Advertisement

ಹಳೇ ಬ್ಯಾಟು ಹಳೇ ಚೆಂಡು

07:50 PM Dec 27, 2019 | Lakshmi GovindaRaj |

ಬೆಂಕಿ ಚೆಂಡಿಗೆ ಬಿರುಗಾಳಿ ಉತ್ತರ
80ರ ದಶಕವನ್ನೂ, ಕ್ರಿಕೆಟ್‌ ಲೋಕದ ಸ್ವರ್ಣಯುಗ ಎಂದು ಕರೆಯುವುದುಂಟು. ಏಕೆಂದರೆ ಕ್ರಿಕೆಟ್‌ ಜಗತ್ತು ಕಂಡಂಥ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌, ಬೌಲರ್‌, ವಿಕೆಟ್‌ ಕೀಪರ್‌ಗಳೆಲ್ಲ ಆ ದಿನಗಳಲ್ಲಿ ಪ್ರತಿ ತಂಡದಲ್ಲೂ ಇದ್ದರು. ವೇಗದ ಬೌಲರ್‌ಗಳು ಎಕ್ಸ್‌ಪ್ರೆಸ್‌ ವೇಗದಲ್ಲಿ ಎಸೆದ ಚೆಂಡಿನ ವೇಗ ಎಷ್ಟಿರುತ್ತಿತ್ತು ಎಂದರೆ ಎಷ್ಟೋ ಸಲ ವಿಕೆಟ್‌ಗಳು ಎರಡು ತುಂಡಾಗಿರುತ್ತಿದ್ದವು. ಇಂಥ ಬಿರುಗಾಳಿ ವೇಗದ ಬೌಲಿಂಗ್‌ಗೆ ಕೇರ್‌ ಮಾಡದೆ ಆಡುವ ಪ್ರಚಂಡರೂ ಇದ್ದರು. ಅಂಥವರ ಪೈಕಿ ನಮ್ಮ ಸಂದೀಪ್‌ ಪಾಟೀಲ್‌ಗೆ ಮೊದಲ ಸ್ಥಾನ. 1980 ರಿಂದ 86ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಪಾಟೀಲ್‌, ಬಿಡುಬೀಸಿನ ಹೊಡೆತಗಳಿಂದಲೇ ಪ್ರಸಿದ್ಧರಾಗಿದ್ದರು. ಅವತ್ತಿನ ಸಂದರ್ಭದಲ್ಲಿ ಇಂಗ್ಲೆಂಡಿನ ಬಾಬ್‌ ವಿಲ್ಲೀಸ್‌ಗೆ ಬೆಂಕಿ ಚೆಂಡಿನ ಬೌಲರ್‌ ಎಂಬ ಹೆಸರಿತ್ತು.

Advertisement

ಆತ ವೇಗವಾಗಿ ಎಸೆದ ಚೆಂಡು ವಿಕೆಟ್‌ಗಳನ್ನು ಮುರಿದು ಹಾಕುವುದು ಮಾಮೂಲಿಯಾಗಿತ್ತು. ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಆತನಿಗೆ ಹೆದರಿಕೊಂಡೇ ಬ್ಯಾಟ್‌ ಮಾಡುತ್ತಿದ್ದರು. ಈ ಕಾರಣದಿಂದಲೇ ಬಾಬ್‌ ವಿಲ್ಲೀಸ್‌ಗೆ ಒಂದು ಓವರ್‌ನಲ್ಲಿ ಎರಡಕ್ಕಿಂತ ಹೆಚ್ಚು ಬೌಂಡರಿ ಹೊಡೆಯುವ ಸಾಹಸವನ್ನೂ ಯಾರು ಮಾಡುತ್ತಿರಲಿಲ್ಲ. ಆದರೆ ಅಂಥದೊಂದು ನಂಬಿಕೆಯನ್ನು ಉಲ್ಟಾ ಮಾಡಿದಾತ ಸಂದೀಪ್‌ ಪಾಟೀಲ್‌, 1982ರಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ವಿಲ್ಲೀಸ್‌ ಅವರ ಒಂದು ಓವರ್‌ನ ಎಲ್ಲ ಎಸೆತಗಳನ್ನೂ ಬೌಂಡರಿ ಗೆರೆ ದಾಟಿಸಿದರು. ಈ ಮೂಲಕ ಟೆಸ್ಟ್‌, ಕ್ರಿಕೆಟ್‌ನಲ್ಲಿ 1 ಓವರ್‌ನ ಎಲ್ಲ ಎಸೆತಗಳನ್ನು ಬೌಂಡರಿ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಅನ್ನಿಸಿಕೊಂಡರು.

ಅಹಂ ತಲೆಗೇರಿದಾಗ !
ಕೆಲವೊಮ್ಮೆ ದಿಢೀರ್‌ ಸಿಗುವ ಯಶಸ್ಸು , ಕೆಲವರಿಗೆ ಶಾಪದಂತೆ ಪರಿಣಮಿಸುವುದಿದೆ. ಹೇಗಿದ್ದರೂ ಗೆದ್ದಿದ್ದೇನೆ, ಇದೇ ಜಗತ್ತು ನನ್ನನ್ನು ಬೆರಗಿನಿಂದ, ಅಭಿಮಾನದಿಂದ ನೋಡುತ್ತದೆ. ನನ್ನ ಆಟಕ್ಕೆ ಮಾಂತ್ರಿಕ ಶಕ್ತಿಯಿದೆ. ನಾನು ಚೆಂಡೆಸೆದರೆ ಸಾಕು: ವಿಕೆಟ್‌ ಬೀಳುತ್ತದೆ ಎಂಬ ಭ್ರಮೆಯಲ್ಲಿ ಆಟಗಾರರು ಮೈ ಮೆರೆಯುವುದುಂಟು. ಆದರೆ ಕಾಲವೆಂಬುದು ಯಾರಿಗೂ ಕಾಯುವುದಿಲ್ಲ. ಯಾರ ವಿಷಯದಲ್ಲೂ ರೀಯಾಯಿತಿ ತೋರಿಸುವುದಿಲ್ಲ. ಅಹಂಕಾರದ ಮಧ್ಯ ಉಳಿದವನನ್ನು ಒಮ್ಮೆ ತಿರಸ್ಕಾರದಿಂದ ನೋಡಿ ಮುಂದೆ ಹೋಗುತ್ತದೆ, ಅಷ್ಟೆ.

ಹೀಗೆಲ್ಲ ಅಂದುಕೊಂಡಾಗಲೇ ನೆನಪಾಗುವಾತ ನರೇಂದ್ರ ಹಿರ್ವಾನಿ. 1988ರಿಂದ 1996ರವರಗೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಹಿರ್ವಾನಿಗೆ ಸಿಕ್ಕಿತ್ತು. ಆರಂಭದಲ್ಲಿ ಈತ ಲೆಗ್‌ಸ್ಪಿನ್‌ ಬೌಲಿಂಗ್‌ನಿಂದ ಆ ದಿನಗಳ ಪ್ರಚಂಡ ಬೌಲರ್‌ಗಳನ್ನು ಔಟ್‌ ಮಾಡಿದ್ದರು. ಮೇಲಿಂದ ಮೇಲೆ 3,4 ವಿಕೆಟ್‌ ಪಡೆದದ್ದು ನಿಜ. ಆದರೆ ಈ ಯಶಸ್ಸು ಆತನ ತಲೆ ತಿರುಗುವಂತೆ ಮಾಡಿತು. ಎಷ್ಟೇ ಹೆಸರು ಮಾಡಿದರು ನಿರಂತರವಾಗಿ ಅಭ್ಯಾಸ ಮಾಡಲೇಬೇಕು ಎಂಬುದನ್ನು ಈತ ಮರೆತೇಬಿಟ್ಟ. ಪರಿಣಾಮ ಏನಾಯಿಂತೆಂದರೆ, ಅದುವರೆಗೂ ಟೆಸ್ಟ್‌ನಲ್ಲಿ ಐದೈದು ವಿಕೆಟ್‌ ಪಡೆಯುತ್ತಿದ್ದ ಆತ, ನಂತರದಲ್ಲಿ ತಂಡದಿಂದಲೇ ಹೊರಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next