Advertisement
ಕೇಂದ್ರ ಸರಕಾರ ಕಡೆಗೂ ಪೆಟ್ರೋಲು ಮತ್ತು ಡೀಸಿಲ್ ಬೆಲೆಯಲ್ಲಿ ತುಸು ಕಡಿತ ಮಾಡಿರುವುದು ಸ್ವಾಗತಾರ್ಹ ನಿರ್ಧಾರ. ಕಳೆದ ಸುಮಾರು ಒಂದು ತಿಂಗಳಿಂದ ತೈಲ ಬೆಲೆ ಗಗನಮುಖೀಯಾದ ಪರಿಣಾಮವಾಗಿ ಜನರಿಗೆ ತೀವ್ರ ಸಂಕಷ್ಟ ಎದುರಾಗಿತ್ತು. ಮುಂಬಯಿಯಂಥ ನಗರಗಳಲ್ಲಿ ಪೆಟ್ರೋಲು ಬೆಲೆ ಲೀಟರಿಗೆ 90 ರೂ. ದಾಟಿತ್ತು. ತೈಲ ಬೆಲೆಯೇರಿಕೆ ವಿರುದ್ಧ ಜನರ ಆಕ್ರೋಶ ಸ್ಫೋಟಗೊಳ್ಳುವ ಹಂತಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ಬೆಲೆ ಇಳಿಸಿ ಜನರಿಗೆ ಒಂದಿಷ್ಟಾದರೂ ನಿರಾಳತೆಯನ್ನು ಕೊಡುವುದು ಸರಕಾರದ ಪಾಲಿಗೆ ಅನಿವಾರ್ಯವೂ ಆಗಿತ್ತು. 2014 ನವೆಂಬರ್‌ನಿಂದ 2016 ಜನವರಿ ತನಕ ಕೇಂದ್ರ ಒಂಬತ್ತು ಸಲ ಡೀಸೆಲ್ ಮತ್ತು ಪೆಟ್ರೋಲು ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. 2017ರ ಅಕ್ಟೋಬರ್‌ನಲ್ಲಿ ಒಂದು ಸಲ ಮಾತ್ರ ಅಬಕಾರಿ ಸುಂಕ ಕಡಿತಗೊಳಿಸಲಾಗಿತ್ತು. ಇದು ಎರಡನೇ ಸಲ ಕಡಿತವಾಗುತ್ತಿರುವುದು.
Related Articles
Advertisement
ವಿತ್ತ ಸಚಿವ ಅರುಣ್ ಜೇಟ್ಲಿ ಅಬಕಾರಿ ಸುಂಕ ಇಳಿಸಿದ ಘೋಷಣೆಯನ್ನು ಮಾಡುತ್ತಾ ರಾಜ್ಯಗಳೂ ಪೆಟ್ರೋಲು ಮತ್ತು ಡೀಸಿಲ್ ಮೇಲಿನ ಸ್ಥಳೀಯ ತೆರಿಗೆಗಳನ್ನು ಕಡಿತಗೊಳಿಸಬೇಕೆಂದು ಹೇಳಿದ್ದಾರೆ. ಇದರ ಬೆನ್ನಿಗೆ ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್ ಸರಕಾರಗಳು ವ್ಯಾಟ್ ಇಳಿಕೆ ಮಾಡಿವೆ. ರಾಜಸ್ಥಾನ, ಕರ್ನಾಟಕ ಮತ್ತು ಆಂಧ್ರ ಪ್ರದೇಶ ಈ ಮೊದಲೇ ವ್ಯಾಟ್ ಇಳಿಕೆ ಮಾಡಿವೆ. ತೈಲ ಬೆಲೆ ಏರಿಕೆಯಿಂದ ಹೆಚ್ಚು ಲಾಭವಾಗುತ್ತಿರುವುದು ರಾಜ್ಯಗಳಿಗೆ. ವ್ಯಾಟ್ ಅನ್ನು ತೈಲದ ಹಾಲಿ ಬೆಲೆಯ ಮೇಲೆ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ ಬೆಲೆ ಹೆಚ್ಚಾದಂತೆ ರಾಜ್ಯ ಸರಕಾರಗಳಿಗೆ ಹೆಚ್ಚು ವರಮಾನ ಬರುತ್ತದೆ.
ಅಬಕಾರಿ ಸುಂಕ ಮತ್ತು ವ್ಯಾಟ್ ಇಳಿಕೆ ತೈಲ ಬೆಲೆ ಕಡಿಮೆ ಮಾಡುವ ತಾತ್ಕಾಲಿಕ ಕ್ರಮವಷ್ಟೆ. ತೈಲ ಬೆಲೆ ವಿವಿಧ ಬಾಹ್ಯ ಅಂಶಗಳನ್ನು ಹೊಂದಿಕೊಂಡಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಚಿತವಾಗಿಯೇ ಇರುತ್ತದೆ. ಹೀಗಾಗಿ ಬೆಲೆ ಸ್ಥಿರಗೊಳಿಸಲು ಕೇಂದ್ರ ಮತ್ತು ರಾಜ್ಯಗಳು ತೈಲದ ಮೇಲಿನ ತೆರಿಗೆ ಸ್ವರೂಪವನ್ನೇ ಬದಲಾಯಿಸುವ ಕುರಿತು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ತೈಲವನ್ನು ಜಿಎಸ್‌ಟಿ ವ್ಯಾಪ್ತಿಗೂ ತರುವುದರಿಂದ ಇದು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಜ್ಯಗಳ ಮನವೊಲಿಸುವ ಕೆಲಸವನ್ನು ಮಾಡಬೇಕು.