Advertisement

 ಒಕ್ಕಲಿಗ ಗೌಡ ಸೇ. ಸಂಘದ ವಾರ್ಷಿಕ ಸಮಾವೇಶ

03:12 PM Dec 24, 2017 | Team Udayavani |

ಪುತ್ತೂರು: ಪ್ರೀತಿಯೇ ಜಗತ್ತಿನ ಮೂಲ. ಪ್ರೀತಿಯಿಂದಲೇ ಜಗತ್ತು ಮುಂದುವರೆಯುತ್ತದೆ. ಪ್ರೀತಿಯೇ ಜಗತ್ತಿನ ಜೀವ ಎಂಬ ಅರಿವು ಎಲ್ಲರಿಗೂ ಬಂದಾಗ ಜಗತ್ತಿನ ಅಂಧಕಾರ ಸರಿದು ಸಮೃದ್ಧಿಯಾಗುತ್ತದೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು. ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ವತಿಯಿಂದ ಗೌಡ ಸಂಘಗಳ ಸಹಯೋಗದೊಂದಿಗೆ ಶನಿವಾರ ನಡೆದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

Advertisement

ಪ್ರೀತಿ, ನಂಬಿಕೆ, ಶ್ರದ್ಧೆ ಕಳೆದುಕೊಂಡ ಕಾರಣದಿಂದ ಜಗತ್ತು ಇಂದು ಈ ಸ್ಥಿತಿಗೆ ತಲುಪಿದೆ. ಭೀತಿ, ಸ್ವಾರ್ಥ ಇರುವಲ್ಲಿ ಭಯವೂ ಇರುತ್ತದೆ. ಹೃದಯ ಮತ್ತು ಮನಸ್ಸಿನಲ್ಲಿ ಕತ್ತಲಿದ್ದರೆ ಬದುಕಿನಲ್ಲೂ ಕತ್ತಲು ಆವರಿಸುತ್ತದೆ. ಆರಂಭದಲ್ಲಿ ಪ್ರೀತಿಯಿಂದ ನಮ್ಮ ಮನೆಯಲ್ಲಿ ಸ್ವರ್ಗ ಮಾಡಿಕೊಳ್ಳಬೇಕು. ಇದಕ್ಕಾಗಿ ಭಗವಂತನ ಅಸ್ತಿತ್ವದ ನಂಬಿಕೆ, ಸ್ಮರಣೆ ಅತಿ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಗೌರವಾಧ್ಯಕ್ಷ ಹಾಗೂ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಮಾತನಾಡಿ, ಆತ್ಮವಿಶ್ವಾಸ, ದೃಢಸಂಕಲ್ಪ, ಕೃತಜ್ಞತಾಭಾವವು ವ್ಯಕ್ತಿಯನ್ನು ಸಮಾಜಕ್ಕೆ ಕೊಡುಗೆಯಾಗಿ ಮಾಡುತ್ತದೆ. ಯಶಸ್ಸು ಎಂಬುದು ವೈಯಕ್ತಿಕ ಬೆಳವಣಿಗೆಯಲ್ಲ. ನಮ್ಮಿಂದ ಸಮುದಾಯ, ಸಮಾಜದ ಬೆಳವಣಿಗೆ ಎಷ್ಟು ಸಾಧ್ಯವಾಗಿದೆ ಎಂಬುದೇ ಯಶಸ್ಸು ಎಂದು ಅಭಿಪ್ರಾಯಿಸಿದರು. ಪುತ್ತೂರು ಸಂಘದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಜ್ಞಾನಸುಧೆ ಬಿಡುಗಡೆ, ವಿದ್ಯಾನಿಧಿಗೆ ಚಾಲನೆ
ಸ್ವಾಮೀಜಿಯವರ ಗ್ರಾಮ ಭೇಟಿ ಕಾರ್ಯಕ್ರಮದ ವರದಿ ಹಾಗೂ ಸಂದೇಶಗಳ ಜ್ಞಾನಸುಧೆ ಪುಸ್ತಕವನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು. ಯುವ ಗೌಡ ಸಂಘದ ನೇತೃತ್ವದಲ್ಲಿ ಬಡ ವಿದ್ಯಾರ್ಥಿಗಳ ನೆರವಿಗಾಗಿ ಆರಂಭಿಸಲಾದ ವಿದ್ಯಾ ದತ್ತುನಿಧಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ದತ್ತಿನಿಧಿಗೆ ನೆರವು ನೀಡಿದವರನ್ನು ಶ್ರೀಗಳು ಗೌರವಿಸಿದರು.

ದಶ ಕಾರ್ಯಕ್ರಮಗಳ ಮಾಹಿತಿ
ಒಕ್ಕಲಿಗ ಗೌಡ ಸಮುದಾಯಭವನದ ದಶಮಾನೋತ್ಸವದ ಅಂಗವಾಗಿ 10 ತಿಂಗಳು ಹಮ್ಮಿಕೊಂಡಿರುವ ದಶ ಕಾರ್ಯಕ್ರಮಗಳ ಕುರಿತು ಸಮುದಾಯ ಭವನ ದಶಮಾನೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು ಮಾಹಿತಿ ನೀಡಿದರು. ಮಹಿಳಾ ಗೌಡ ಸಂಘದ ವತಿಯಿಂದ ಮಹಿಳಾ ಸಾಧಕರಿಗೆ ಗೌರವಾರ್ಪಣೆ ನಡೆಯಿತು. ಉತ್ತಮ ಕಾರ್ಯನಿರ್ವಹಣೆ ತೋರಿದ ಒಕ್ಕಲಿಗ ಸ್ವಸಹಾಯ ಸಂಘಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

Advertisement

ಮುಖ್ಯ ಅತಿಥಿಯಾಗಿದ್ದ ಸುಳ್ಯ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ನ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅವರು, ಪುತ್ತೂರು ಗೌಡ ಸಂಘಗಳ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಕ್ಕಲಿಗ ಗೌಡ ಸೇವಾ ಸಂಘ ಸಲಹಾ ಸಮಿತಿಯ ಅಧ್ಯಕ್ಷ ಚಿದಾನಂದ ಬೈಲಾಡಿ, ಗೌಡ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಗಂಗಾಧರ ಗೌಡ ಕೆಮ್ಮಾರ, ಯುವ ಗೌಡ ಸಂಘದ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ನಂದಿಲ, ಮಹಿಳಾ ಸಂಘದ ಅಧ್ಯಕ್ಷೆ ಯಶೋದಾ ಕೆ. ಗೌಡ, ಪ್ರ. ಕಾರ್ಯದರ್ಶಿ ಜಯಂತಿ ಆರ್‌. ಗೌಡ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ ಅಧ್ಯಕ್ಷ ಎ.ವಿ. ನಾರಾಯಣ, ದಿವ್ಯಪ್ರಸಾದ್‌ ಉಪಸ್ಥಿತರಿದ್ದರು.

ಗೌಡ ಸಂಘದ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ ಸ್ವಾಗತಿಸಿ, ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮನೋಹರ್‌ ಕೆ.ವಿ. ವಂದಿಸಿದರು. ವಸಂತ ಕುಮಾರ್‌ ವೀರಮಂಗಲ ಹಾಗೂ ಉದಯ ಕುಮಾರ್‌ ನಿರ್ವಹಿಸಿದರು. ಬೆಳಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ವೈಭವ ನಡೆಯಿತು.

ಗುರುವಿಗೆ ಪರಮೋಚ್ಛ ಸ್ಥಾನ 
ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಗುರುವಿಗೆ ಪರಮೋತ್ಛ ಸ್ಥಾನವನ್ನು ನಮ್ಮ ಸಮಾಜ ನೀಡಿದೆ. ಮನುಷ್ಯನನ್ನು ಅಂತರಂಗದ ಶುದ್ಧ ಭಾವಕ್ಕೆ ಕೊಂಡೊಯ್ಯುವುದು ಗುರು. ಗುರುಗಳು ಗ್ರಾಮ ಭೇಟಿಯ ಮೂಲಕ ನೀಡಿದ ಸಂದೇಶಗ ಳೊಂದಿಗೆ ಮನೆ ಮನೆಗಳನ್ನು ಪರಿವರ್ತಿಸುವಲ್ಲಿ ಜ್ಞಾನಸುಧೆ ಪುಸ್ತಕ ಸಹಕಾರಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next