Advertisement
40,000ಕ್ಕೂ ಹೆಚ್ಚು Likesಈ ಪೋಸ್ಟ್ ಹಾಕಿದ ಒಂದೇ ದಿನದಲ್ಲಿ ಅದಕ್ಕೆ 40,000ಕ್ಕೂ ಹೆಚ್ಚು ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದಿವೆ. ಅಷ್ಟೇ ಅಲ್ಲ ಆ ಪೋಸ್ಟನ್ನು ಫೇಸ್‌ಬುಕ್‌ನಲ್ಲಿ 2,200 ಮಂದಿ ಶೇರ್ ಮಾಡಿಕೊಂಡಿದ್ದಾರೆ! ಆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುನಿಲ್ ಅವರ ಜನಸೇವೆ ಬಗೆಗೆ ಬರಹ ವೈರಲ್ ಆಗಿಬಿಟ್ಟಿದೆ. ಹಾಗಾದರೆ ಸುನಿಲ್ ಎಂಬ 28 ವರ್ಷದ ತುಳುನಾಡಿನ ಈ ಕ್ಯಾಬ್ ಡ್ರೈವರ್ ಮಾಡಿದ್ದು ಏನು ಎಂಬ ಕುತೂಹಲ ಸಹಜ.
ಹೌದು ಒಬ್ಬ ಕ್ಯಾಬ್ ಡ್ರೈವರ್ ಕೇವಲ 24 ಗಂಟೆಯೊಳಗೆ ಇಡೀ ದೇಶದ ಗಮನಸೆಳೆದಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ಮಂಗಳೂರಿನಲ್ಲಿ ಓಲಾ ಕಾರು ಓಡಿಸುತ್ತಿರುವ ಸುನಿಲ್ ಮೊಬೈಲ್‌ಗೆ ಮಂಗಳವಾರ ಸಂಜೆ ಎಂದಿನಂತೆ ಆನ್‌ಲೈನ್ ಮೂಲಕ ವ್ಯಕ್ತಿಯೊಬ್ಬರಿಂದ ಬಾಡಿಗೆಗೆ ಕರೆ ಬರುತ್ತದೆ. ಆ ಪ್ರಕಾರ ಸುನಿಲ್ ಗ್ರಾಹಕರಾದ ಅಶೋಕನಗರದಲ್ಲಿರುವ ಕಾವ್ಯಾ ರಾವ್ ಅವರ ಮನೆಗೆ ಆಗಮಿಸುತ್ತಾರೆ. ಅಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ತಮ್ಮ ತಂದೆಯನ್ನು ನಗರದ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಸುನಿಲ್ ಅವರು ಕಾವ್ಯಾ ಅವರ ತಂದೆಯನ್ನು ನಗರದ ಪ್ರಮುಖ ಆಸ್ಪತ್ರೆಯೊಂದಕ್ಕೆ ಡ್ರಾಪ್ ಮಾಡುತ್ತಾರೆ. ಒಟ್ಟು ಕಾರು ಬಾಡಿಗೆ 140 ರೂ. ಆಗಿದ್ದು, ಅದನ್ನು ಕಾವ್ಯಾ ಅವರ ತಾಯಿ ನೀಡಲು ಹೋದಾಗ ಸುನಿಲ್ ಅದನ್ನು ನಿರಾಕರಿಸುತ್ತಾರೆ. ಎಷ್ಟೇ ಒತ್ತಾಯ ಮಾಡಿದರೂ ಸುನಿಲ್ ಬಾಡಿಗೆ ಪಡೆದುಕೊಳ್ಳುವುದಿಲ್ಲ. ಕೊನೆಗೆ ಪೆಟ್ರೋಲ್ ಚಾರ್ಜ್ ಆದರೂ ತೆಗೆದುಕೊಳ್ಳಿ ಅಂದರೆ ಅದನ್ನೂ ನಿರಾಕರಿಸುತ್ತಾರೆ. ಸುನಿಲ್ ಅವರ ಸೇವಾ ಮನೋಭಾವ ನೋಡಿದ ಕಾವ್ಯಾ ಅವರ ತಾಯಿಗೆ ಆಶ್ಚರ್ಯ ಆಗುತ್ತದೆ. ‘ಯಾಕೆ ನನ್ನಿಂದ ಹಣ ಪಡೆದುಕೊಂಡಿಲ್ಲ’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಸುನಿಲ್ ‘ನನ್ನ ಕಾರಿನಲ್ಲಿ ಬಡ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬಾಡಿಗೆಯಾಗಿದ್ದರೆ, ಅದಕ್ಕೆ ಹಣ ಪಡೆದುಕೊಳ್ಳುವುದಿಲ್ಲ. ಬದಲಿಗೆ ಇದು ನನ್ನ ಉಚಿತ ಸೇವೆಯಾಗಿರುತ್ತದೆ’ ಎಂದು ಹೇಳುತ್ತಾರೆ. ಈ ಘಟನೆಯನ್ನು ಮನೆಗೆ ಬಂದು ತಾಯಿ, ಮಗಳು ಕಾವ್ಯಾ ಅವರಿಗೆ ವಿವರಿಸುತ್ತಾರೆ. ಅದನ್ನು ಕೇಳಿ ಕಾವ್ಯಾ ಮೂಕವಿಸ್ಮಿತರಾಗುತ್ತಾರೆ. ಬಳಿಕ ಸುನಿಲ್ ಅವರ ಈ ಜನಸೇವೆ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಘಟನೆಯನ್ನು ವಿವರಿಸುತ್ತಾ ಶೇರ್ ಮಾಡುತ್ತಾರೆ. ಮಂಗಳವಾರ ಸಂಜೆ ಹಾಕಿದ ಈ ಪೋಸ್ಟ್ ದೇಶದೆಲ್ಲೆಡೆ ಶೇರ್ ಆಗಿ ಇದೀಗ ಸುನಿಲ್‌ಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ಕಿರುಕುಳ ಮತ್ತಿತರ ಕಾರಣಗಳಿಗೆ ಇಡೀ ಕ್ಯಾಬ್ ಡ್ರೈವರ್ ಸಮುದಾಯವನ್ನೇ ದೂಷಿಸಲಾಗುತ್ತಿದೆ. ಇಂತಹ ಅಹಿತಕರ ಘಟನೆಗಳನ್ನು ಉಲ್ಲೇಖೀಸುತ್ತ ಕಾವ್ಯಾ ಬರೆದಿರುವ ಸುನಿಲ್ ಬಗೆಗಿನ ಈ ಫೇಸ್‌ಬುಕ್ ಬರಹಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಒಂದೇ ದಿನದಲ್ಲಿ ಸುನಿಲ್ ಹೀರೋ ಎನಿಸಿಕೊಂಡಿರುವುದು ವಿಶೇಷ.
Related Articles
ಈ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ಸುನಿಲ್ ‘ನಾನು ಮಂಗಳೂರಿನಲ್ಲಿ ಎರಡು ವರ್ಷದಿಂದ ಓಲಾ ಕ್ಯಾಬ್ ಓಡಿಸುತ್ತಿದ್ದೇನೆ. ಎಂಟು ತಿಂಗಳ ಹಿಂದೆ ತಾಯಿ ಸಾವನ್ನಪ್ಪಿದ್ದಾರೆ. ಅವರ ನೆನಪಿನಲ್ಲಿ ಬಡರೋಗಿಗಳಿಗೆ ಏನಾದರೂ ಸೇವೆ ಮಾಡಬೇಕೆಂದು ಯೋಚಿಸಿದ್ದೆ. ಆಗ ನನಗೆ ಈ ರೀತಿಯ ಜನಸೇವೆ ಮಾಡುವ ಮನಸ್ಸು ಬಂದಿದೆ. ಅಂದಿನಿಂದ ಯಾರೇ ನನ್ನ ಕ್ಯಾಬ್ ಅನ್ನು ಆಸ್ಪತ್ರೆಗೆ ಹೋಗುವ ಉದ್ದೇಶಕ್ಕೆ ಬಾಡಿಗೆಗೆ ಬುಕ್ ಮಾಡಿದರೆ, ಅಂಥವರಿಂದ ಹಣ ಪಡೆದುಕೊಳ್ಳುವುದಿಲ್ಲ. ಅದರಂತೆ ಕಾವ್ಯಾ ರಾವ್ ಕೂಡ ಮಂಗಳವಾರ ಸಂಜೆ ಅಶೋಕ ನಗರದಿಂದ ನನ್ನ ಕ್ಯಾಬ್ ಬುಕ್ ಮಾಡಿ ತಮ್ಮ ತಂದೆಯನ್ನು ಆಕೆಯ ತಾಯಿ ಜತೆಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದು ನನ್ನ ಜನಸೇವೆ ಆಗಿರುವ ಕಾರಣ ಮಾಮೂಲಿಯಂತೆ ಅವರಿಂದಲೂ ಹಣ ಪಡೆದುಕೊಂಡಿರಲಿಲ್ಲ ಅಷ್ಟೇ’ ಎನ್ನುತ್ತಾರೆ.
Advertisement
‘ಆದರೆ, ನನ್ನ ಬಗ್ಗೆ ಈ ರೀತಿ ಫೇಸ್‌ಬುಕ್‌ನಲ್ಲಿ ಬರೆದಿರುವ ವಿಚಾರ ನನಗೆ ಗೊತ್ತಿರಲಿಲ್ಲ. ದೇಶದೆಲ್ಲೆಡೆಯಿಂದ ನನಗೆ ಕರೆ ಬರುವಾಗಲೇ ವಿಷಯ ಗೊತ್ತಾಗಿದ್ದು. ಕೇವಲ ಒಂದು ದಿನದಲ್ಲಿ ಸಾವಿರಾರು ಕರೆಗಳು ಬಂದಿವೆ. ಜನರ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಗುತ್ತಿದೆ. ಆದರೆ ಇದರಿಂದ ನನಗೆ ಯಾವುದೇ ಪ್ರಚಾರ ಬೇಕಾಗಿಲ್ಲ. ಯಥಾಪ್ರಕಾರ ನನ್ನ ಈ ಸೇವೆಯನ್ನು ಮುಂದುವರಿಸುತ್ತೇನೆ’ ಎಂದು 10ನೇ ತರಗತಿ ಓದಿರುವ ಸುನಿಲ್ ಹೇಳಿದ್ದಾರೆ.
– ಧನ್ಯಾ ಬಾಳೆಕಜೆ