ಅಂಕೋಲಾ: ತಾಲೂಕಿನ ಸಮುದ್ರ ತೀರದಲ್ಲಿ ವಿಷಕಾರಿ ತೈಲ ಮಿಶ್ರಿತ ಡಾಂಬರು ಕಡಲ ದಂಡೆಯುದ್ದಕ್ಕೂ ಶೇಖರಣೆ ಆಗುತ್ತಿದ್ದು, ಇದು ಮೀನುಗಾರರ ನಿದ್ದೆಗೆಡಿಸಿದೆ.
ಹಡಗುಗಳಿಂದ ವಿಸರ್ಜಿಸಲಾಗುತ್ತಿರುವ ಎಂಜಿನ್ ಆಯಿಲ್ ಕಾರಣವಾಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ನೂರಾರು ದೊಡ್ಡ ಹಡಗುಗಳು ಸಮುದ್ರದಲ್ಲಿ ಸಂಚರಿಸುತ್ತವೆ. ಇತರ ವಾಹನಗಳಂತೆ ಇಂತಿಷ್ಟು ಕಿ.ಮೀ ಓಡಿದ ಮೇಲೆ ಹಡಗುಗಳ ಎಂಜಿನ್ ಆಯಿಲ್ಬ ದಲಾಯಿಸಬೇಕಾಗುತ್ತದೆ. ಎಂಜಿನ್ ಆಯಿಲ್ ಬದಲಿಸಲು ಬಂದರಿನಲ್ಲಿ ನಿಲ್ಲಿಸಿದರೆ ಶುಲ್ಕ ಕಟ್ಟಬೇಕು. ಹಾಗಾಗಿ ಅವರು ಸಮುದ್ರಕ್ಕೆ ಬಿಡುತ್ತಾರೆ ಎನ್ನುತ್ತಾರೆ.
ಕರಾವಳಿ ತೀರದ ಕೆಲವು ಸಮುದ್ರ ತೀರಗಳಲ್ಲಿಯು ಇಂಥ ಡಾಂಬರು ಉಂಡೆಗಳನ್ನು ಸಮುದ್ರ ಹೊರಹಾಕುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಸಮುದ್ರ ತೀರಗಳಲ್ಲಿ ಕಂಡುಬರುತ್ತಿರುವ ಡಾಂಬರ್‌ಗಳು ಜಲಚರಗಳಿಗೆ ಮಾರಕವಾಗಿದ್ದು ಈ ಬಗ್ಗೆ ಪರಿಸರ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಬೆಳಂಬಾರ, ನದಿಬಾಗ, ಹೊನ್ನೆಗುಡಿ, ಶೇಡಿಕುಳಿ, ಕೇಣಿ, ಹನಿಬೀಚ್, ಬೇಲೆಕೇರಿ, ಹಾರವಾಡಾ ಭಾಗದ ಸಮುದ್ರ ತೀರಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸಮುದ್ರ ನೀರಿನಲ್ಲಿ ತೇಲಿ ಬರುವ ಈ ವಿಷಕಾರಿ ಡಾಂಬರು ಶೇಖರಣೆ ಆಗುತ್ತಿರುವುದು ಕಂಡುಬಂದಿದೆ. ಕಳೆದೆರಡು ದಿನಗಳಂದಂತೂ ಈ ಪ್ರಮಾಣ ಏರುಗತಿಯಲ್ಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಡಲ ತೀರದಲ್ಲೀಗ ಮೀನಿಗೆ ಬರ!
ಸಮುದ್ರ ಕಲುಷಿತಗೊಂಡಿರುವುದರಿಂದ ಈ ಬಾರಿ ಕಡಲ ತೀರದಲ್ಲಿ ಸಾಕಷ್ಟು ಮೀನು ಸಿಗದೆ ಮೀನುಗಾರ ಕುಟುಂಬಗಳು ಸಂಕಷ್ಟದಲ್ಲಿವೆ. ನಾಡದೋಣಿ, ಪರ್ಸೀನ್ ಬೋಟುಗಳಿಗೆ ಕಳೆದ 2-3 ತಿಂಗಳಿಂದ ಮೀನು ಸಿಗುತ್ತಿಲ್ಲ. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಉತ್ತಮ ಮೀನು ಸಿಗುತ್ತಿತ್ತು. ಬಂಗುಡೆ, ತಾರ್ಲಿ ಸಿಗುತ್ತಿದ್ದವು. ಗುಂಪಾಗಿ ತೆಪ್ಪದಲ್ಲಿ ಬರುವ ಮೀನುಗಳು ಸಿಗುವುದರಿಂದ ಪರ್ಸಿನ್ ಬೋಟುಗಳ ಮಾಲೀಕರಿಗೆ ಸಾಕಷ್ಟು ಆದಾಯ ಸಿಗುತ್ತಿತ್ತು. ಆದರೆ ಈ ಬಾರಿ ಮೀನು ಸಿಗದೆ ತೀವ್ರ ಸಂಕಷ್ಟ ಅನುಭವಿಸಬೇಕಾಗಿದೆ.
•ಸುಧಾಕರ ಜಾಂಬಾವಾಳಿಕರ, ಮೀನುಗಾರ ಮುಖಂಡ ಬೇಲೇಕೇರಿ
•ಸುಧಾಕರ ಜಾಂಬಾವಾಳಿಕರ, ಮೀನುಗಾರ ಮುಖಂಡ ಬೇಲೇಕೇರಿ