ಹೊಸದಿಲ್ಲಿ/ ಬೆಂಗಳೂರು: ಸತತ ಎಂಟನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮುಂದು ವರಿದಿದೆ. ಸದ್ಯ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 62 ಪೈಸೆ ಏರಿ 75.78 ರೂ.ಗೆ ಮುಟ್ಟಿದೆ. ಡೀಸೆಲ್ ಬೆಲೆ ಲೀಟರ್‌ಗೆ 64 ಪೈಸೆ ಏರಿ 74.03 ರೂ.ಗೆ ಮುಟ್ಟಿದೆ. ರಾಜಧಾನಿಯಲ್ಲಿ ಈ ಎರಡು ಇಂಧನ ತೈಲಗಳ ಬೆಲೆಯಲ್ಲಿ ಕೇವಲ 1.75 ರೂ. ಅಷ್ಟೇ ವ್ಯತ್ಯಾಸ. ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್‌ಬೆಲೆ ಕ್ರಮವಾಗಿ 78.23 ರೂ., 70.39 ರೂ.ಗೆ ಏರಿದೆ.
ಮಂಗಳೂರಿನಲ್ಲಿ ರವಿವಾರ ಪೆಟ್ರೋಲ್ ಬೆಲೆ ಲೀ.ಗೆ 77.52 ರೂ. ಇದ್ದರೆ ಡೀಸೆಲ್ ಬೆಲೆ ಲೀ.ಗೆ 69.70 ರೂ. ಇತ್ತು. ಉಡುಪಿಯಲ್ಲಿ ಇದು ಕ್ರಮವಾಗಿ 77.76 ರೂ. ಮತ್ತು 69.92 ರೂ. ಆಗಿತ್ತು.
2017ರಲ್ಲಿ ಸರಕಾರಿ ಅಧೀನದ ತೈಲ ಕಂಪೆನಿಗಳು ದೈನಂದಿನ ಪರಿಷ್ಕರಣೆ ಆರಂಭಿಸಿದ ಅನಂತರ ಇದು ಗರಿಷ್ಠ ಏರಿಕೆಯ ದಾಖಲೆ. ಜೂ.7ರಿಂದ ಆರಂಭವಾಗಿ 8 ದಿನಗಳಿಂದ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 4.52 ರೂ., ಡೀಸೆಲ್ ಬೆಲೆ 4.64 ರೂ. ಹೆಚ್ಚಿದೆ. ಬೆಂಗಳೂರಿನಲ್ಲಿ ಎರಡೂ ಇಂಧನ ತೈಲಗಳ ಬೆಲೆ ಕ್ರಮವಾಗಿ 4.68 ರೂ., 4.43 ರೂ. ಏರಿದೆ.
ಯಾಕೆ ಈ ಹೆಚ್ಚಳ?
ಕೋವಿಡ್-19 ಕಾರಣದಿಂದ ಮಾ.16ರ ಬಳಿಕ ತೈಲ ಕಂಪೆನಿಗಳು ದೈನಂದಿನ ಬೆಲೆ ಪರಿಷ್ಕರಣೆ ನಿಲ್ಲಿಸಿದ್ದವು. ಈ ವೇಳೆ ವಾಹನಗಳು ರಸ್ತೆ ಗಿಳಿಯ ದ್ದರಿಂದ ಭಾರೀ ನಷ್ಟ ಸಂಭವಿಸಿತ್ತು. ಇನ್ನೊಂದು ಕಡೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಚ್ಚಾತೈಲ ಬೆಲೆ ಕುಸಿದಿತ್ತು. ಇದರ ಲಾಭ ಪಡೆಯಲು ಭಾರತೀಯ ತೈಲ ಕಂಪೆನಿಗಳಿಗೆ ಆಗಲಿಲ್ಲ. ಸರಕಾರ ಕೊರೊನಾ ಪರಿಹಾರ ನಿಧಿಗೆಂದು ತೆರಿಗೆ ಏರಿಸಿದ ಬಳಿಕ ಇದನ್ನು ಸರಿದೂಗಿಸಿ ಕೊಳ್ಳಲು ನಿರಂತರ ವಾಗಿ ಬೆಲೆ ಏರಿಸಲಾಗುತ್ತಿದೆ.