Advertisement

ಹಳೇ ಬ್ಯಾಟು ಹಳೇ ಚೆಂಡು

08:28 PM Mar 06, 2020 | Lakshmi GovindaRaj |

ಕ್ರಿಕೆಟ್‌ ಅಂಗಳದ ವಿಧೇಯ ವಿದ್ಯಾರ್ಥಿ ಸಚಿನ್ನ
ಕ್ರಿಕೆಟ್‌ ದೇವರು, ಕ್ರಿಕೆಟ್‌ನ ದಂತಕಥೆ, ಕ್ರೀಡಾಲೋಕದ ವಿಸ್ಮಯ, ವಿಶಿಷ್ಟ ಆಟಗಾರ, ಶತಕಗಳ ಸರದಾರ…ಇಂಥದೇ ಹಲವು ಹೆಸರುಗಳಿಂದ ತೆಂಡುಲ್ಕರ್‌ ಅವರನ್ನೂ ಕರೆಯುವುದುಂಟು. ತೆಂಡುಲ್ಕರ್‌ಗೆ ಅತೀ ಅನ್ನುವಷ್ಟು ಬಿರುದು ಮತ್ತು ಹೆಗ್ಗಳಿಕೆ ಸಂದಾಯವಾಗಿದೆ ಎಂದು ಅವರ ವಿರೋಧಿಗಳು ಹೇಳುವುದೂ ಉಂಟು. ಇದನ್ನು ಲೆಕ್ಕಕ್ಕೆ ತೆಗೆದುಕೊಂಡೇ ಯೋಚಿಸಿದರೂ ಎಲ್ಲ ಬಗೆಯ ಹೆಗ್ಗಳಿಕೆಗಳಿಗೂ ತೆಂಡುಲ್ಕರ್‌ ಅರ್ಹರು. ಈ ಮಾತನ್ನು ಹೇಳಿದ್ದು ಯಾರು ಗೊತ್ತೆ? ಭಾರತ ಕ್ರಿಕೆಟ್‌ ತಂಡದ ತರಬೇತುದಾರರಾಗಿದ್ದ ಗ್ಯಾರಿ ಕರ್ಸ್ಟನ್‌. ತೆಂಡುಲ್ಕರ್‌ ಅವರನ್ನು ಕ್ರಿಕೆಟ್‌ ದೇವರು ಅನ್ನುತ್ತಾರಲ್ಲ;

Advertisement

ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಕರ್ಸ್ಟನ್‌ ಹೀಗೆಂದಿದ್ದರು. “ತೆಂಡುಲ್ಕರ್‌ ಕಲಿಯಲು ಸದಾ ಹಂಬಲಿಸುವ ವಿದ್ಯಾರ್ಥಿ, ಶತಕಗಳ ಸರದಾರ ಅನ್ನಿಸಿಕೊಂಡ ನಂತರವೂ ಅವರು ನೆಟ್‌ ಅಭ್ಯಾಸ ತಪ್ಪಿಸುತ್ತಿರಲಿಲ್ಲ. ಟೆಸ್ಟ್‌, ಏಕದಿನ ಅಥವಾ ಟಿ20 ಈ ಯಾವುದೇ ಬಗೆಯ ಪಂದ್ಯವಿದ್ದರೂ ಹಿಂದಿನ ದಿನವಿಡೀ ಅಭ್ಯಾಸ ಮಾಡುತ್ತಿದ್ದರು. ಕೆಲವು ವಿದ್ಯಾರ್ಥಿಗಳಿರುತ್ತಾರೆ, 200 ಪುಟದ ಪುಸ್ತಕ ಕೊಟ್ಟು, ಮುಂದಿನ ವಾರ ಪರೀಕ್ಷೆ ಅಂದರೆ, ಇಡೀ ಪುಟದ ಪ್ರತಿಯೊಂದು ಅಕ್ಷರವನ್ನು ಓದಿಕೊಂಡಿರುತ್ತಾರೆ. ಅಷ್ಟೇ ಅಲ್ಲ, ಅದನ್ನೆಲ್ಲ ಅರ್ಥ ಮಾಡಿಕೊಂಡಿರುತ್ತಾರೆ.

ಅಷ್ಟೆಲ್ಲ ಓದಿದ ಮೇಲೂ ಮೈ ಮರೆಯುವುದಿಲ್ಲ. ಪರೀಕ್ಷೆಯ ಹಿಂದಿನ ದಿನ ಮತ್ತೆ ರಿವಿಷನ್‌ ಮಾಡ್ತಾರೆ, ತೆಂಡುಲ್ಕರ್‌ ಕೂಡ ಅಂತಹ ವಿಧೇಯ ವಿದ್ಯಾರ್ಥಿ, ಯಾವುದೇ ಪಂದ್ಯದಲ್ಲಿ ಆತ ಒಂದು ಇನಿಂಗ್ಸ್‌ನಲ್ಲಿ ಆಡಿದಾಗ 200-300 ಎಸೆತಗಳನ್ನು ಎದುರಿಸಿರಬಹುದು. ಆದರೆ, ಅದರ ಹಿಂದಿನ ದಿನ 600ಕ್ಕೂ ಹೆಚ್ಚು ಚೆಂಡುಗಳನ್ನು ಎದುರಿಸಿ ಎಲ್ಲ ರೀತಿಯಿಂದಲೂ ತಯಾರಾಗಿಯೇ ಬಂದಿರುತ್ತಾರೆ. ಈ ಬಗೆಯ ಶ್ರದ್ಧೆಯನ್ನು ಬೇರೆ ಆಟಗಾರರಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿಯೇ ತೆಂಡುಲ್ಕರ್‌ ಎಲ್ಲ ಬಗೆಯ ಹೆಗ್ಗಳಿಕೆಗೂ ಅರ್ಹರು’…

ತಮ್ಮನ ಹೆಸರಲ್ಲಿ ಆಡಿ ತಂಡ ಗೆಲ್ಲಿಸಿದಳು
ಮಹಿಳೆಯರ ಟಿ20 ಕ್ರಿಕೆಟ್‌ ಪಂದ್ಯಗಳನ್ನು ನೋಡುತ್ತಿರುವ ಎಲ್ಲ ಕ್ರೀಡಾ ಪ್ರೇಮಿಗಳ ಮನಸ್ಸು ಗೆದ್ದಿರುವ ಆಟಗಾರ್ತಿಯ ಹೆಸರು ಶಫಾಲಿ ವರ್ಮ. ಹರ್ಯಾಣದ ಈ ಹುಡುಗಿಗೆ ಈಗಿನ್ನೂ 16 ವರ್ಷ. ಭಾರತ ತಂಡ ಸೆಮಿಫೈನಲ್‌ ತಲುಪುವವರೆಗೂ ಆಡಿದ ಒಟ್ಟು ಪಂದ್ಯಗಳ ಪೈಕಿ, ನಾಲ್ಕು ಪಂದ್ಯಗಳಲ್ಲಿ ಇವರು ಅಬ್ಬರದಿಂದ ಬ್ಯಾಟ್‌ ಮಾಡಿದ್ದಾರೆ. ಈ ಮೂಲಕ ಲೇಡಿ ಸೆಹ್ವಾಗ್‌ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ. ಶಫಾಲಿಯ ತಂದೆ ಕೂಡ ಅಪಾರ ಉತ್ಸಾಹದ ಕ್ರಿಕೆಟ್‌ ಆಟಗಾರ. ಭಾರತ ತಂಡಕ್ಕೆ ಆಡಬೇಕು ಎನ್ನುವುದು ಅವರ ಕನಸಾಗಿತ್ತಂತೆ. ಆದರೆ ಅದು ನನಸಾಗಲಿಲ್ಲ. ಮಕ್ಕಳ ಮೂಲಕವಾದರೈ ತನ್ನ ಕನಸು ಈಡೇರಿಸಿಕೊಳ್ಳಲು ನಿರ್ಧರಿಸಿದರು, ತಮ್ಮ ಮಗ, ಮಗಳನ್ನೂ ಇಬ್ಬರನ್ನೂ ಕ್ರಿಕೆಟ್‌ ತರಬೇತಿಗೆ ಹಾಕಿದರು.

ಶಪಾಲಿ ಹುಡುಗಿ ಎಂಬ ಕಾರಣವನ್ನೇ ಮುಂದೆ ಮಾಡಿ, ಆ ಊರಿನ ಸ್ಥಳೀಯ ಕ್ಲಬ್‌ನಲ್ಲಿ ತರಬೇತಿ ನೀಡಲು ನಿರಾಕರಿಸಲಾಯಿತಂತೆ, ಆಗ ಶಫಾಲಿ ಏನು ಮಾಡಿದ್ದಳೆಂದರೆ ತಾನು ಹುಡುಗರಂತೆಯೇ ಬಾಬ್‌ ಕಟ್‌ ಮಾಡಿಸಿಕೊಂಡು, ಈಗ ಹುಡುಗರ ಥರಾನೇ ಇದ್ದೀನಿ ತಾನೆ? ನನ್ನನ್ನು ಆಟಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿ, ತರಬೇತಿ ಪಡೆದರಂತೆ! ಅಷ್ಟೇ ಅಲ್ಲ, ಮುಂದೊಮ್ಮೆ ಕ್ರಿಕೆಟ್‌ ಕೂಟವೊಂದು ನಡೆದಾಗ ಶಫಾಲಿ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಆಡಲು ಸಾಧ್ಯವಾಗಿರಲಿಲ್ಲವಂತೆ. ಬದಲು ತಾನೇ ಆಡಿದ್ದಲ್ಲದೆ, ಪ್ರಚಂಡ ಆಟದ ಮೂಲಕ ತಂಡವನ್ನು ಗೆಲ್ಲಿಸಿದ್ದು ಮಾತ್ರವಲ್ಲ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ದರಂತೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next