Advertisement

ಓ ಪ್ರೇಮ ನೀನೆಷ್ಟು ಸುಂದರ…

11:40 AM Feb 21, 2018 | |

ಶಶಾಂಕ್‌ ನಿರ್ದೇಶನದ “ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮನೋಜ್‌, ಈಗ ಹೊಸದೊಂದು ಚಿತ್ರದ ಮೂಲಕ ಪುನಃ ಎಂಟ್ರಿ ಕೊಟ್ಟಿದ್ದಾರೆ. ಆ ಚಿತ್ರಕ್ಕೆ “ಓ ಪ್ರೇಮವೇ’ ಎಂದು ನಾಮಕರಣ ಮಾಡಿದ್ದಾರೆ. ಶೀರ್ಷಿಕೆಯೇ ಹೇಳುವಂತೆ, ಇದೊಂದು ಪಕ್ಕಾ ಲವ್‌ಸ್ಟೋರಿ ಕುರಿತಾದ ಸಿನಿಮಾ.

Advertisement

ಪ್ರೀತಿ ಕಥೆ ಇಲ್ಲಿದ್ದರೂ, ಇದೊಂದು ಹೊಸರೀತಿಯ ಪ್ರೀತಿ ಕಥೆ ಹೇಳಲು ಹೊರಟಿದ್ದಾರಂತೆ ಮನೋಜ್‌. ಅಂದಹಾಗೆ, ತುಂಬಾ ಗ್ಯಾಪ್‌ನಲ್ಲಿದ್ದ ಮನೋಜ್‌, ಪಕ್ಕಾ ತಯಾರಿಯೊಂದಿಗೇ ಚಿತ್ರ ಮಾಡಿ, ಬಿಡುಗಡೆಗೆ ಅಣಿಯಾಗಿದ್ದಾರೆ. ಈ ಬಾರಿ ಅವರು ನಾಯಕರಾಗುವ ಜೊತೆಗೆ ನಿರ್ದೇಶಕರಾಗಿಯೂ ಎಂಟ್ರಿಕೊಟ್ಟಿರುವುದು ಇನ್ನೊಂದು ವಿಶೇಷ.

ಈಗಾಗಲೇ “ಓ ಪ್ರೇಮವೇ’ ಚಿತ್ರದ ಹಾಡು, ಟ್ರೇಲರ್‌ ಮತ್ತು ಟೀಸರ್‌ ಜೋರು ಸದ್ದು ಮಾಡಿದ್ದು, ಮಾರ್ಚ್‌ 9 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆ ಕುರಿತು ನಾಯಕ ಕಮ್‌ ನಿರ್ದೇಶಕ ಮನೋಜ್‌, ತಮ್ಮ ಪ್ರೀತಿ, ಗೀತಿ ಇತ್ಯಾದಿ ಕುರಿತು ಮಾತನಾಡಿದ್ದಾರೆ.

ಬದಲಾವಣೆಗೆ ಕಾರಣ ಆಗೋ ಪ್ರೀತಿ: “ನಾನು “ಮೊಗ್ಗಿನ ಮನಸು’ ಚಿತ್ರದ ಮೂಲಕ ಹೀರೋ ಆದೆ. ಆ ಬಳಿಕ ಸಾಕಷ್ಟು ಕಥೆ ಬಂದರೂ ಒಪ್ಪಲಿಲ್ಲ. ನನಗೆ ಬೇರೇನೋ ಮಾಡಬೇಕು ಎಂಬ ತುಡಿತವಿತ್ತು. ನಿರ್ದೇಶನದ ಮೇಲೆ ಆಸಕ್ತಿ ಮೂಡಿತು. ಹಾಗಾಗಿ ನಾನು ಲಂಡನ್‌ನಲ್ಲಿರುವ “ಲಂಡನ್‌ ಫಿಲ್ಮ್ ಅಕಾಡೆಮಿ’ಯಲ್ಲಿ ನಿರ್ದೇಶನದ ತರಬೇತಿ ಪಡೆದು ಬಂದೆ. ಒಳ್ಳೆಯ ಕಥೆ ಇಟ್ಟುಕೊಂಡು ಚಿತ್ರವೊಂದನ್ನು ನಿರ್ದೇಶಿಸಬೇಕೆಂಬ ಆಸೆ ಚಿಗುರೊಡೆಯಿತು.

ನನ್ನ ಮನೆಯಲ್ಲೂ ನನ್ನ ಆಸೆಗೆ ಒತ್ತಾಸೆಯಾಗಿ ನಿಂತರು. ಅಮ್ಮ ಸಿ.ಟಿ. ಚಂಚಲಕುಮಾರಿ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದರಿಂದ ನಾನು ನಿರ್ದೇಶನ ಮಾಡಲು ಸಾಧ್ಯವಾಯ್ತು. ಇಲ್ಲಿ ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸಿದ್ದೇನೆ. ಇದು ನಮ್ಮ ಮೊದಲ ಎಂ.ಕೆ.ಫಿಲ್ಮ್ಸ್ ಬ್ಯಾನರ್‌ನಡಿ ನಿರ್ಮಾಣಗೊಂಡ ಮೊದಲ ಚಿತ್ರ. ಶೀರ್ಷಿಕೆ ನೋಡಿದಾಕ್ಷಣ, ಎಲ್ಲರಿಗೂ ಇದೊಂದು ಪ್ರೀತಿ, ಪ್ರೇಮ ಕುರಿತು ಸಿನಿಮಾ ಅಂತೆನಿಸುವುದು ನಿಜ.

Advertisement

ಹೌದು, ಎಲ್ಲಾ ಚಿತ್ರಗಳಲ್ಲೂ ಪ್ರೀತಿ ಸಹಜವಾಗಿರುತ್ತೆ. ಅದರಲ್ಲೂ ಸಿನಿಮಾಗಳಲ್ಲಿ ಪ್ರೀತಿಕಥೆಗಳು ಶಾಶ್ವತವಾಗಿರುತ್ತವೆ. ಒಂದು ಸಿನಿಮಾ ಹುಟ್ಟಿಗೆ ಮೂಲ ಕಾರಣವೇ ಪ್ರೀತಿ. ಆ ಮೂಲಕವೇ ಎಷ್ಟೋ ಲವ್‌ಸ್ಟೋರಿ ಚಿತ್ರಗಳು ಬಂದಿವೆ. ಎಲ್ಲಾ ಚಿತ್ರಗಳಲ್ಲೂ ಪ್ರೀತಿಯ ಎಳೆ ಇರುವಂತೆ “ಓ ಪ್ರೇಮವೇ’ ಚಿತ್ರದಲ್ಲೂ ಇದೆ. ಆದರೆ, ಆ ಪ್ರೀತಿಯ ಕಥೆ ಇಲ್ಲಿ ಸುಮ್ಮನೆ ಮೂಡಿಬಂದಿಲ್ಲ. ಒಂದು ಬದಲಾವಣೆಗೆ ಕಾರಣವಾಗುವಂತಹ ಪ್ರೀತಿ ಇಲ್ಲುಂಟು. ಬೆಂಗಳೂರಿನಲ್ಲಿ ನಡೆದ ಒಂದು ನೈಜ ಘಟನೆ ಈ ಚಿತ್ರದ ಹೈಲೆಟ್‌’ ಎಂಬುದು ಮನೋಜ್‌ ಮಾತು.

“ಯಾವುದೇ ಚಿತ್ರವಿರಲಿ, ಪ್ರೇಕ್ಷಕ ಬಯಸುವುದು ಅಪ್ಪಟ ಮನರಂಜನೆ ಮಾತ್ರ. ಅದು ‘ಓ ಪ್ರೇಮವೇ’ ಚಿತ್ರದಲ್ಲಿದೆ. ಚಿತ್ರ ನೋಡುಗರಿಗೆ ಎಲ್ಲೂ ತಮ್ಮ ಕಾಸಿಗೆ ಮೋಸವಿಲ್ಲ ಅಂತೆನಿಸುವಷ್ಟರ ಮಟ್ಟಿಗೆ ಚಿತ್ರ ಮೂಡಿಬಂದಿದೆ. ಒಂದು ನೈಜ ಘಟನೆ ಇಟ್ಟುಕೊಂಡು ಚಿತ್ರ ಮಾಡುವುದು ಸುಲಭವೇನಲ್ಲ. ಇಲ್ಲಿ ನೈಜತೆ ಜೊತೆಗೆ ಒಂದಷ್ಟು ಕಾಲ್ಪನಿಕ ಅಂಶಗಳೂ ಇವೆ. ಒಂದೊಳ್ಳೆಯ ಚಿತ್ರ ರೂಪುಗೊಳ್ಳುವುದಕ್ಕೆ ಮುಖ್ಯವಾಗಿ ಒಳ್ಳೆಯ ತಂಡ ಜತೆಗಿರಬೇಕು.

ಅದು ನನ್ನೊಂದಿಗೆ ಇದ್ದುದರಿಂದಲೇ, “ಓ ಪ್ರೇಮವೇ’ ಕಲರ್‌ಫ‌ುಲ್‌ ಆಗಿ ಮೂಡಿಬಂದಿದೆ. ಇಲ್ಲಿ ನನ್ನ ತಂಡದ ಬಗ್ಗೆ ಎಷ್ಟು ಹೇಳಿದರೂ ಸಾಲದು, ನನ್ನ ನಿರ್ದೇಶನಕ್ಕೆ ರಾತಿ-ಹಗಲು ಹೆಗಲು ಕೊಟ್ಟು ದುಡಿದ ತಂಡವಿದೆ. ಅವರೆಲ್ಲರು ತೋರಿದ ಪ್ರೀತಿ, ಸಹಕಾರದಿಂದ ನಿರ್ದೇಶನ ಮಾಡಲು ಸಾಧ್ಯವಾಗಿದೆ. ಇನ್ನು, ಚಿತ್ರದ ಛಾಯಾಗ್ರಾಹಕ ಕಿರಣ್‌ ಹಂಪಾಪುರ್‌ ಅವರಂತೂ, ಪ್ರತಿಯೊಂದು ಹಂತದಲ್ಲೂ ಜೊತೆಗಿದ್ದು, ಯಾವ ದೃಶ್ಯ ಹೇಗಿರಬೇಕು,

ಹೇಗೆಲ್ಲಾ ಮೂಡಿಬರಬೇಕು ಎಂಬುದನ್ನು ಜೊತೆಗೆ ಚರ್ಚಿಸಿದ್ದರಿಂದ ಚಿತ್ರ ಚೆನ್ನಾಗಿ ಮಾಡಲು ಸಾಧ್ಯವಾಗಿದೆ. ಸಂಕಲನಕಾರ ಕೆ.ಎಂ.ಪ್ರಕಾಶ್‌ ಅವರ ಕೆಲಸ ಬಗ್ಗೆ ಹೇಳಲೇಬೇಕು. ಒಂದು ಸಿನಿಮಾವನ್ನು ಮೊದಲು ನೋಡುವುದೇ ಅವರು. ಮೊದಲ ಸಲವೇ ಅವರು, ನನ್ನ ಕೆಲಸ ಮೆಚ್ಚಿಕೊಂಡು, ಸಿನಿಮಾಗೆ ಕತ್ತರಿ ಹಾಕಿ, ಎಷ್ಟು ಬೇಕೋ, ಏನು ಬೇಕೋ ಅದನ್ನು ಕೊಟ್ಟಿದ್ದಾರೆ. ತಂತ್ರಜ್ಞರ ಸಹಕಾರದಿಂದ ಚಿತ್ರ ನಿರೀಕ್ಷೆ ಮೀರಿ ಮೂಡಿಬಂದಿದೆ’ ಎನ್ನುತ್ತಾರೆ ಮನೋಜ್‌.

ಪಕ್ಕಾ ರೊಮ್ಯಾಂಟಿಕ್‌ ಲವ್‌ಸ್ಟೋರಿ: “ಓ ಪ್ರೇಮವೇ’ ಶೀರ್ಷಿಕೆ ಅಂದಾಕ್ಷಣ, ಪ್ರೀತಿಯದ್ದೇ ನನೆಪಾಗುತ್ತೆ. ಇದು ರವಿಚಂದ್ರನ್‌ ಅಭಿನಯಿಸಿರುವ ಚಿತ್ರದ ಹೆಸರು. ಆ ಚಿತ್ರದ ಶೀರ್ಷಿಕೆಯೇ ಇಲ್ಲಿ ಮರುಬಳಕೆಯಾಗಿದೆ. “ಶೀರ್ಷಿಕೆಗೆ ತಕ್ಕಂತೆ ಇಲ್ಲಿ ತ್ರಿಕೋನ ಪ್ರೇಮಕಥೆ ಇದೆ. ರೊಮ್ಯಾಂಟಿಕ್‌ ಲವ್‌ಸ್ಟೋರಿಯಲ್ಲಿ ಈಗಿನ ಜನರೇಷನ್‌ನ ತಳಮಳ, ಎಡವಟ್ಟುಗಳು, ನೋವು, ನಲಿವುಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ.

ಮೊದಲೇ ಹೇಳಿದಂತೆ, ಸಿನಿಮಾಗಳಲ್ಲಿ ಲವ್‌ಸ್ಟೋರಿ ಸಹಜ. ಇಲ್ಲಿ ಪ್ರೀತಿಗೆ ಹೊಸ ಅರ್ಥ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ನೈಜ ಘಟನೆಯಾದ್ದರಿಂದ,  ಸೂಕ್ಷ್ಮತೆಗೆ ಒತ್ತುಕೊಟ್ಟಿದ್ದೇವೆ. ಚಿತ್ರದ ಪ್ರಮುಖ ಅಂಶವೆಂದರೆ, ಇಲ್ಲಿ ಒಳ್ಳೆಯ ಕಥೆ ಇದೆ. ಅದಕ್ಕೆ ತಕ್ಕಂತಹ ಸುಂದರ ತಾಣಗಳೂ ಇವೆ. ಇಲ್ಲಿ ಸಂಗೀತ ಕೂಡ ಚಿತ್ರದ ಜೀವಾಳ ಎನ್ನಬಹುದು. ಆನಂದ್‌ ರಾಜ, ವಿಕ್ರಮ್‌ ಮತ್ತು ರಾಹುಲ್‌ ದೇವ್‌ ಅವರು ಸಂಗೀತ ನೀಡಿದ್ದಾರೆ.

ಚಿತ್ರದಲ್ಲಿ ಆರು ಹಾಡುಗಳಿವೆ. ಜಯಂತ್‌ ಕಾಯ್ಕಿಣಿ, ಕವಿರಾಜ್‌, ಬಹದ್ದೂರ್‌ ಚೇತನ್‌ಕುಮಾರ್‌ ಗೀತೆಗಳನ್ನು ರಚಿಸಿದ್ದಾರೆ. ಸೋನುನಿಗಮ್‌, ಶ್ರೇಯಾಘೋಷಾಲ್‌, ವಿಜಯಪ್ರಕಾಶ್‌, ಟಿಪ್ಪು ಹಾಡಿದ್ದಾರೆ. ಈಗಾಗಲೇ ಚಿತ್ರದ ಲಿರಿಕಲ್‌ ವೀಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದಿದೆ ಎಂದು ವಿವರಿಸುವ ಮನೋಜ್‌, ಚಿತ್ರದಲ್ಲಿ ನಿಕ್ಕಿ ಗಲಾನಿ ಮತ್ತು ಅಪೂರ್ವ ನಾಯಕಿಯರು.

ಅವರೊಂದಿಗೆ ರಂಗಾಯಣ ರಘು, ಸಾಧುಕೋಕಿಲ, ಬುಲೆಟ್‌ ಪ್ರಕಾಶ್‌, ಪ್ರಶಾಂತ್‌ ಸಿದ್ದಿ, ಸಂಗೀತ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಹುಚ್ಚವೆಂಕಟ್‌ ಕೂಡ ಇದ್ದಾರೆ. ನಿಜ ಜೀವನದ ಪಾತ್ರ ಅವರದು. ತೆರೆಯ ಮೇಲೆ ಹುಚ್ಚ ವೆಂಕಟ್‌ ಅವರದು ಎಮೋಷನ್‌ನಲ್ಲಿ ಸಾಗುವ ಪಾತ್ರವಿದೆ. ಅದನ್ನು ಸಿನಿಮಾದಲ್ಲೇ ಕಾಣಬೇಕು’ ಎನ್ನುತ್ತಾರೆ ನಿರ್ದೇಶಕರು.

ನೋಡುಗರಿಗೆ ಸಾರ್ಥಕ ಚಿತ್ರ: ಇಲ್ಲಿ ಕೇವಲ ಪ್ರೀತಿ, ಪ್ರೇಮಕ್ಕಷ್ಟೇ ಜಾಗ ಮೀಸಲಿಟ್ಟಿಲ್ಲ. ಇಲ್ಲಿ ಎರಡು ಅದ್ಭತ ಸಾಹಸ ದೃಶ್ಯಗಳೂ ಇವೆಯಂತೆ. “ಥ್ರಿಲ್ಲರ್‌ ಮಂಜು ಮತ್ತು ಡಿಫ‌ರೆಂಟ್‌ ಡ್ಯಾನಿ ಅವರು ಸಾಹಸ ಸಂಯೋಜಿಸಿದ್ದಾರೆ. ರಿಸ್ಕಿ ಸ್ಟಂಟ್‌ ಮಾಡಿದ್ದೇನೆ. ಆ ವೇಳೆ ಪೆಟ್ಟು ತಿಂದಿದ್ದರೂ ಈಗ ಆ ಸಾಹಸ ದೃಶ್ಯಗಳನ್ನು ನೋಡಿದಾಗ ಆ ನೋವೆಲ್ಲಾ ಮರೆತುಹೋಗುತ್ತದೆ. ಚಿತ್ರದಲ್ಲಿ ಹರ್ಷ, ಮದನ್‌-ಹರಿಣಿ, ಕಂಬಿರಾಜು, ಶ್ರೀನಿವಾಸ್‌ ಪ್ರಭು ನೃತ್ಯ ಸಂಯೋಜನೆ ಮಾಡಿದ್ದಾರೆ.

ಸ್ವಿಜ್ಜರ್‌ಲ್ಯಾಂಡ್‌ನ‌ ಜಿನಿವಾ ಸೇರದಂತೆ ಅಪರೂಪದ ತಾಣಗಳಲ್ಲಿ ಚಿತ್ರೀಕರಿಸಿರುವುದು ಹಾಡುಗಳ ವಿಶೇಷ. ಈಗಾಗಲೇ “ಹುಸಿನಗೆ..’ ಹಾಡಿಗಂತೂ ಎಲ್ಲೆಡೆಯಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಸೋನು ನಿಗಮ್‌ ಅವರು ಆ ಹಾಡನ್ನು ಹಾಡಿದ್ದಾರೆ. ಆ ಹಾಡಿನ ಸಾಹಿತ್ಯವನ್ನು ಅವರು ಮರಾಠಿಯಲ್ಲಿ ಬರೆದುಕೊಂಡು, ಕೇವಲ ಹದಿನೈದು ನಿಮಿಷದಲ್ಲೇ ಆ ಹಾಡು ಹಾಡುವ ಮೂಲಕ ಸಾಹಿತ್ಯದ ಅರ್ಥ ತಿಳಿದು, ಖುಷಿಗೊಂಡಿದ್ದು ಮರೆಯುವಂತಿಲ್ಲ.

ಚಿತ್ರಕ್ಕೆ ಸತೀಶ್‌ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರಕ್ಕಾಗಿ ವರ್ಷಗಟ್ಟಲೇ ಶ್ರಮಪಟ್ಟಿದ್ದೇವೆ. ಆ ಶ್ರಮ ಇಂದು ತೆರೆಯ ಮೇಲೆ ನೋಡಿದಾಗ, ಎಲ್ಲೋ ಒಂದು ಕಡೆ, ಸಾರ್ಥಕ ಎನಿಸುತ್ತದೆ. ಒಂದೊಳ್ಳೆಯ ಚಿತ್ರ ಆಗೋಕೆ ಕಾರಣ, ಮುಖ್ಯವಾಗಿ ನನ್ನ ಚಿತ್ರತಂಡ. ಅವರ ಪ್ರೋತ್ಸಾಹ, ಸಹಕಾರದಿಂದಲೇ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಏಕಾಏಕಿ ಈ ಚಿತ್ರವನ್ನು ಮಾಡಿಲ್ಲ.

ನೈಜ ಘಟನೆಯ ಕಥೆಯಾದ್ದರಿಂದ, ಎಲ್ಲವನ್ನೂ ತಾಳ್ಮೆಯಿಂದ ಗಮನಿಸಿ, ಕಥೆ, ಚಿತ್ರಕಥೆ ರೆಡಿಮಾಡಿಕೊಂಡು ಆ ಬಳಿಕ ಪಾತ್ರಗಳನ್ನೆಲ್ಲಾ ಒಟ್ಟಿಗೆ ಸೇರಿಸಿ ವರ್ಕ್‌ಶಾಪ್‌ ನಡೆಸಿದ ನಂತರ ಚಿತ್ರಕ್ಕೆ ನಿರ್ದೇಶನ ಮಾಡಿದ್ದೇನೆ’ ಎನ್ನುವುದು ಮನೋಜ್‌. “ಓ ಪ್ರೇಮವೇ’ ಚಿತ್ರವು ಸದ್ಯಕ್ಕೆ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದು, ಮಾರ್ಚ್‌ 9ಕ್ಕೆ ರಾಜ್ಯಾದ್ಯಂತ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈವರೆಗೆ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳು ಪಕ್ಕಾ ಆಗಿವೆ. ಬಿಡುಗಡೆಯ ಹೊತ್ತಿಗೆ ಇನ್ನಷ್ಟು ಚಿತ್ರಮಂದಿರಗಳಲ್ಲೂ ಚಿತ್ರ ತೆರೆ ಕಾಣಲಿದೆ ಎಂದು ಹೇಳುತ್ತಾರೆ ಮನೋಜ್‌.

Advertisement

Udayavani is now on Telegram. Click here to join our channel and stay updated with the latest news.

Next