ಭಾರತ ಕ್ರಿಕೆಟ್ ತಂಡವು ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತಲ್ಲ: ಆಗ ತಂಡದ ನಾಯಕ ಆಗಿದ್ದವನು ಕಪಿಲ್ ದೇವ್. ಭಾರತದ ಕ್ರಿಕೆಟ್ ಆಟಗಾರರು ಏನಿದ್ದರೂ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಲು ಮಾತ್ರ ಯೋಚಿಸುತ್ತಾರೆ ಎಂದು ಎಲ್ಲರೂ ನಂಬಿದ್ದಾಗ, ಎದುರಾಳಿಯಾಗಿ ಯಾರೇ ಇರಲಿ, ಅವರನ್ನು ಸೋಲಿಸಬೇಕು ಎಂದು ಜೊತೆಗಾರರಿಗೆ ಹೇಳಿಕೊಟ್ಟಿದ್ದು, ಬಿರುಗಾಳಿ ಬೌಲಿಂಗ್ ಮತ್ತು ಬಿರುಸಿನ ಬ್ಯಾಟಿಂಗ್‌ನಿಂದ ಪಂದ್ಯ ಗೆಲ್ಲಿಸುವ ಆಲ್‌ರೌಂಡರ್ ಅನ್ನಿಸಿಕೊಂಡಿದ್ದು ಕಪಿಲ್ ದೇವ್ ಅವರ ಹೆಚ್ಚುಗಾರಿಕೆ. ಇಂಥ ಹಿನ್ನೆಲೆಯ ಕಪಿಲ್ ದೇವ್ ಕುರಿತೂ ಕೆಲವು ಕ್ರೀಡಾ ಪತ್ರಕರ್ತರಿಗೆ ಅಸಹನೆ ಇತ್ತು. ಅವರು ಸಂದರ್ಭ ಸಿಕ್ಕಾಗೆಲ್ಲ, ಕಪಿಲ್‌ಗೆ ಬ್ಯಾಟಿಂಗ್ ಗೊತ್ತಿಲ್ಲ, ಆತ ನಂಬಿಕಸ್ತ ಆಟಗಾರ ಅಲ್ಲ, ಆತನನ್ನ ನಂಬಿ ಪಂದ್ಯ ಗೆಲ್ಲಲು ಆಗುವುದಿಲ್ಲ ಎಂದೆಲ್ಲಾ ಬರೆಯುತ್ತಿದ್ದರು. ಇಂಥ ಟೀಕೆಗಳಿಗೆ ಆಟದ ಮೂಲಕವೇ ಉತ್ತರ ಕೊಡಬೇಕು ಎಂದು ಕಪಿಲ್ ದೇವ್, ಅಂಥದೊಂದು ಸಂದರ್ಭಕ್ಕಾಗಿ ಕಾಯುತ್ತಾ ಇದ್ದರು.
Advertisement
1990 ರಲ್ಲಿ ಲಾರ್ಡ್ಸ್ನಲ್ಲಿ ಟೆಸ್ಟ್ ಮ್ಯಾಚ್ ನಡೆದ ಸಂದರ್ಭ. ಭಾರತ 430 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕ್ರೀಸ್‌ನಲ್ಲಿ ಕಪಿಲ್ ದೇವ್ ಮತ್ತು ನರೇಂದ್ರ ಹಿರ್ವಾನಿ ಇದ್ದರು. ಹಿರ್ವಾನಿಗೆ ಬ್ಯಾಟಿಂಗ್ ಬರುತ್ತಿರಲಿಲ್ಲ. ಆತನಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೆ, ಮೊದಲ ಎಸೆತಕ್ಕೇ ಔಟ್ ಆಗುತ್ತಾನೆ ಎಂದು ಎಲ್ಲರಿಗೂ ಗೊತ್ತಿತ್ತು. ಬ್ಯಾಟಿಂಗ್ ಸೈಡ್‌ನ ಕ್ರೀಸ್‌ನಲ್ಲಿ ಆಗ ಕಪಿಲ್ ದೇವ್ ಇದ್ದ. ಫಾಲೋಆನ್ ತಪ್ಪಿಸಿಕೊಳ್ಳಬೇಕು ಅಂದರೆ, ಸತತವಾಗಿ ನಾಲ್ಕು ಸಿಕ್ಸರ್ ಹೊಡೆಯಬೇಕಿತ್ತು. ಬೌಲಿಂಗ್ ಮಾಡುತ್ತಿದ್ದವ, ಅವತ್ತಿನ ಶ್ರೇಷ್ಠ ಸ್ಪಿನ್ನರ್ ಎಡ್ಡಿ ಹೆಮ್ಮಿಂಗ್ಸ್. ಕ್ರೀಡಾ ಪತ್ರಕರ್ತನ ಮಾತು ಕಪಿಲ್‌ಗೆ ನೆನಪಾಗಿದ್ದೇ ಆಗ. ಈತ ಏನು ಮಾಡಿದ ಗೊತ್ತೇ? ಒಂದರ ಹಿಂದೆ ಒಂದರಂತೆ ಸತತವಾಗಿ ನಾಲ್ಕು ಸಿಕ್ಸರ್ ಹೊಡೆದ! ಅದುವರೆಗೆ, ಟೆಸ್ಟ್ ಮ್ಯಾಚ್‌ನಲ್ಲಿ ಯಾರೂ ಸತತವಾಗಿ ನಾಲ್ಕು ಸಿಕ್ಸರ್ ಹೊಡೆದಿರಲಿಲ್ಲ. ಒಂದು ವಿಶ್ವದಾಖಲೆಯ ನಿರ್ಮಾಣ, ಬ್ಯಾಟಿಂಗ್ ಗೊತ್ತಿಲ್ಲ ಎಂಬ ಟೀಕೆಗೆ ಉತ್ತರ, ತಂಡವನ್ನು ಸೋಲಿನಿಂದ ತಪ್ಪಿಸಿದ ಸಂತೃಪ್ತಿ… ಇಷ್ಟನ್ನೂ ಸಾಧಿಸಿದ ಹೆಗ್ಗಳಿಕೆ ಅವತ್ತು ಕಪಿಲ್ ದೇವ್ ಪಾಲಾಯಿತು.
ಜಗತ್ತಿನ ಶ್ರೇಷ್ಠ ಕ್ರಿಕೆಟ್ ಆಟಗಾರರು ಎಂದು ಪಟ್ಟಿ ಮಾಡಲು ಹೊರಟರೆ, ತಪ್ಪದೇ ಸೇರಿಸಬೇಕಾದ ಹೆಸರು ಜಿ.ಆರ್.ವಿಶ್ವನಾಥ್ ಅವರದ್ದು. ಕೆಲವು ಆಟಗಾರರನ್ನು ದಾಖಲೆಯ ಪುಸ್ತಕದ ಮೂಲಕ ಅಳೆಯುವುದಕ್ಕೆ ಸಾಧ್ಯವಿಲ್ಲ. ದಾಖಲೆ ಲೆಕ್ಕಾಚಾರದಲ್ಲಿ ಅವರ ಸಾಧನೆ ಕಡಿಮೆ ಅನ್ನಿಸಬಹುದು. ಆದರೆ ನಿರ್ದಿಷ್ಟ ಸಂದರ್ಭ, ಸನ್ನಿವೇಶದಲ್ಲಿ ಅವರ ಆಟಗಾರಿಕೆಯಿಂದ ಅದ್ಭುತ ಲಾಭಗಳಾಗಿರುತ್ತವೆ. ಅವೆಲ್ಲ ಸಾರ್ವಕಾಲಿಕವಾಗಿ ನೆನಪಿರುವಂತಹ ಇನಿಂಗ್ಸ್‌ಗಳು. ವಿಶ್ವನಾಥ್ ಅವರು ಈ ಮಾದರಿಯ ಕ್ರಿಕೆಟಿಗ. ಭಾರತಕ್ಕೆ ಗಾವಸ್ಕರ್ ಅವರಂಥ 10 ಜನ ಆಟಗಾರರು ಬರಬಹುದು. ಆದರೆ ವಿಶ್ವನಾಥ್ ಅವರಂಥ ಮತ್ತೂಬ್ಬ ಆಟಗಾರ ಬರಲಾರ ಎಂದು ಕ್ರೀಡಾ ವಿಮರ್ಶಕರೆಲ್ಲ ಒಕ್ಕೊರಲಿನಿಂದ ಹೇಳಿದ್ದರು ಎಂಬುದೇ ವಿಶ್ವನಾಥ್ ಅವರ ಹಿರಿಮೆ ಎಂಥದು ಎಂಬುದಕ್ಕೆ ಸಾಕ್ಷಿ. ಇಂಥ ಹಿನ್ನೆಲೆಯ ವಿಶ್ವನಾಥ್, 14 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಒಟ್ಟು 91 ಟೆಸ್ಟ್ ಆಡಿದ ಅವರು, 14 ಶತಕ ಹೊಡೆದಿದ್ದರು. ವಿಶೇಷವೇನು ಗೊತ್ತೇ? ಅವರು ಶತಕ ಹೊಡೆದಾಗಲೆಲ್ಲ, ಭಾರತ ತಂಡ ಗೆದ್ದಿದೆ ಅಥವಾ ಸೋಲಿನಿಂದ ಪಾರಾಗಿ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ!