ಹೊಸದಿಲ್ಲಿ: ಏರುತ್ತಿರುವ ಚಿಲ್ಲರೆ ಹಣದುಬ್ಬರವನ್ನು ನಿಯಂ ತ್ರಿಸುವ ಸಲುವಾಗಿ ಕೇಂದ್ರ ಸರಕಾರ ಮೆಕ್ಕೆಜೋಳ, ತೈಲ ಸಹಿತ ಕೆಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಇದು ಜಾರಿಯಾದರೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ.
ಫೆಬ್ರವರಿ ತಿಂಗಳ ಹಣದುಬ್ಬರ ದತ್ತಾಂಶ ಬಿಡುಗಡೆಯಾದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಶೇ.5.72 ರಷ್ಟಿದ್ದ ಚಿಲ್ಲರೆ ಹಣದುಬ್ಬರ ಈ ಜನವರಿಯಲ್ಲಿ ಶೇ.6.52ಕ್ಕೆ ಏರಿಕೆಯಾಗಿದೆ. ಹಾಲು, ಮೆಕ್ಕೆಜೋಳ, ಸೋಯಾ ಎಣ್ಣೆಯ ಬೆಲೆಗಳು ಕೂಡ ಹಣದುಬ್ಬರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಹೀಗಾಗಿ ಶೇ.60ರಷ್ಟು ಆಮದು ಶುಲ್ಕ ಇರುವಂಥ ಮೆಕ್ಕೆಜೋಳದಂಥ ವಸ್ತುಗಳ ಆಮದು ಶುಲ್ಕ ಇಳಿಕೆ ಮಾಡುವುದರ ಜತೆಗೆ ತೈಲದ ತೆರಿಗೆಯನ್ನೂ ಇಳಿಸುವ ಚಿಂತನೆ ಸರಕಾರಕ್ಕಿದೆ ಎಂದು ಹೇಳಲಾಗಿದೆ.
ಜಿಎಸ್‌ಟಿ ವ್ಯಾಪ್ತಿಗೆ ತೈಲ; ರಾಜ್ಯಗಳ ಒಪ್ಪಿಗೆ ಬಾಕಿ
ರಾಜ್ಯಗಳ ನಡುವೆ ಒಮ್ಮತ ಮೂಡಿಬಂದ ಬಳಿಕ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನೂ ತರಲಾಗುತ್ತದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂಡಸ್ಟ್ರಿ ಚೇಂಬರ್ ಪಿಎಚ್‌ಡಿಸಿಸಿ ಸದಸ್ಯರೊಂದಿಗೆ ಬಜೆಟ್ ಅನಂತರದ ಸಂವಾದದಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಚ್ಚಾ ತೈಲ, ಮೋಟಾರ್ ಸ್ಪಿರಿಟ್, ಹೈಸ್ಪೀಡ್ ಡೀಸೆಲ್, ನೈಸರ್ಗಿಕ ಅನಿಲ, ವೈಮಾನಿಕ ಇಂಧನವನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಯಾವಾಗಿನಿಂದ ಇವುಗಳನ್ನೂ ವ್ಯಾಪ್ತಿಗೆ ತರಬೇಕು ಎಂಬುದನ್ನು ಜಿಎಸ್‌ಟಿ ಮಂಡಳಿ ನಿರ್ಣಯಿಸಲಿದೆ ಎಂದರು.