ವಾಸವಿದ್ದು, ತಮ್ಮ ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಪರಿತಪಿಸಬೇಕಾದ ಸ್ಥಿತಿ.

Advertisement

ಶತಮಾನದ ಹಿಂದೆ ಪುತ್ತೂರು ಸರಕಾರಿ ಆಸ್ಪತ್ರೆ ಕಟ್ಟಡದ ನಿರ್ಮಾಣ ಆದಾಗ ಸಿಬಂದಿಯ ವಸತಿಗಾಗಿ ಆಸ್ಪತ್ರೆಯಿಂದ 50 ಮೀ. ವ್ಯಾಪ್ತಿಯಲ್ಲಿ ಈ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಈ ಮನೆಗಳು ಗಟ್ಟಿಯಾಗಿರುವರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಕಾಡಿನಂತಾಗಿರುವ ಪರಿಸರವೇ ಅಪಾಯಕಾರಿಯಾಗಿದೆ.

6 ಕುಟುಂಬಗಳು
ಹಿಂದೆ ಈ ವಸತಿಗೃಹಗಳಲ್ಲಿ ಆಸ್ಪತ್ರೆಯ ವೈದ್ಯರು ತಂಗುತ್ತಿದ್ದರು. ಆದರೆ ಈಗಿನ ವೈದ್ಯರು ವಸತಿಗಾಗಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಪ್ರಸ್ತುತ ಸರಕಾರಿ ಆಸ್ಪತ್ರೆಯ ಇಬ್ಬರು ಎಕ್ಸ್‌-ರೇ ಟೆಕ್ನೀಶಿಯನ್ಸ್‌, ಓರ್ವ ಲ್ಯಾಬ್‌ ಟೆಕ್ನೀಶಿಯನ್‌, ಮೂವರು ಸ್ಟಾಫ್‌ ನರ್ಸ್‌ಗಳು, ಆಸ್ಪತ್ರೆಯ ವಾಹನ ಚಾಲಕ ಈ ಕ್ವಾರ್ಟರ್ಸ್‌ಗಳಲ್ಲಿ ವಾಸವಿದ್ದಾರೆ. ಓರ್ವ ಸಿಬಂದಿಯನ್ನು ಬಿಟ್ಟರೆ ಉಳಿದವರೆಲ್ಲರೂ ಕುಟುಂಬ ಸಮೇತರಾಗಿ ವಾಸವಿದ್ದಾರೆ. ಈ ಕುಟುಂಬಗಳ ಸುಮಾರು 11 ಮಂದಿ ಮಕ್ಕಳೂ ಇದ್ದಾರೆ.

ಸೊಳ್ಳೆ, ಹಾವುಗಳ ಕಾಟ
ವಸತಿಗೃಹಗಳ ಪರಿಸರದ ಸುತ್ತಲೂ ಅಪಾರ ಪ್ರಮಾಣದಲ್ಲಿ ಕಾಡು ಬೆಳೆದಿದೆ. ಸ್ವಚ್ಛತೆಯ ಪ್ರಶ್ನೆಯೇ ಇಲ್ಲಿ ಇಲ್ಲದಿರುವುದರಿಂದ ವ್ಯಾಪಕ ಪ್ರಮಾಣದಲ್ಲಿ ಸೊಳ್ಳೆಗಳ ಉತ್ಪಾದನ ಕೇಂದ್ರವಾಗಿ ಈ ಪರಿಸರ ಪರಿವರ್ತನೆಗೊಂಡಿದೆ. ಹೆಬ್ಟಾವು, ನಾಗರಹಾವುಗಳು ಬರುತ್ತವೆ. ಸಮರ್ಪಕ ದಾರಿ ದೀಪವೂ ಇಲ್ಲದೆ ರಾತ್ರಿ ಸಮಯದಲ್ಲಿ ಆಸ್ಪತ್ರೆಯಿಂದ ಕರೆ ಬಂದಾಗ ಪರದಾಡಿಕೊಂಡು ಹೋಗಬೇಕಾಗುತ್ತದೆ ಎನ್ನುವುದು ಸಿಬಂದಿಯ ಅಳಲು.

ಅಪಾಯಕಾರಿ ಮರಗಳು
ವಸತಿ ಗೃಹಗಳ ಮನೆಗಳ ಮೇಲ್ಭಾಗದಲ್ಲಿ ಬೃಹತ್‌ ಗಾತ್ರದ ಮರಗಳ ರೆಂಬೆಗಳು ಹರಡಿಕೊಂಡಿವೆ. ದೇವದಾರು, ಧೂಪ, ಹಲಸು ಸಹಿತ ದೊಡ್ಡ ಗಾತ್ರದ ಮರಗಳಿವೆ. ಇತ್ತೀಚೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮರಗಳ ಆಯುಷ್ಯ ಗಟ್ಟಿಯಾಗಿದೆ ಎಂದು ಭರವಸೆ ನೀಡಿದ್ದಾರೆ. ಆದರೆ ಪ್ರಕೃತಿಯ ಮುಂದೆ ಇಂತಹ ಭರವಸೆಗಳ ಜತೆ ಬದುಕಲು ಸಾಧ್ಯವಿಲ್ಲ. ಗಾಳಿ, ಮಳೆ ಜೋರಾಗಿರುವುದರಿಂದ ಯಾವುದೇ ಸಂದರ್ಭದಲ್ಲೂ ಮರಗಳು ಮುರಿದು ಬೀಳುವ ಅಪಾಯ ಇದ್ದೇ ಇದೆ.

Advertisement

ಕೆಲವು ವರ್ಷಗಳ ಹಿಂದೆ ವಸತಿಗೃಹಗಳ ಪರಿಸರದಲ್ಲಿ ಸೊಳ್ಳೆಗಳ ಉಪಟಳವನ್ನು ದೂರ ಮಾಡುವ ನಿಟ್ಟಿನಲ್ಲಿ ‘ಗಪ್ಪೆ ಮೀನಿನ ಟ್ಯಾಂಕ್‌’ ನಿರ್ಮಿಸಲಾಗಿದೆ. ಈ ಪೊದೆಗಳ ಮಧ್ಯದಲ್ಲಿ ಟ್ಯಾಂಕ್‌ ಇದೆ ಎನ್ನುವುದನ್ನು ಬಿಟ್ಟರೆ ವ್ಯವಸ್ಥೆಯೇ ನಿರರ್ಥಕವಾಗಿದೆ. ಸೊಳ್ಳೆಗಳಿಂದ ರಕ್ಷಣೆಗಾಗಿ ನಿರ್ಮಿಸಲಾದ ಟ್ಯಾಂಕ್‌ ಈಗ ಕೊಳಚೆ ನೀರು ತುಂಬಿ ಸೊಳ್ಳೆಗಳ ಉತ್ಪಾದನಾ ಟ್ಯಾಂಕ್‌ ಆಗಿ ಪರಿವರ್ತನೆಗೊಂಡಿದೆ.

ಮೇಲಧಿಕಾರಿಗಳ ಗಮನಕ್ಕೆ
ವಸತಿಗೃಹಗಳ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಪ್ರತಿ ವರ್ಷ ಮರದ ರೆಂಬೆಗಳನ್ನು ಕಡಿಯುವ ಕೆಲಸವನ್ನು ಮಾಡಲಾಗುತ್ತದೆ. ಸಣ್ಣಪುಟ್ಟ ದುರಸ್ತಿಗಳನ್ನು ಸಿಬಂದಿಯೇ ಹಣ ಖರ್ಚು ಮಾಡಿ ಮಾಡುತ್ತಾರೆ.
– ಡಾ| ವೀಣಾ
ಆಡಳಿತ ವೈದ್ಯಾಧಿಕಾರಿ, ಸರಕಾರಿ ಆಸ್ಪತ್ರೆ ಪುತ್ತೂರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next