Advertisement
ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿಯೇ ಅತ್ಯಂತ ಗುಣಮಟ್ಟದ ಪಂಚಾಯತ್‌ರಾಜ್ ಕಾಯಿದೆ ಯಾವುದಾದರೂ ರಾಜ್ಯದಲ್ಲಿ ತಿದ್ದುಪಡಿಯಾಗಿ ಬಂದಿದ್ದರೆ ಅದು ಕರ್ನಾಟಕದ ಅಂದಿನ ಗ್ರಾಮೀಣಾಭಿವೃದ್ಧಿಮಂತ್ರಿ ಎಂ.ವೈ. ಘೋರ್ಪಡೆಯವರ ಮೂಲಕ. ಆದರಿಂದು, ಪ್ರತ್ಯಕ್ಷ ಅನುಷ್ಠಾನದಲ್ಲಿ ಕರ್ನಾಟಕದಲ್ಲಿ ಕಾಯಿದೆಯನ್ನು ಪೂರ್ಣಾನುಷ್ಠಾನ ಮಾಡುವ ತವಕದಲ್ಲಿÉ ಆಳುವ ಸರ್ಕಾರಗಳಿಲ್ಲ. ಕಾಯಿದೆ ಪ್ರತಿಯನ್ನು ಮುಖಕ್ಕೆ ಹಿಡಿದು, ಯಾಕೆ ಮಾಡಿಲ್ಲ? ಎಂದು ಕೇಳುವವರು ಕೂಡ ಹೇಳುವಷ್ಟು ಸಂಖ್ಯೆಯಲ್ಲಿಲ್ಲ. ರಾಜ್ಯದ ಮಟ್ಟಿಗೆ ಮಾತನಾಡುವುದಾದರೆ, ರಾಜ್ಯದ ಮೇಲ್ಮನೆ ಮತ್ತು ಕೆಳಮನೆ ಶಾಸಕರ ಸಂಖ್ಯೆ 300 ಮೀರದು. ಆದರೆ 30 ಜಿಲ್ಲಾ ಪಂಚಾಯತ್‌ಗಳು, 176 ತಾಲೂಕು ಪಂಚಾಯತ್‌ಗಳು ಹಾಗೂ 6022 ಗ್ರಾಮಪಂಚಾಯತ್‌ಗಳಲ್ಲಿ ನೇರವಾಗಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಸಂಖ್ಯೆ ಒಂದು ಲಕ್ಷ ಮೀರುತ್ತದೆ. ಅಚ್ಚರಿಯೆಂದರೆ ಸಂವಿಧಾನ ತಿದ್ದುಪಡಿ ಯೂ ಸೇರಿದಂತೆ ಕಾಯಿದೆ ಕಾನೂನು ಎಲ್ಲಾ ಬೆಂಬಲಗಳಿದ್ದಾಗಿಯೂ, ಒಂದು ಲಕ್ಷ ಮಂದಿ ಪಂಚಾಯತ್ ಪ್ರತಿನಿಧಿಗಳ ಧ್ವನಿಗೆ ಸರಕಾರವೇ ಓಗೊಡುತ್ತಿಲ್ಲ. ಪ್ರತಿ ಪಂಚಾಯತ್‌ಗಳು ಸ್ವಂತ ಸರ್ಕಾರಗಳಂತೆ ಕರ್ತವ್ಯ ನಿರ್ವಹಿಸಬೇಕೆಂಬ ಶಾಸನದ ಆಶಯಕ್ಕೆ ಒತ್ತುಕೊಡುವ ಮಾತಿರಲಿ, ಪಂಚಾಯತ್‌ರಾಜ್ ವ್ಯವಸ್ಥೆಯನ್ನೇ ಉಸಿರುಗಟ್ಟಿಸುವ ವಾತಾವರಣವನ್ನು ಬಹುತೇಕ ಸರಕಾರಗಳು ಮಾಡಿವೆ.
Related Articles
Advertisement
ಇದೀಗ ಪ್ರಶ್ನೆ ಅದಲ್ಲ. ಸಂವಿಧಾನದ 73ನೇ ತಿದ್ದುಪಡಿಯ ಆಶಯಕ್ಕನುಗುಣವಾಗಿ 3 ಹಂತದ ಪಂಚಾಯತ್‌ರಾಜ್ ಸಂಸ್ಥೆಗಳನ್ನು ಬಲಪಡಿಸುವ ಉದ್ದೇಶದಿಂದ, ತ್ರಿಸ್ತರದ ಅಧಿಕಾರದ ಹಂಚಿಕೆ ಪ್ರಸ್ತಾವನೆ ಕರ್ನಾಟಕದ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲೇ ಉಳಿದುಬಿಟ್ಟಿದೆ. ಪಂಚಾಯತ್‌ರಾಜ್ ಸಂಸ್ಥೆಗಳ, ಒಂದು ಲಕ್ಷಕ್ಕೂ ಮೀರಿದ ಜನ ಪ್ರತಿನಿಧಿಗಳ ಆಸೆ-ಆಶಯಗಳೆಲ್ಲ ವಿಧಾನಸೌಧದ 3ನೇ ಮಹಡಿಗೆ ಕೇಳುತ್ತಲೆ ಇಲ್ಲ/ ಕೇಳಿಸಿದ್ದರೂ ಜಾಣಕಿವುಡು.
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಅಂದು ಸಾಕಾರಗೊಳಿಸುವ ನಜಿØàರ್‌ಸಾಬ್‌ರವರ ಇಚ್ಛಾಶಕ್ತಿ, ಇಂದಿನ ಶಕ್ತಿಸೌಧದಲ್ಲಿನ ಮಂತ್ರಿ-ಅಧಿಕಾರಿಗಳಲ್ಲಿ ಕಾಣುತ್ತಿಲ್ಲ. ಆಡಳಿತ ಡೆಲ್ಲಿಯಿಂದಲ್ಲ-ಹಳ್ಳಿಯಿಂದಲೇ, ಎಂಬ ಹೆಗಡೆಯವರ ಘೋಷಣೆಯು ಕಾರ್ಯಾನುಷ್ಠಾನ ಇದೇ ನೆಲದಲ್ಲಿ ಮಂಡಲ ಪಂಚಾಯತ್-ಜಿಲ್ಲಾ ಪರಿಷತ್‌ಮಟ್ಟದಲ್ಲಿ ನಡೆದದ್ದು ಕಣ್ಣೆದುರೇ ತೋರುವಾಗ, ಕನಿಷ್ಠ ಗ್ರಾಮ ಸಭೆ, ಪಂಚಾಯ್ತಿ ಸಭೆಗಳ ಯಾ ತಾಲೂಕು-ಜಿಲ್ಲಾ ಪಂಚಾಯತ್ ಸಭೆಗಳ ನಿರ್ಣಯದ ವಿಷಯಗಳನ್ನು ಪರಿಶೀಲಿಸುವ ಸಾಮರ್ಥ್ಯವನ್ನು ಶಕ್ತಿಕೇಂದ್ರ ಹೊಂದಿಲ್ಲ ಎನ್ನುವುದೇ ಆಡಳಿತಕ್ಕೊಂದು ಅಪಚಾರ. ಗ್ರಾಮಮಟ್ಟದ ಆಡಳಿತ ವ್ಯವಸ್ಥೆಗಳಿಗೆ ಹೆಚ್ಚಿನ ಅಧಿಕಾರ, ಆರ್ಥಿಕ ಶಕ್ತಿ ನೀಡುವುದು, ಪ್ರತಿ ಗ್ರಾಮ ಪಂಚಾಯತಿಗಳು ಸ್ವಾವಲಂಬಿ-ಸ್ವಾಭಿಮಾನದ ಆಡಳಿತ ಕೊಡುವಂತೆ ಯೋಜನೆ ರೂಪಿಸುವುದು, ಆಡಳಿತ ವಿಕೇಂದ್ರಿಕರಣದ ರೀತಿ-ನೀತಿಯ ಜವಾಬ್ದಾರಿ, ತ್ಯಾಜ್ಯಮುಕ್ತ-ವ್ಯಾಜ್ಯ ಮುಕ್ತ- ಋಣಮುಕ್ತ ಸಮಾಜ ನಿರ್ಮಿಸಬೇಕಾದ ಪಂಚಾಯತ್‌ರಾಜ್, ತನ್ನದೆ ಆಡಳಿತಾತ್ಮಕ ಸಮಸ್ಯೆಗಳಿಂದ ತಾನೇ ಬಂಧನದಲ್ಲಿರುವುದು ಸಂವಿಧಾನದ ಆಶಯಗಳಿಗೊಂದು ಅಪವಾದ.
ಇಲ್ಲವಾದರೆ, ಕಾಯಿದೆ ಬಂದು ಕಾಲು ಶತಮಾನ ಸಂದರೂ, ಕಾಯಿದೆಯ ಒಂದು ಭಾಗವಾಗಿರುವ 3-ಎಫ್(ಫಂಕ್ಷನ್- ಫಂಕ್ಷನರಿ-ಫಂಡ್)ಗಳ ವರ್ಗಾವಣೆಗೆ ಇಂದಿಗೂ ಮೀನ-ಮೇಷ ಎಣಿಸುತ್ತಿರುವುದು ಯಾಕೆ? ದೇಶದ ಪಂಚಾಯತ್‌ರಾಜ್ ವ್ಯವಸ್ಥೆ ಯಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬ ಹೆಗ್ಗಳಿಕೆಯ ನಡುವೆಯೂ ಮಹತ್ವ ಕಾಂಕ್ಷೆಯ ಬಾಪೂಜಿ ಸೇವಾ ಕೇಂದ್ರಗಳು ಸ್ತಬ್ಧವಾಗಿ ಮಲಗಿರು ವುದೇಕೆ? ಪಂಚತಂತ್ರ, ಗಾಂಧಿಸಾಕ್ಷಿ ಕಾಯಕ, ಇ-ಸ್ವತ್ತು ಯೋಜನೆಗಳು ಜನೋಪಯೋಗಿಯಾಗುವ ಬದಲು ಪ್ರಜಾಕ್ರೋಶಕ್ಕೆ ತುತ್ತಾಗಲು ಕಾರಣವೇನು? ಈಗಲೂ ಕೇಂದ್ರದ 14ನೇ ಹಣಕಾಸು ಯೋಜನೆ ಅನುದಾನ ವಿದ್ಯುತ್ ಬಿಲ್ಲಿಗೆ ಕಡಿತ ಮಾಡಿದರೆ, ಪಂಚಾಯತಿಗಳ ಅಭಿವೃದ್ಧಿ ವ್ಯವಸ್ಥೆಯೇನು? ಎಂಬೆಲ್ಲಾ ಪಂಚಾಯಿತಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡಲಾಗದ ಸ್ಥಿತಿ ನಿರ್ಮಾಣವಾಗಿರುವುದೇ ಪಂಚಾಯಿತಿ ಆಡಳಿತ ಕುಂಠಿತವಾಗಿರುವುದಕ್ಕೆ ಕಾರಣ. ಗ್ರಾಮಾ ಡಳಿತದ ಸಬಲೀಕರಣಕ್ಕೆ ಸುದೀರ್ಘ ಅನುಭವ, ದೂರದೃಷ್ಟಿ, ದಕ್ಷತೆ ಮತ್ತು ಬದ್ಧತೆಗಳು ಅವಶ್ಯವೇ ಹೊರತು, ಕೇವಲ ಪ್ರಚಾರಗಳಲ್ಲಿ ಫಲಿತಾಂಶ ಪಡೆಯಲು ಸಾಧ್ಯವಿಲ್ಲ.ಕೆಲವು ಜಿಲ್ಲೆಗಳಲ್ಲಂತೂ ಗ್ರಾಮಪಂಚಾಯತ್‌ನ ಅಧ್ಯಕ್ಷ-ಉಪಾಧ್ಯಕ್ಷರು, ಬೇರೆ ಯಾವುದೊ ಇಲಾಖೆಯಿಂದ ಬಂದು ಗ್ರಾಮೀಣಾಭಿವೃದ್ಧಿಯ ಗಂಧ-ಗಾಳಿ ತಿಳಿಯದೆ ಆಡಳಿತ ನಡೆಸುವ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾಪಂಚಾಯತ್ ಅಧಿಕಾರಿಗಳ ಮುಂದೆ ಅಸಹಾಯಕರಾಗಿ ನಿಲ್ಲುವ ಪರಿಸ್ಥಿತಿಯಿದೆ. ಯಾಕೆಂದರೆ ಅನುಭವಿ ಅಧ್ಯಕ್ಷರ ಮಾತುಗಳು ಅನ್ಯಇಲಾಖೆಯಿಂದ ಬಂದ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಉದ್ಯೋಗ ಖಾತ್ರಿಯಲ್ಲಿ ದಿನಕ್ಕೊಂದು ಗೊಂದಲ ನಿರ್ಮಿಸಿ, ಅಭಿವೃದ್ಧಿಗಾಗಿ ನರೇಗಾ ಅನುಷ್ಟಾನ ಮಾಡ ಹೊರಟ ಪಂಚಾಯಿತಿ ಸದಸ್ಯರೇ, ಅಧಿಕಾರಿಗಳ ಅಸಹಕಾರದ ನಿರ್ಧಾರಕ್ಕೆ ಚಡಪಡಿಸುವಂತಾಗಿದೆ.
ಪ್ರತಿ ವರ್ಷದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಅನುಮೋದನೆಗೊಳ್ಳಬೇಕಾದ ಬಜೆಟ್‌ಗಳು 6 ತಿಂಗಳು ಸಂದರೂ ಅನುಮೋದನೆ ಆಗದೆ ಕ್ರಿಯಾ ಯೋಜನೆ ಮಾಡಲಾಗುತ್ತಿಲ್ಲ ಎನ್ನುವ ಪಂಚಾಯತ್ ಪ್ರತಿನಿಧಿಗಳಿಗೆ ಉತ್ತರಿಸಬೇಕಾದ ಮೇಲಾಧಿಕಾರಿಗಳಿಗೆ ಪಂಚಾಯತ್‌ರಾಜ್ ಕಲ್ಪನೆ ಇಲ್ಲದಿದ್ದರೆ ಅದೆಂತಹ ನಿರ್ವಹಣೆ ಸಾಧ್ಯ? ಪಂಚಾಯತ್‌ರಾಜ್ ಕಾಯಿದೆ (ಪ್ರಕರಣ 58ರಡಿ)ಅನುಸೂಚಿ- 1ರಂತೆ ಗಣಿ ಭೂವಿಜ್ಞಾನವು ಸೇರಿದಂತೆ, ಅಬಕಾರಿ ಇಲಾಖೆಯ ಬಾರ್ ಎಂಡ್ ರೆಸ್ಟೊರೆಂಟ್‌ಗಳಿಗೆ ಕಡ್ಡಾಯವಾಗಿ ಪಂಚಾಯತ್‌ಗಳ ಪರವಾನಗಿ ಪಡೆಯತಕ್ಕದ್ದು ಎಂದು ದಾಖಲಿಸಿದ್ದರೂ, ಅಬಕಾರಿ ಇಲಾಖೆ ಗ್ರಾಮ ಪಂಚಾಯತ್‌ಗಳಿಗೂ ತಮಗೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದೆ. ಜನ ಅಕ್ರಮ ಮದÂದಂಗಡಿಗಳನ್ನು ವಿರೋಧಿಸುತ್ತಾರೆ. ಅಧ್ಯಕ್ಷ, ಜನಪ್ರತಿನಿಧಿಗಳು ಮಾಡುವ ಪಂಚಾಯಿತಿ ನಿರ್ಣಯಕ್ಕೆ ಮಾತ್ರ ಅಬಕಾರಿ ಇಲಾಖೆ ಕ್ಯಾರೇ ಎನ್ನುತ್ತಿಲ್ಲ! ಯಾವ ಅಬಕಾರಿ ಇಲಾಖೆ ಅಧಿಕಾರಿಗಳು ಪಂಚಾಯತ್ ಅಧ್ಯಕ್ಷರೆದುರು ನಿಂತು ಗ್ರಾಮ ಸರಕಾರ ಒಪ್ಪಿದರೆ ಮಾತ್ರ ನಿಮ್ಮಲ್ಲಿ ಬಾರ್ ತೆರೆಯುತ್ತೇವೆ ಎನ್ನಬೇಕಿತ್ತೂ, ಬದಲಾಗಿ ಪಂಚಾಯಿತಿ ಅಧ್ಯಕ್ಷರೇ ಅಬಕಾರಿ ಕಛೇರಿಗೆ ಹೋಗಿ ನಮ್ಮಲ್ಲಿ ಬಾರ್ ಎಂಡ್ ರೆಸ್ಟೊರೆಂಟ್ ಬೇಡ ಎಂದು ಗೋಗರಿಯಬೇಕಿದೆ. ನೋಡಿದಿರಾ ಕಾನೂನು ಕತ್ತೆಯಾದ ಪರಿ..!!
ನಮ್ಮ ಪಂಚಾಯತ್‌ಗಳಿಗೆ ಶಾಸನಬದ್ಧ, ಕಾಯಿದೆಬದ್ಧ ಅಧಿಕಾರ ನಡೆಸಲು ಅವಕಾಶ ಕೊಡಿ ಎಂಬ ಬೇಡಿಕೆ ಮುಂದಿಟ್ಟು ಕಳೆದ ಸರಕಾರದ ಅವಧಿಯಲ್ಲಿ ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆಯಿರುವ ಗಾಂಧಿ ಪ್ರತಿಮೆ ಎದುರು ನಾವೆಲ್ಲಾ ಮೇಲ್ಮನೆಯ ಶಾಸಕರು ಧರಣಿ ನಡೆಸಿದೆವು. ಪಕ್ಷಭೇದ ಮರೆತು ಇಂದಿನ ಸಭಾಪತಿ ಶ್ರೀ ಪ್ರತಾಪಚಂದ್ರ ಶೆಟ್ಟಿಯವರು ಹಾಗೂ ಶಾಸಕ ಕೆ.ಸಿ.ಕೊಂಡಯ್ಯ ರಂತಹ ಹಿರಿಯರು ನಮ್ಮೊಂದಿಗಿದ್ದರು. ವಿಚಾರ ಪ್ರಸ್ತಾಪವಾದಾಗ ಸರಕಾರ ಸದನದಲ್ಲಿ ಉಗುಳು ನುಂಗಿಕೊಂಡು, ಮುಖತಿರುವಿ ಕುಳಿತುಬಿಟ್ಟಿತು. ಸರಕಾರದ ಮೋಸದ ಹಿಂದೆ ಕೆಲವು ಅಸಹಾಯಕತೆ ಮತ್ತು ಅನಿವಾರ್ಯತೆಗಳಿರುವುದು ನಮಗೆಲ್ಲಾ ಅರ್ಥವಾಗಿತ್ತು.
ಗ್ರಾಮ ಸ್ವರಾಜ್ ಕಾಯಿದೆ ಬಂದು 3 ವರ್ಷಗಳಾದರೂ ಒಮ್ಮೆ ಬಿಟ್ಟರೆ ಮತ್ತೆಂದೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಸಭೆಯನ್ನೆ ಸರಕಾರ ಕರೆದಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಈ ಸಮಿತಿಯ ಅಧ್ಯಕ್ಷ. ಕನಿಷ್ಠ ಆರು ತಿಂಗಳಿಗೊಮ್ಮೆ ಸಭೆ ಕರೆದು ಸಮಸ್ಯೆ ಚರ್ಚಿಸಬೇಕಿತ್ತು ರಾಜ್ಯ ಬಜೆಟ್‌ನ ಶೇ.30ರಷ್ಟು ತ್ರಿಸ್ತರದ ಪಂಚಾಯತ್‌ಗಳಿಗೆ ಹಂಚಿಕೆಯಾಗಬೇಕು, ಅದರಲ್ಲಿ ಶೇ.50ರಷ್ಟು ಮುಕ್ತ ನಿಧಿಯಾಗಬೇಕೆಂಬ ಶಿಫಾರಸ್ಸಿನ ಬಗ್ಗೆ ಸರಕಾರದ ನಿಲುವೇನೆಂದೇ ಅರ್ಥವಾಗುತ್ತಿಲ್ಲ.
ಒಟ್ಟಾರೆ ರಾಷ್ಟ್ರೀಯ ಪಂಚಾಯತ್‌ರಾಜ್ ಮಾಸಾಚರಣೆಯ ದಿನಗಳಲ್ಲಿ ಗ್ರಾಮ ರಾಜ್ಯದ ಕಲ್ಪನೆಗೊಂದು ಸ್ಪಷ್ಟ ಮಾರ್ಗಸೂಚಿ ಇರಬೇಕಾಗಿದ್ದು, ಈ ಮಧ್ಯೆ ಗ್ರಾಮೀಣಾಭಿವೃದ್ಧಿ ಮಂತ್ರಿ ಕೃಷ್ಣ ಭೈರೆಗೌಡರು ಸ್ಥಳೀಯಾಡಳಿತ ಸಂಸ್ಥೆಗಳಿಂದ ಆಯ್ಕೆಯಾದ ಮೇಲ್ಮನೆ ಶಾಸಕರುಗಳನ್ನೆಲ್ಲ ಕರೆದು ಹತ್ತಾರು ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದ್ದಾರೆ. ಪಂಚಾಯತ್‌ರಾಜ್ ವ್ಯವಸ್ಥೆಗಳನ್ನು ಸಬಲ ಗೊಳಿಸಲು ಸರಕಾರದೃಢ ನಿರ್ಧಾರದತ್ತ ದಿಟ್ಟ ಹೆಜ್ಜೆ ಇಡಬೇಕು. ಪ್ರಜಾ ಪ್ರಭುತ್ವ ಯಶಸ್ವಿಯಾಗಬೇಕಾದರೆ ಸರಕಾರದ ನಿಲುವಿನ ಮೇಲೆ ಆಸಕ್ತರು ನಿರಂತರ ಕಣ್ಗಾವಲು ಮಾಡುತ್ತಿರಬೇಕು. ಇದೇ ಪಂಚಾಯತ್‌ರಾಜ್.
-ಕೋಟ ಶ್ರೀನಿವಾಸ ಪೂಜಾರಿ