Advertisement

ಓಹ್‌ ಮೈ ಡಾಗ್‌!

09:36 AM Oct 27, 2018 | |

ಕರುಳು ಚುರುಕ್‌ ಅನ್ನಿಸುವ, ಎಂಥಾ ಕಲ್ಲಿನ ಮನಸ್ಸಿನವರನ್ನೂ ಕರಗಿಸಿಬಿಡುವ ಜೀವಿಯೊಂದಿದ್ದರೆ ಅದು ನಾಯಿ. ಅದನ್ನು ಮನೆಯ ಸದಸ್ಯನಂತೆಯೇ ಕಾಣುವವರಿದ್ದಾರೆ, ಪ್ರಾಣಕ್ಕಿಂತಲೂ ಹೆಚ್ಚಾಗಿ ನಾಯಿಯನ್ನು ಹಚ್ಚಿಕೊಂಡವರಿದ್ದಾರೆ. ಮನುಷ್ಯ ಮತ್ತು ನಾಯಿ ನಡುವಿನ ಬಾಂಧವ್ಯ ಸುಮಾರು 6,400 ವರ್ಷಗಳಷ್ಟು ಹಳೆಯದು. ನಾವೇಕೆ ನಾಯಿಯನ್ನು ಅಷ್ಟಿಷ್ಟ ಪಡುತ್ತೇವೆ ಎಂಬುದಕ್ಕೆ ಮನೋಶಾಸ್ತ್ರ ನಾನಾ ಥಿಯರಿಗಳನ್ನು ಮುಂದಿಡಬಹುದು. ಆದರೆ ನಾಯಿಯನ್ನು ಇಷ್ಟಪಡುವವರಿಗೆ ಗೊತ್ತು ಅವೆಲ್ಲಕ್ಕಿಂತಲೂ ಮಿಗಿಲಾದುದೇನೋ ಈ ಬಾಂಧವ್ಯದಲ್ಲಿದೆ ಎಂಬುದು. ಮೇಲು- ಕೀಳು, ಬಡವ- ಶ್ರೀಮಂತ, ಇವ್ಯಾವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ನಿಷ್ಕಲ್ಮಶ ಪ್ರೀತಿಯನ್ನು ನಿರಂತರವಾಗಿ ಹಂಚುವ ನಾಯಿಯಿಂದ ಮನುಷ್ಯ ಕಲಿಯಬೇಕಾದ್ದು ತುಂಬಾ ಇದೆ ಅನ್ನಿಸುತ್ತೆ. ಅಂಥಾ ಜೀವದ ನಾಯಿಯೊಂದು ಕಳೆದುಹೋದಾಗ ಮನೆಯವರು ಏನು ಮಾಡಿದರು? ಇಂಡಿಯನ್‌ ಎಕ್ಸ್‌ಪ್ರೆಸ್‌, ವಿಧಾನಸೌಧ, ಕಬ್ಬನ್‌ ಪಾರ್ಕ್‌, ವಸಂತನಗರ ಸುತ್ತಮುತ್ತಲಿನ ಗಲ್ಲಿ ಗಲ್ಲಿಗಳನ್ನು ಸುತ್ತಿದರು. “ಕಾಣೆಯಾಗಿದ್ದಾನೆ. ಹುಡುಕಿಕೊಟ್ಟವರಿಗೆ 20,000ರೂ. ಬಹುಮಾನ’ ಎಂದು ಪೋಸ್ಟರ್‌ ಅಚ್ಚು ಹಾಕಿಸಿ ದಾರಿಯಲ್ಲಿ ಸಿಕ್ಕವರಿಗೆಲ್ಲಾ ಹಂಚಿದರು. ಕುಟುಂಬದ ಭಾಗವೇ ಆಗಿ ಹೋಗಿದ್ದ ಮಿಸ್ಸಿಂಗ್‌ ನಾಯಿ ಕೂಪರ್‌ನ ಕತೆ ಇದು. 

Advertisement

ಚಾಪ್ಟರ್‌ 1 ಕೂಪರ್‌
ಕೂಪರ್‌ನ ವಾಸವಿದ್ದಿದ್ದು ಬಸವನಗುಡಿಯ ಗಾಂಧಿಬಜಾರಿನ ಬಳಿ. ಉದ್ಯಮಿ ವಾಸುದೇವ್‌ ಅವರ ಮನೆಯಲ್ಲಿ. ಮಗಳಿಗೆ ಅಳಿಯ ಪ್ರೀತಿಯಿಂದ ಕೊಡಿಸಿದ ಉಡುಗೊರೆ ಕೂಪರ್‌. ಮುದ್ದು ಮುದ್ದಾಗಿದ್ದ ನಾಯಿಗೆ ಹೆಸರಿಟ್ಟಿದ್ದು ಮಗಳು ಹಂಸ ಪ್ರಣೀತ್‌. “ಕೂಪರ್‌’ ಎಂಬ ಹೆಸರನ್ನಿಡಲು ಕಾರಣ ಆಕೆ ನೋಡುತ್ತಿದ್ದ ಹಾಲಿವುಡ್‌ ಸಿನಿಮಾಗಳು. ಆಕೆಯ ಜೊತೆ ತವರಿಗೆ ಪ್ರಯಾಣ ಬೆಳೆಸಿದ ಕೂಪರ್‌, ಅಲ್ಲೇ ಠಿಕಾಣಿ ಹೂಡಿತ್ತು. ಕುಟುಂಬದಲ್ಲಿ ಯಾವತ್ತೂ ಮಗ ತಾಯಿಯನ್ನು ಜಾಸ್ತಿ ಹಚ್ಚಿಕೊಂಡಿರುತ್ತಾನೆ ಎನ್ನುತ್ತಾರೆ. ಕೂಪರ್‌ ವಿಷಯದಲ್ಲಿ ಅದು ಅಕ್ಷರಶಃ ನಿಜ. ಅವನು ಹೆಚ್ಚು ಹಚ್ಚಿಕೊಂಡಿದ್ದು ವಾಸುದೇವ್‌ ಪತ್ನಿ ಹೇಮಮಾಲಿನಿಯವರನ್ನು. ಸಾಕು ಪ್ರಾಣಿ ಎಂದರೆ ದೂರವೇ ಉಳಿದುಬಿಡುತ್ತಿದ್ದ ಹೇಮಾ ಅವರು, ಕೂಪರ್‌ನನ್ನು ಬಿಟ್ಟಿರಲಾಗದಷ್ಟು ಬದಲಾಗಿಹೋಗಿದ್ದರು. ಇದ್ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ಅವರು “ಅವನು ನಮ್ಮ ಬದುಕಿನಲ್ಲಿ ಬಂದ ಮೇಲೆ ಮನೆಗೆ ಅದೇನೋ ಹೆಚ್ಚಿನ ಕಳೆ ಬಂದಂತೆ ಅನ್ನಿಸುತ್ತಿತ್ತು. ತುಂಬಾ ಡೀಸೆಂಟ್‌. ತುಂಬಾ ಪಾಪ. ಅಷ್ಟು ಒಳ್ಳೆಯ ವನನ್ನು ಯಾರೇ ಆದರೂ ಇಷ್ಟ ಪಡದೇ ಇರಲಾರರು’ ಎನ್ನುತ್ತಾರೆ. ಇದನ್ನು ನೋಡಿದಾಗ ಗುರಿ ಸಾಧನೆಯ ನೆಪದಲ್ಲಿ ರೇಸಿಗೆ ಬಿದ್ದಿರುವ ಕಾಂಕ್ರೀಟ್‌ ಕಾಡಿನ ಮಂದಿ ಸಾಕು ಪ್ರಾಣಿಗಳ ಮೂಲಕ ತನ್ನತನವನ್ನು ಉಳಿಸಿ ಕೊಂಡಿ ದ್ದಾರೇನೋ ಎಂಬ ಅನುಮಾನ ಬರದೇ ಇರದು.

ಚಾಪ್ಟರ್‌ 2 ಮಿಸ್ಸಿಂಗ್‌
ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಿಯ ರೆಸ್ಟೋರೆಂಟಿಗೆ ವಾಸುದೇವ್‌ ಅವರು ಕುಟುಂಬ ಸಮೇತ ಡಿನ್ನರ್‌ಗೆಂದು ಹೋಗಿದ್ದರು. ಹೊರಗೆ ಹೋಗುವಾಗ ಕೂಪರ್‌ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದೇ ಇಲ್ಲ. ಆದರೆ ಆವತ್ತೇಕೋ ಮನಸ್ಸು ತಡೆಯಲಾರದೆ ಕರೆದುಕೊಂಡುಬಂದುಬಿಟ್ಟಿದ್ದರು. ಕೂಪರ್‌ನನ್ನು ಒಳಕ್ಕೆ ಬಿಡಲು ರೆಸ್ಟೋರೆಂಟಿನವರು ಅನುಮತಿ ನಿರಾಕರಿಸಿದ್ದರು. ಆಗ ಅನಿವಾರ್ಯವಾಗಿ ಹೊರಗಡೆ ವಾಚ್‌ಮನ್‌ ಬಳಿ ಬಿಟ್ಟು ಬಂದಿದ್ದರು. ಆದರೆ ಹಿಂದಿರುಗಿ ಬಂದಾಗ ವಾಚ್‌ಮನ್ನೂ ಇಲ್ಲ, ಕೂಪರ್‌ ಕೂಡಾ ಇಲ್ಲ! ಎಲ್ಲರಿಗಿಂತ ಜಾಸ್ತಿ ಶಾಕ್‌ ಆಗಿದ್ದು ಹೇಮಾ ಅವರಿಗೆ! ಕೂಪರ್‌ಗೆ ಏನಾಗಿದೆಯೋ ಏನೋ ಎಂಬ ಆತಂಕದಿಂದ ಅವರು ತತ್ತರಿಸಿ ಹೋಗಿದ್ದರು. ಮನೆಯಲ್ಲಿ ನೆಂಟರು ತುಂಬಿದರೆ ಸಂಭ್ರಮಿಸುತ್ತಿದ್ದ, ಅಕ್ಕಪಕ್ಕದ ಮನೆಯವರೊಂದಿಗೆ ಮಾತನಾಡುತ್ತಿದ್ದರೆ ಕಾವಲು ಕಾಯುತ್ತಿದ್ದ, ಮನೆಯವರು ಯಾರಾದರೂ ಗಟ್ಟಿ ಸ್ವರದಲ್ಲಿ ಮಾತಾಡಿದರೆ ಪಂಚಾಯ್ತಿ ಮಾಡುವವನಂತೆ ಗದರಿಸುತ್ತಿದ್ದ ಕೂಪರ್‌ ಇಲ್ಲ ಎನ್ನುವ ಸಂಗತಿಯನ್ನು ಹೇಮಾ ಅವರು ಅರಗಿಸಿಕೊಳ್ಳದಾದರು.

ಚಾಪ್ಟರ್‌ 3 ಹುಡುಕಾಟ
ಆ ಮಧ್ಯರಾತ್ರಿ ಕ್ವೀನ್ಸ್‌ ರಸ್ತೆ, ಕನ್ನಿಂಗ್‌ ಹ್ಯಾಂ ರಸ್ತೆ ಗಳಲ್ಲೆಲ್ಲಾ ಹುಡುಕಾಡಿ ದರೂ ಕೂಪರ್‌ನ ಸುಳಿವಿರಲಿಲ್ಲ. ಮತ್ತೆ ಬೆಳಿಗ್ಗೆ ಹುಡುಕಾಟ ಶುರು. ಕಬ್ಬನ್‌ ಪಾರ್ಕ್‌, ಕೆ. ಆರ್‌. ರಸ್ತೆ, ವಸಂತನಗರ ಇಲ್ಲೆಲ್ಲಾ ಹುಡುಕಿದರು. ಆದರೆ ಮತ್ತೆ ನಿರಾಸೆ ಕಟ್ಟಿಟ್ಟ ಬುತ್ತಿಯಾಯಿತು. ಸಾಕುಪ್ರಾಣಿಗಳನ್ನು ಸಂರಕ್ಷಿಸುವ ತಂಡಗಳನ್ನು ಸಂಪರ್ಕಿಸಿದ್ದಾಯಿತು. ವಾಟ್ಸಾಪ್‌ ಗ್ರೂಪ್‌ಗ್ಳಲ್ಲಿ ಸಂದೇಶ ವೈರಲ್‌ ಮಾಡಿದ್ದಾಯಿತು. ಕಡೆಗೆ “ಕಾಣೆಯಾಗಿದ್ದಾನೆ’ ಎಂದು ಪೋಸ್ಟರ್‌, ಪಾಂಪ್ಲೆಟ್‌ಗಳನ್ನು ಪ್ರಿಂಟ್‌ ಮಾಡಿಸಿ ದಾರಿಯಲ್ಲಿ ಸಿಕ್ಕವರಿಗೆಲ್ಲಾ ಹಂಚಿದರು. ಕೆಲವರು ಕಂಡರೆ ಖಂಡಿತ ತಿಳಿಸುತ್ತೇವೆಂದು ಹೇಳಿದರೆ ಇನ್ನು ಕೆಲವರು ಒಂದು ನಾಯಿಗೋಸ್ಕರ ಇಷ್ಟೆಲ್ಲಾ ಕಷ್ಟಪಡುತ್ತಿದ್ದಾರಲ್ಲ, ಹುಚ್ಚರೇನೋ ಎಂಬಂತೆ ನೋಡಿದ್ದರು. ಕೂಪರ್‌ನ ಹುಡುಕಾಟದ ಸಂದರ್ಭದಲ್ಲಿ ಅವರಿಗಾದ ಅನುಭವವನ್ನು ಹೇಳುತ್ತಾ ಹೋದರೆ ಅದು ಬೇರೆಯದೇ ಕತೆಯಾಗುತ್ತದೆ. ಜಗತ್ತಿನಲ್ಲಿ ಎಂಥೆಂಥಾ ಮನೋಭಾವದ ಜನರಿದ್ದಾರೆ ಎಂಬ ಪರಿಚಯವನ್ನೂ ಕೂಪರ್‌ ಮಾಡಿಸಿದ್ದ. ವಾಸುದೇವ್‌ ಅವರ ಕುಟುಂಬ ಸದಸ್ಯರು ಕೂಪರ್‌ನನ್ನು ಎಷ್ಟು ಹಚ್ಚಿಕೊಂಡಿದ್ದರೆಂಬುದು ತಿಳಿದಿದ್ದೇ ಹುಡುಕಾಟದ ಸಂದರ್ಭದಲ್ಲಿ.

ಚಾಪ್ಟರ್‌ 4 ಸಿಕ್ಕನಾ?
ಕಾಣೆಯಾದ 5ನೇ ದಿನ ವಾಸುದೇವ್‌ ಅವರ ಫೋನ್‌ ರಿಂಗಣಿಸಿತು.”ಇಲ್ಲೊಂದು ನಾಯಿ ಸಿಕ್ಕಿದೆ ಅದು ನಿಮ್ಮ ನಾಯಿ ಥರ ಇದೆ’ ಬಂದು ನೋಡಿ ಅಂದಿತ್ತು ದನಿ. ಎಸ್‌. ಹೇಮಾ ಅವರ ಪ್ರಾರ್ಥನೆ ದೇವರಿಗೆ ಮುಟ್ಟಿತ್ತು! ಮೂರ್ನಾಲ್ಕು ದಿನಗಳಿಂದ ವಿಧಾನಸೌಧದ ಬಳಿ ಕಟ್ಟಡವೊಂದರ ಮ್ಯಾನ್‌ ಹೋಲಿನಲ್ಲಿ ಸಿಲುಕಿಕೊಂಡಿದ್ದ ಕೂಪರ್‌ ಕುಂಯ್‌ಗಾಡುವ ದನಿ ಕಡೆಗೂ ಕಾವಲುಗಾರ ಮುರುಗೇಶ್‌ ಕಿವಿಗೆ ಕೇಳಿಸಿತ್ತು. ಹೀಗೆ ಕೂಪರ್‌ ಕಡೆಗೂ ಮನೆ ಸೇರುವಂತಾಗಿದ್ದ. ತಾವು ಹೇಳಿದಂತೆಯೇ ವಾಸುದೇವ್‌ ಅವರು 20,000ರೂ. ಬಹುಮಾನವನ್ನು ಖುಷಿಯಿಂದ ಕಾವಲುಗಾರ ಮುರುಗೇಶ್‌ ಅವರಿಗೆ ನೀಡಿದ್ದಾರೆ. ಮೂಕ ಪ್ರಾಣಿಯೊಂದು ಮನುಷ್ಯನಿಗೇ ಮನುಷ್ಯತ್ವ ಕಲಿಸುವುದೆಂದರೆ ಈ ಜೀವನ ಎಷ್ಟು ವಿಚಿತ್ರ ಅಲ್ಲವಾ?

Advertisement

ನೆಚ್ಚಿನ ಪಾ‹ಣಿ ಕಳೆದು ಹೋದಾಗ
ಬೆಂಗಳೂರಿನಲ್ಲಿ ಸಾಕುಪ್ರಾಣಿಗಳನ್ನು ಕಳೆದುಕೊಂಡವರಿಗೆ ಸಹಾಯ ಮಾಡಲೆಂದೇ ಅನೇಕ ಸಂಘ ಸಂಸ್ಥೆಗಳು, ಜಾಲತಾಣಗಳು, ಫೇಸ್‌ಬುಕ್‌ ಪೇಜ್‌ಗಳು, ವಾಟ್ಸಾಪ್‌ ಗ್ರೂಪ್‌ಗ್ಳು ಕಾರ್ಯಾಚರಿ ಸುತ್ತಿವೆ. ಒಮ್ಮೆ ಈ ಜಾಲತಾಣಗಳಿಗೆ ಭೇಟಿ ಕೊಟ್ಟು ನೋಡಿ ಹೊಸದೊಂದು ಪ್ರಪಂಚಕ್ಕೆ ನಿಮ್ಮನ್ನು  ಡೊಯ್ಯಬಹುದು. ಸಾಕುಪ್ರಾಣಿಯನ್ನು ಹೇಗೆ ಹುಡುಕಬೇಕು, ಎಲ್ಲೆಲ್ಲಿ ಹುಡುಕಬೇಕು ಎಂಬಿತ್ಯಾದಿ ಮಾಹಿತಿಯೂ ಅಲ್ಲಿ ಸಿಗುತ್ತದೆ. ನಾಯಿಗೆ ಮನೆಯ ದಾರಿಯ ತಿಳಿಯುವಂತೆ ಮಾಡಲು, ಅದೆಷ್ಟೋ ಮಾರ್ಗಗಳನ್ನು ಈ ಗ್ರೂಪು, ಜಾಲತಾಣಗಳಿಂದ ತಿಳಿೆದುಕೊಳ್ಳಬಹುದು. 

lostpetsbangalore.com, www.fi ndmydog.in

ಸಾಕುಪ್ರಾಣಿ ರಕ್ಷಣಾ ಸಂಸ್ಥೆಗಳು
ಕ್ಯೂಪಾ: 080 -2294 7317
ಕಾರ್ಟ್‌ಮನ್‌ ಸೊಸೈಟಿ: 9108805001
ಪ್ರಶಿಯಸ್‌ ಪಾವ್ಸ್‌ ಫೌಂಡೇಷನ್‌: 9742543510

 

Advertisement

Udayavani is now on Telegram. Click here to join our channel and stay updated with the latest news.

Next