ಬೆಂಗಳೂರು: ಒಳಮೀಸಲು ವಿಚಾರಕ್ಕೆ ಸಂಬಂಧಪಟ್ಟಂತೆ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಅತಿ ಶೀಘ್ರದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ತೀರ್ಮಾನಿಸಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ನಾರಾಯಣ ಸ್ವಾಮಿ ಶುಕ್ರವಾರ ಸಂಘ-ಪರಿವಾರದ ಹಿರಿಯರನ್ನು ಭೇಟಿ ಮಾಡಿ ಮಾತಿಕತೆ ನಡೆಸಿದ್ದು, ಒಳಮೀಸಲು ಜಾರಿ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ ಪಕ್ಷದ ವತಿಯಿಂದ ಒಳಮೀಸಲು ಪ್ರಸ್ತಾಪವನ್ನು ಆದಷ್ಟು ಶೀಘ್ರ ಜಾರಿ ಮಾಡಲು ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸುವಂತೆ ನಿರ್ದೇಶನ ನೀಡಲಾಗಿದೆ.
ಈ ವಿಚಾರವನ್ನು ಸಂಘ-ಪರಿವಾರದ ನಾಯಕರೇ ಪ್ರಧಾನವಾಗಿ ಪರಿಗಣಿಸಿದ್ದಾರೆ. ಹೀಗಾಗಿ ರಾಜಕೀಯ ನಿರ್ಣಯ ತೆಗೆದುಕೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಿ ಪರಿಣಮಿಸಿದೆ. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಈಗಾಗಲೇ ಸರ್ಕಾರ ಸಂಪುಟ ಉಪಸಮಿತಿ ರಚನೆ ಮಾಡಿದ್ದು, ಮೀಸಲು ಹಂಚಿಕೆ ವಿಧಾನವನ್ನು ಇದು ನಿರ್ಧರಿಸಲಿದೆ.
ಇದನ್ನೂ ಓದಿ:ಬಿಲಾವ್ ಭುಟ್ಟೋ ಹೇಳಿಕೆಯಿಂದ ಪಾಕ್ ಕೀಳು ಮನಸ್ಥಿತಿ ಬಯಲಾಗಿದೆ: ಯಡಿಯೂರಪ್ಪ
ಈ ಮೊದಲು ಉದ್ಯೋಗ ಹಾಗೂ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗೆ ಶೇ.15ರಷ್ಟು ಮೀಸಲು ಇತ್ತು. ಆದರೆ ರಾಜ್ಯ ಸರ್ಕಾರ ಆ ಮಿತಿಯನ್ನು ಈಗಾಗಲೇ ಶೇ.17ಕ್ಕೆ ಹೆಚ್ಚಳ ಮಾಡಿದೆ. ಹೀಗಾಗಿ ಹೆಚ್ಚುವರಿಯಾದ ಮೀಸಲು ಪ್ರಮಾಣಕ್ಕೆ ಅನುಗುಣವಾಗಿ ಒಳಮೀಸಲು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿ ತಿಂಗಳಲ್ಲಿ ಸರ್ಕಾರಕ್ಕೆ ಪ್ರಸ್ತಾಪ ರವಾನೆಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.