Advertisement

ಛೇ! ಅದೆಂಥ ಪರೀಕ್ಷೆ

05:58 PM Apr 17, 2018 | |

ಅದು ಎಸ್ಸೆಸ್ಸೆಲ್ಸಿ ಪಬ್ಲಿಕ್‌ ಪರೀಕ್ಷೆ ಟೈಮು. ಪರೀಕ್ಷೆ ಬರೆಯಬೇಕಿದ್ದ ನಾನು ಅಂದು ತಡವಾಗಿ ಎದ್ದು, ಯಡವಟ್ಟು ಮಾಡಿಕೊಂಡೆ. ಬೆಳಗ್ಗಿನ ನಿತ್ಯ ಕರ್ಮಗಳನ್ನು ಮುಗಿಸಿ, ಬಸ್ಸು ಹಿಡಿಯಬೇಕು ಎನ್ನುವಷ್ಟರಲ್ಲಿ ನನ್ನ ದುರಾದೃಷ್ಟಕ್ಕೆ ಆ ಬಸ್ಸೂ ಕೈಕೊಟ್ಟಿತು. ನನ್ನೂರು ಮೊದಲೇ ಕುಗ್ರಾಮ. ಸರಿಯಾಗಿ ರೋಡು, ಕರೆಂಟು, ಕುಡಿವ ನೀರು ಕಾಣದೇ, ಆಧುನಿಕ ಸೌಲಭ್ಯಗಳಿಂದ ಅನಾಥವಾಗಿದ್ದಂಥ ಹಳ್ಳಿ. 

Advertisement

ನನ್ನೂರಿನಿಂದ ಪರೀಕ್ಷಾ ಕೇಂದ್ರಕ್ಕೆ 12 ಕಿ.ಮೀ. ದೂರವಿತ್ತು. ನನ್ನಲ್ಲಿ ಸೈಕಲ್‌ ಬಿಟ್ಟು ಬೇರೆ ವಾಹನ ಇದ್ದಿರಲಿಲ್ಲ. ಮೊದಲೇ ಪರೀಕ್ಷೆಗೆ ಲೇಟಾಗಿತ್ತು, “ಏನಪ್ಪಾ ಮಾಡೋದು?’ ಎಂದು ಅತ್ತಿಂದಿತ್ತಾ ನೋಡುತ್ತಾ ತಲೆಯ ಮೇಲೆ ಕೈಹೊತ್ತು ಕುಳಿತೆ. ಪರೀಕ್ಷೆ ಆರಂಭಕ್ಕೆ ಉಳಿದಿರುವುದು ಇನ್ನು ಇಪ್ಪತ್ತೇ ನಿಮಿಷಗಳು ಮಾತ್ರ. ಎದೆಯಲ್ಲಿ ಹೃದಯ ಚಂಡೆ ಬಾರಿಸುತ್ತಿತ್ತು. ಮೈಯೆಲ್ಲ ಬೆವರುತ್ತಿತ್ತು.

ಅಷ್ಟು ಹೊತ್ತು ಕಾದು ಕುಳಿತರೂ ಯಾವ ವಾಹನಗಳೂ ಅಲ್ಲಿಗೆ ಸುಳಿಯಲಿಲ್ಲ. ಮುಗೀತು ಕತೆ ಅಂತಂದುಕೊಂಡು, ಸೈಕಲ್‌ ಸ್ಟಾಂಡ್‌ ತೆಗೆಯಲು ಹೊರಟಿದ್ದಷ್ಟೇ… ಅತ್ತಲಿಂದ ಒಂದು ಬೈಕ್‌ ಬಂತು. ಅವನ ಕಾಲಿಗೆ ಬಿದ್ದಾದರೂ ಸೈ, ಎಕ್ಸಾಮ್‌ ಹಾಲ್‌ಗೆ ಡ್ರಾಪ್‌ ಕೇಳಬೇಕು ಅಂತ ನಿರ್ಧರಿಸಿ, ಕೈ ಅಡ್ಡಹಾಕಿದೆ. “ಸರ್‌ ಸರ್‌ ಪ್ಲೀಸ್‌ ಸರ್‌, ದಯವಿಟ್ಟು ಸಹಾಯ ಮಾಡಿ ಸರ್‌… ಎಕ್ಸಾಂ ಬರೆಯೋಕೆ ಹೋಗ್ತಾ ಇದ್ದೀನಿ,

ಬಸ್‌ ತಪ್ಪಿದೆ ಸರ್‌’ ಎಂದು ಗೋಗರೆದಾಗ, ತಾನು ಬೇರೆ ಮಾರ್ಗದಲ್ಲಿ ಹೋಗುತ್ತಿರುವುದಾಗಿ ತಿಳಿಸಿದ. ಮತ್ತಷ್ಟು ವಿನಂತಿಸಿಕೊಂಡಾಗ, ಮೇನ್‌ ರೋಡ್‌ನ‌ವರೆಗೆ ಮಾತ್ರ ಬಿಡುವುದಾಗಿ ಹೇಳಿ ಬೈಕ್‌ ಏರಲು ಅನುಮತಿ ಕೊಟ್ಟ. ಪಯಣದಲ್ಲಿ ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಬೈಕ್‌ ಅನ್ನು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತಂದು ನಿಲ್ಲಿಸಿದ.

ಆಗ ಪರೀಕ್ಷೆ ಆರಂಭಕ್ಕೆ ಉಳಿದಿದ್ದು ಕೇವಲ ಮೂರು ನಿಮಿಷಗಳು ಮಾತ್ರ! ಆತನಿಗೆ ಕೃತಜ್ಞತೆ ಹೇಳುವ ಮೊದಲೇ, ಆತ “ಚೆನ್ನಾಗಿ ಪರೀಕ್ಷೆ ಬರಿ… ಬೆಸ್ಟ್‌ ಆಫ್ ಲಕ್‌’ ಎಂದು ಕೈ ಕುಲುಕಿ ಹೊರಟು ಹೋಗಿದ್ದ. ನನ್ನ ಕಂಗಳು ಹನಿಗೂಡಿದವು. ಹತ್ತನೇ ತರಗತಿ ಪಾಸ್‌ ಆಗುವಂತೆ ಮಾಡಿದ ಆ ಪುಣ್ಯಾತ್ಮನನ್ನು ಎಂದಿಗೂ ಮರೆಯುವುದಿಲ್ಲ.

Advertisement

* ಮಾಲತೇಶ ಖ. ಅಗಸರ

Advertisement

Udayavani is now on Telegram. Click here to join our channel and stay updated with the latest news.

Next