Advertisement
ಹೆಸರು ಗೊತ್ತಿಲ್ಲದವಳೇ,ಏನೆಂದು ಕರೆಯಲಿ ನಿನ್ನ? “ಹೆಸರು ಗೊತ್ತಿಲ್ಲದವಳೇ’ ಎಂದು ಸಂಬೋಧಿಸುವುದೇ ಸೂಕ್ತ. ನಿನಗೆ ನಿನ್ನಷ್ಟೇ ಚಂದದ ಒಂದು ಹೆಸರಿದೆಯಲ್ಲ, ಅದೇನಂತ ನನಗೆ ಗೊತ್ತಿಲ್ಲ. ನನ್ನ ಮನಸ್ಸಿಗೆ ಬಂದ ಹೆಸರನ್ನು ನಿನಗಿಡುವುದಕ್ಕೂ ಇಷ್ಟವಿಲ್ಲ. ವಾರಕ್ಕೊಮ್ಮೆಯೋ, ಹದಿನೈದು ದಿನಕ್ಕೊಮ್ಮೆಯೋ ನೀನು ಕಂಡಾಗ ನನ್ನ ಮನಸ್ಸಿನಲ್ಲಿ ಮೂಡುತ್ತದಲ್ಲ; ಆ ಭಾವನೆಗೂ ಹೆಸರು ತೋಚಿಲ್ಲ.
Related Articles
Advertisement
ಆವತ್ತು ನಾನು-ನೀನು ಒಂದೇ ಸ್ಟೇಶನ್‌ನಲ್ಲಿ ಇಳಿದೆವು. ಬೇಕಂತಲೇ ನಾನು ನಿನ್ನನ್ನು ದಾಟಿ ಬೇಗ ಬೇಗ ಮುಂದೆ ಹೆಜ್ಜೆ ಹಾಕಿದೆ. ಮತ್ತೆ ನೀನು ನೆನಪಾಗಿದ್ದು ನಿನ್ನನ್ನು ಇವತ್ತು ಕಂಡಾಗಲೇ. ನೀನೊಂಥರಾ ಅಪರಿಚಿತ ಪರಿಚಿತೆ. ಒಮ್ಮೊಮ್ಮೆ ಅನಿಸುತ್ತದೆ, ನಿನ್ನನ್ನು ಮಾತಾಡಿಸಬೇಕು, ನಿನ್ನತ್ತ ಪರಿಚಯದ ನಗು ಬೀರಬೇಕು ಅಂತ. ತಕ್ಷಣವೇ ಹೃದಯವೇಕೋ ಹಿಂಜರಿಯುತ್ತದೆ.
ನನಗೆ ನಿನ್ನ ಸ್ವರ ಇಷ್ಟವಾಗದಿದ್ದರೆ, ನಿನ್ನ ಹೆಸರು ಚೆನ್ನಾಗಿಲ್ಲದಿದ್ದರೆ, ನೀನು ನನ್ನನ್ನು ಜೊಲ್ಲುಪಾರ್ಟಿ ಅಂದುಕೊಂಡುಬಿಟ್ಟರೆ, ನೀನು ಕೆಟ್ಟ ಮನಸ್ಸಿನವಳಾಗಿದ್ದರೆ, ನಿನ್ನ ಆಸಕ್ತಿಯ ವಿಷಯಗಳು ನನಗೆ ಹಿಡಿಸದಿದ್ದರೆ, ನಿನಗೆ ನನ್ನ ಭಾಷೆ ಅರ್ಥವಾಗದಿದ್ದರೆ, ಯಾರು ನೀವು ಅಂತ ಒರಟಾಗಿ ಕೇಳಿಬಿಟ್ಟರೆ, ಮಾತಾಡದೇ ಮುಖ ತಿರುವಿದರೆ….ಈ ಎಲ್ಲಾ “ರೆ’ಗಳು ನನ್ನ ಬಾಯಿ ಮುಚ್ಚಿಸಿಬಿಡುತ್ತವೆ. ಕೊನೆಗೆ ನಿನ್ನ ಮುಖ ನೋಡುವುದೇ ಬೇಡ ಅಂತ ನನಗನ್ನಿಸಿಬಿಟ್ಟರೆ ಏನು ಮಾಡಲಿ?
ಬೇಡ, ಹೀಗೆಯೇ ಇದ್ದು ಬಿಡೋಣ. ನಿನ್ನ ಪ್ರಪಂಚದಲ್ಲಿ ಯಾರ್ಯಾರೋ ಇದ್ದಾರೆ. ನಾನು ಅದರೊಳಗೆ ತೂರಿಕೊಳ್ಳಲು ಬಯಸುವುದಿಲ್ಲ. ಹೇಳಿದೆನಲ್ಲ, ಇದು ನನಗೆ ಮತ್ತು ನನಗೆ ಮಾತ್ರ ಸಂಬಂಧಿಸಿದ ಭಾವನೆ. ಆದರೆ, ಒಂದೂ ಮಾತನ್ನಾಡದೆ, ನನ್ನತ್ತ ತಿರುಗಿಯೂ ನೋಡದೆ, ನನ್ನನ್ನು ಸೆಳೆದ ನಿನ್ನ ಶಕ್ತಿಗೆ ಶರಣು. ಆಗಾಗ ಕಾಣಿಸುತ್ತಿರು, ದೂರದಿಂದಲೇ ನಿನ್ನನ್ನು ನೋಡಿ ಖುಷಿ ಪಡುತ್ತೇನೆ. ಯಾವಾಗಲೂ ಚೆನ್ನಾಗಿರು..ಇಂತಿ
ನಿನಗೆ ಸಂಬಂಧವಿಲ್ಲದವನು
* ಪ್ರಿಯಾಂಕ್