ಭಾರತ ಕ್ರಿಕೆಟ್ ತಂಡ ಮರೆಯಬಾರದ ಆಟಗಾರರ ಪೈಕಿ ಕನ್ನಡಿಗ ರೋಜರ್ ಬಿನ್ನಿ ಕೂಡ ಒಬ್ಬರು. ವೇಗದ ಬೌಲರ್ ಆಗಿ ಕಪಿಲ್ ದೇವ್ ಅವರ ಜೊತೆ ಚೆಂಡು ಹಂಚಿಕೊಂಡ ಅಸಾಮಾನ್ಯ ಪ್ರತಿಭಾವಂತ ಬಿನ್ನಿ. 1983ರಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಿತಲ್ಲ, ಆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು ಇದೇ ಬಿನ್ನಿ. ರೋರ್ಜ ಮೈಕೆಲ್ ಹಂಫ್ರಿ ಬಿನ್ನಿ -ಇದು ಬಿನ್ನಿಯ ಪೂರ್ಣ ಹೆಸರು. ಇವರ ಹೆತ್ತವರು ಇಂಗ್ಲೆಂಡ್ ಮೂಲದವರು. ಭಾರತ ತಂಡದ ಪರವಾಗಿ ಆಡಿದ ಆಂಗ್ಲೋ ಇಂಡಿಯನ್ ಎಂಬ ಹೆಗ್ಗಳಿಕೆ ಕೂಡ ಬಿನ್ನಿ ಅವರದ್ದೇ. ಸಾಮಾನ್ಯವಾಗಿ 7ನೇ ವಿಕೆಟ್‌ಗೆ ಬ್ಯಾಟಿಂಗ್‌ಗೆ ಬರುತ್ತಿದ್ದರು ಬಿನ್ನಿ. ಅವರ ಆಟದಲ್ಲೊಂದು ವಿಶೇಷವಿತ್ತು.
Advertisement
ಏನೆಂದರೆ, ಯಾವುದೇ ಮ್ಯಾಚ್‌ನಲ್ಲಿ ನಂಬಿಕಸ್ತ ಬ್ಯಾಟ್ಸಮನ್‌ಗಳು ಬೇಗ ಔಟ್ ಆಗಿ ಭಾರತಕ್ಕೆ ಸೋಲು ಗ್ಯಾರಂಟಿ ಎಂದೇ ಎಲ್ಲರೂ ಲೆಕ್ಕ ಹಾಕುತ್ತಿದ್ದಾಗ- ಈ ಬಿನ್ನಿ ನೆಲ ಕಚ್ಚಿ ನಿಂತು ಆಡಿಬಿಡುತ್ತಿದ್ದರು. ಆ ಮೂಲಕ ತಂಡ ಸೋಲದಂತೆ ನೋಡಿಕೊಳ್ಳುತ್ತಿದ್ದರು. ಬೌಲಿಂಗ್‌ನ ಸಂದರ್ಭದಲ್ಲೂ ಅಷ್ಟೇ- ಎದುರಾಳಿ ಆಟಗಾರರು ಔಟ್ ಆಗುವುದೇ ಇಲ್ಲ ಅನ್ನುವಂಥ ಸಂದರ್ಭದಲ್ಲೂ ಜಾಣ್ಮೆಯ ಬೌಲಿಂಗ್ ಮಾಡಿ ವಿಕೆಟ್ ಕೀಳುತ್ತಿದ್ದರು. ಮೊದಲ ಟೆಸ್ಟ್ ಮತ್ತು ಕಡೆಯ ಟೆಸ್ಟ್ಗಳನ್ನು ಒಂದೇ ಕ್ರೀಡಾಂಗಣದಲ್ಲಿ ಆಡುವ ಅವಕಾಶ ಕೆಲವರಿಗಷ್ಟೇ ಸಿಗುತ್ತದೆ. ಬಿನ್ನಿ, ಅಂಥಾ ಅದೃಷ್ಟವಂತರಲ್ಲಿ ಒಬ್ಬರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಆಡಿದ ಅವರು, ಇದೆ ಸ್ಟೇಡಿಯಂನಲ್ಲಿ ಕೊನೆಯ ಟೆಸ್ಟ್ ಅನ್ನೂ ಆಡಿದರು.
ಕ್ರೀಡೆಯಲ್ಲಿ ಆಟಗಾರರಿಗೆ ಮಾತ್ರವಲ್ಲ, ತಂಡದ ಜೊತೆ ತೆರಳುವ ಅಧಿಕಾರಿಗಳಿಗೂ ಬಗೆಬಗೆಯ ನಂಬಿಕೆಗಳಿರುತ್ತವೆ. 1983ರಲ್ಲಿ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿದ್ದ ಪಿ. ಆರ್. ಮಾನ್‌ಸಿಂಗ್ ಅವರಿಗೆ ವಿಚಿತ್ರ ಅನ್ನುವಂಥ ನಂಬಿಕೆಗಳಿದ್ದವು. ತಂಡದ ಯಾವುದೇ ಆಟಗಾರ ಚೆನ್ನಾಗಿ ಆಡುತ್ತಿದ್ದಾನೆ ಅಂದರೆ, ಉಳಿದವರು ತಾವು ಇದ್ದ ಸ್ಥಳದಿಂದ ಎದ್ದು ಹೋಗಬಾರದು. ಹಾಗೇನಾದರೂ ಎದ್ದು ಹೋದರೆ ಆಟಗಾರ ಔಟ್ ಆಗಿಬಿಡುತ್ತಾನೆ ಎಂಬ ನಂಬಿಕೆ ಮಾನ್‌ಸಿಂಗ್ ಅವರಿಗಿತ್ತು. ಅದನ್ನು ನೆನಪಿಸಿಕೊಂಡು ಆರಂಭಿಕ ಆಟಗಾರ ಕೆ. ಶ್ರೀಕಾಂತ್ ಹೇಳಿದ್ದರು- “”ಕಪಿಲ್ ದೇವ್ ಅವರು ವಿಶ್ವದಾಖಲೆಯ 175 ರನ್ ಹೊಡೆದರಲ್ಲ, ಆಗ ನಮ್ಮನ್ನು ಟಾಯ್ಲೆಟ್‌ಗೆ ಹೋಗಲಿಕ್ಕೂ ಮಾನ್‌ಸಿಂಗ್ ಬಿಡಲಿಲ್ಲ. ಯಾರಾದ್ರೂ ಎದ್ದು ಹೋದ್ರೆ ಬ್ಯಾಟ್ಸ ಮನ್ ಔಟ್ ಆಗಿ ಬಿಡ್ತಾನೆ. ಆತ ಮುಗಿಯುವವರೆಗೂ ಅಲುಗಾಡದೆ ಹಾಗೇ ಕೂತಿರಿ ಅಂದಿದ್ದರು…”