Advertisement

ಉದ್ಯಮಕ್ಕೆ ಇಳಿಯಬೇಕಿದ್ದವ ಬ್ಯಾಟು ಹಿಡಿದ!

10:13 AM Jan 12, 2020 | mahesh |

ನಂಬಿಗಸ್ತ ಆಟಗಾರ ಎಂದು ಕಣ್ಮುಚ್ಚಿಕೊಂಡು ಹೇಳಬಹುದಾಗಿದ್ದ ಕ್ರಿಕೆಟಿಗರ ಪೈಕಿ ಹರ್ಭಜನ್‌ ಸಿಂಗ್‌ ಕೂಡ ಒಬ್ಬರು. ಅಪಾರ ಪ್ರತಿಭಾವಂತರು ಎಂಬುದು ಪ್ಲಸ್‌ ಪಾಯಿಂಟ್‌. ಮಹಾನ್‌ ಸಿಡುಕ ಎನ್ನುವುದು ಮೈನಸ್‌ ಪಾಯಿಂಟ್‌. ಸ್ಪಿನ್‌ ಬೌಲಿಂಗ್‌ಗೆ ಹೆಸರಾಗಿದ್ದ ಹರ್ಭಜನ್‌, ಕೆಲವೊಂದು ಸಂದರ್ಭದಲ್ಲಿ ಬಿಡುಬೀಸಾಗಿ ಬ್ಯಾಟಿಂಗ್‌ ಮಾಡಿದ್ದುಂಟು. ಎಂಟನೇ ವಿಕೆಟ್‌ಗೆ ಆಡಲು ಯಾರೇ ಬಂದರೂ ಅವರು 30-40 ರನ್‌ ಹೊಡೆದರೆ ಅದೇ ಹೆಚ್ಚು. ಹೀಗಿರುವಾಗ ಎಂಟನೇ ವಿಕೆಟ್‌ಗೆ ಆಡಲು ಬಂದು ಒಂದಲ್ಲ ಎರಡು ಬಾರಿ ಶತಕ ಹೊಡೆದದ್ದು ಹರ್ಭಜನ್‌ ಹೆಗ್ಗಳಿಕೆ.

Advertisement

ಈತ ಸೂಪರ್‌ ಬ್ಯಾಟ್ಸ್‌ಮನ್‌ ಆಗಲು ಕಾರಣವಿದೆ. ಏನೆಂದರೆ ಈ ಹರ್ಭಜನ್‌ ಬ್ಯಾಟ್ಸ್‌ಮನ್‌ ಆಗಲೆಂದೇ ಕ್ರಿಕೆಟ್‌ಗೆ ಬಂದವರು. ಆದರೆ ಬ್ಯಾಟಿಂಗ್‌ ಕೋಚ್‌ ಆಗಿದ್ದ ಚರಣ್‌ಜಿತ್‌ ಸಿಂಗ್‌ ದಿಢೀರ್‌ ನಿಧನರಾದ ಬಳಿಕ ಹರ್ಭಜನ್‌ ಸ್ಪಿನ್‌ ಬೌಲರ್‌ ಆಗಿ ಬದಲಾದರು. ಒಂದು ತಮಾಷೆ ಕೇಳಿ. ವರ್ಷಗಳ ಕಾಲ ತರಬೇತಿ ಪಡೆದು ಸ್ಪಿನ್‌ ಬೌಲರ್‌ ಎಂಬ ಹಣೆಪಟ್ಟಿಯೊಂದಿಗೆ ಕ್ರಿಕೆಟ್‌ ರಂಗಕ್ಕೆ ಬಂದಾಗ ಇವರಿಗಿಂತ ಚೆನ್ನಾಗಿ ಬೌಲಿಂಗ್‌ ಮಾಡುತ್ತಿದ್ದ ಸುನೀಲ್‌ ಜೋಶಿ, ಮುರಳಿ ಕಾರ್ತಿಕ್‌, ಶರಣ್‌ ದೀಪ್‌ ಸಿಂಗ್‌ ಕೂಡ ಕ್ಯೂನಲ್ಲಿದ್ದರು. ಇಂಥ ಪ್ರಚಂಡರ ನಡುವೆ ಖಂಡಿತ ನನಗೆ ಸ್ಥಾನ ಸಿಗುವುದಿಲ್ಲ , ಕ್ರಿಕೆಟ್‌ಗೆ ಗುಡ್‌ ಬೈ ಹೇಳಿ ಅಮೆರಿಕಕ್ಕೆ ಹೋಗಿ ಏನಾದರೂ ಉದ್ಯಮ ಮಾಡ್ತೆನೆ ಎಂದಿದ್ದರಂತೆ ಹರ್ಭಜನ್‌, ಆದರೆ ಅವರ ಕುಟುಂಬದವರು ತಂಡದ ಆಯ್ಕೆ ಆಗುವ ತನಕ ಕಾದು ನೋಡುವಾ ಆಯ್ಕೆ ಆಗದಿದ್ದರೆ ಅಮೆರಿಕದ ವಿಮಾನ ಹತ್ತಿಬಿಡು ಅಂದಿದ್ದರಂತೆ. ಮುಂದೆ ಹರ್ಭಜನ್‌ಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿತು. ಹೀಗಾಗಿ ಉದ್ಯಮಿಯಾಗುವ ಆಯ್ಕೆ ಕೊನೆಗೂ ಆಯ್ಕೆಯಾಗಿಯೇ ಉಳಿಯಿತು.

ಲಸಿತ್‌ ಮಾಲಿಂಗ “ಉಲ್ಟಾ ಪಲ್ಟಾ’ ಆಟ…
“ಅದನ್ನೇನು ಬೌಲಿಂಗ್‌ ಅಂತಾರೇನ್ರಿ? ಕಲ್ಲು ತಗೊಂಡು ಗುರಿಯಿಟ್ಟು ಹೊಡಿತಾರಲ್ಲ, ಹಾಗಿರುತ್ತೆ ಅವರು ಚೆಂಡೆಸೆಯುವ ರೀತಿ’ ಶ್ರೀಲಂಕಾದ ವೇಗದ ಬೌಲರ್‌ ಲಸಿತ್‌ ಮಾಲಿಂಗ ಬೌಲಿಂಗ್‌ ನೋಡಿದವರು ಹೇಳುವ ಮಾತಿದು. ಕ್ರಿಕೆಟ್‌ ರಂಗದ ಅತೀ ಅಪಾಯಕಾರಿ ಬೌಲರ್‌ ಎಂಬ ಹೆಗ್ಗಳಿಕೆ ಇರುವುದು ಈ ಮಾಲಿಂಗನಿಗೆ.

ಪ್ರತಿಯೊಂದು ಚೆಂಡೆಸೆಯುವ ಮೊದಲು ಅದಕ್ಕೆ ಮುತ್ತು ಕೊಡುವುದು ಮಾಲಿಂಗ ಸ್ಟೈಲ್‌, ಒಂದು ಓವರ್‌ನಲ್ಲಿ ಆಡು ಚೆಂಡುಗಳನ್ನು ಆರು ಬಗೆಯಲ್ಲಿ ಹಾಕುವುದು ಮಾಲಿಂಗ ವಿಶೇಷತೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ಹ್ಯಾಟ್ರಿಕ್‌ ಪಡೆದಿರುವುದು ಸತತ 4 ಚೆಂಡುಗಳಲ್ಲಿ 4 ವಿಕೆಟ್‌ ಪಡೆದಿರುವುದು, ವೇಗದ 400 ವಿಕೆಟ್‌ಗಳ ಗಡಿ ದಾಟಿದ ಬೌಲರ್‌ ಎನಿಸಿಕೊಂಡಿದ್ದು ಇವೆಲ್ಲ ಮಾಲಿಂಗನ ಸಾಧನೆಯ ಹೆಜ್ಜೆ ಗುರುತುಗಳು.

ಸಾಮಾನ್ಯವಾಗಿ ಬೌಲರ್‌ಗಳು ಬ್ಯಾಟಿಂಗ್‌ನಲ್ಲಿ ಮಿಂಚುವ ಸಂದರ್ಭಗಳು ಕಡಿಮೆ. ಆದರೆ ಮಾಲಿಂಗನ ಕತೆ ಹಾಗಲ್ಲ. ಸಂದರ್ಭಕ್ಕೆ ತಕ್ಕಂತೆ ಬ್ಯಾಟ್‌ ಬೀಸುವುದರಲ್ಲೂ ನಿಪುಣರು. 2010 ಮೆಲ್ಬರ್ನ್ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ, ನೀಡಿದ್ದ 240 ರನ್‌ಗಳ ಬೆನ್ನಟ್ಟಿದ ಲಂಕಾ ಒಂದು ಹಂತದಲ್ಲಿ 107 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು ಸೋಲಿನ ಹಾದಿ ಹಿಡಿದಿತ್ತು. 8ನೇ ವಿಕೆಟ್‌ಗೆ ಮಾಲಿಂಗ ಆಡಲು ಬಂದಾಗ ಇನ್ನು ಹತ್ತು ನಿಮಿಷದಲ್ಲಿ ಆಸ್ಟ್ರೇಲಿಯ ಗೆಲ್ಲುತ್ತೆ ಅಂದಿದ್ದರು ಜನ. ಆದರೆ ಮನಬಂದಂತೆ ಬ್ಯಾಟ್‌ ಬೀಸಿದ ಮಾಲಿಂಗ 56 ರನ್‌ ಹೊಡೆದು ಲಂಕಾವನ್ನು ಗೆಲ್ಲಿಸಿದರು. ಅದುವರೆಗೂ ಬೌಲಿಂಗ್‌ನಲ್ಲಿ ಮ್ಯಾಜಿಕ್‌ ಮಾಡುತ್ತಿದ್ದವರು ಬ್ಯಾಟಿಂಗ್‌ನಲ್ಲೂ ಅಬ್ಬರಿಸಿ ಸುದ್ದಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next