Advertisement

ಅಧಿಕಾರಿಗಳ ಕಾರ್ಯ ವೈಖರಿಗೆ ಬೇಸರ

10:59 AM Sep 27, 2018 | |

ಯಾದಗಿರಿ: ಸೂಚನಾ ಪತ್ರ ಕಳಿಸಿದರೂ ಸಭೆಯ ಗೌರವ ನೀಡುತ್ತಿಲ್ಲ. ಪ್ರತಿ ಬಾರಿ ಹೇಳಿ ಸಾಕಾಯಿತು ಎಂದು ಜಿಪಂ
ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಲಾ ಹೊಸಮನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಪಂ ಸಾಮಾನ್ಯ ಸ್ಥಾಯಿ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಮುಖವಾಗಿ ಆರೋಗ್ಯ, ಶಿಕ್ಷಣ, ಅರಣ್ಯ, ಕೃಷಿ ಇಲಾಖೆಗಳ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಸಭೆಗೆ ಗೈರಾದರೆ ಮಾಹಿತಿ ನೀಡುವರು ಯಾರು? ಅಧಿಕಾರಿಗಳನ್ನು ತಕ್ಷಣ ಕರಿಸಿ, ಬಾರದಿರುವವರಿಗೆ ನೋಟಿಸ್‌ ನೀಡಿ ಎಂದು ಜಿಪಂ ಉಪಕಾರ್ಯದರ್ಶಿಗೆ ಸೂಚಿಸಿದರು.

ಜಿಪಂ ಉಪಕಾರ್ಯದರ್ಶಿ ವಸಂತರಾವ್‌ ಕುಲಕರ್ಣಿ ಸಭೆ ಉದ್ದೇಶಿಸಿ ಮಾತನಾಡಿ, ಜಿಲ್ಲಾಡಳಿತ ಭವನದಲ್ಲಿ ಇದ್ದು ಅಧಿಕಾರಿಗಳು, ಪ್ರತಿನಿಧಿಗಳನ್ನು ಕಳಿಸುವುದು ಸೂಕ್ತವಲ್ಲ. ಅಧಿಕಾರಿಗಳು ಎಲ್ಲಾ ಸ್ಥಾಯಿ ಸಮಿತಿಗಳನ್ನು ಗೌರವಿಸಿ ಸಭೆಗೆ ಹಾಜರಾಗಬೇಕು ಎಂದು ಎಚ್ಚರಿಕೆ ನೀಡಿದರು.
 
ಮೊದಲಿಗೆ ವಯಸ್ಕರ ಶಿಕ್ಷಣ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಅಧಿಕಾರಿ ಸಭೆಗೆ ಮಾಹಿತಿ ನೀಡುತ್ತಿದ್ದಂತೆ, ಸದಸ್ಯ ಶಿವಲಿಂಗಪ್ಪ ಪುಟಗಿ ಮಾತನಾಡಿ, ಈ ಹಿಂದಿನ 3 ವರ್ಷಗಳಲ್ಲಿ ಎಲ್ಲಿ ಸಾಕ್ಷರತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡುವಂತೆ ಕಳೆದ ಸಭೆಯಲ್ಲಿಯೇ ನಿದೇಶಿಸಲಾಗಿತ್ತು. ಮಾಹಿತಿ ಎಲ್ಲಿದೆ ಎಂದು ಪ್ರಶ್ನಿಸಿದರು. 

ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷೆ ಚಂದ್ರಕಲಾ ಎಲ್ಲಿಯೂ ಸಾಕ್ಷರತೆ ಕಾರ್ಯಕ್ರಮ ನಡೆದಿಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಕ್ಷರ ದಾಸೋಹ ಅಧಿಕಾರಿ ಹೊಸಮನಿ ಮಾತನಾಡಿ, ಪ್ರಸ್ತುತ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಹಲವೆಡೆ ಅಡುಗೆ ಕೋಣೆ ನಿರ್ಮಾಣ ಕಾಮಗಾರಿ ವಿಳಂಬ ಆವಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಸ್ಥಳದ ಕೊರತೆ
ಇರುವುದರಿಂದ ನಿರ್ಮಾಣವಾಗಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

Advertisement

ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಅಧಿಕಾರಿ ಹಬೀಬ ಉಸ್ಮಾನ ಪಟೇಲ್‌ ಮಾತನಾಡಿ, ಜಿಲ್ಲೆಯಲ್ಲಿ 6
ಆಂಬ್ಯುಲೆನ್ಸ್‌ ನಿರುಪಯುಕ್ತವಾಗಿದ್ದು, ಹೊಸದಾಗಿ ಅಕ್ಟೋಬರ್‌ ತಿಂಗಳಿನಲ್ಲಿ ಬರುತ್ತಿರುವ ಕುರಿತು ಸಭೆಗೆ ಮಾಹಿತಿ ನೀಡಿದರು. ಜನಸಂಖ್ಯೆಗೆ ಅನುಗುಣವಾಗಿ 15 ಆಂಬ್ಯುಲೆನ್ಸ್‌ಗಳು ಬೇಕಾಗುತ್ತದೆ. ಪ್ರಸ್ತುತ ಹೈಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ 3 ಆಂಬ್ಯುಲೆನ್ಸ್‌ಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. 

ಜಿಲ್ಲೆಯ ನಗನೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1 ಆಂಬ್ಯುಲೆನ್ಸ್‌ ಅವಶ್ಯಕತೆ ಇದೆ. ಆ ಭಾಗದ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ ನಗನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆರಿಗೆ ಕೋಣೆಯು ಶಿಥಿಲಾವಸ್ಥೆಗೆ ತಲುಪಿದ್ದು, ಈ ಬಗ್ಗೆ ಪರಿಶೀಲಿಸಿ, ರಿಪೇರಿಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು. ಇದೇ ವೇಳೆ ಇನ್ನು ಒಂದು ವಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಎಚ್‌ಒ ಸಭೆಯ ಗಮನಕ್ಕೆ ತಂದರು. ಸ್ಥಾಯಿ ಸಮಿತಿ ಸದಸ್ಯರಾದ ಮರಲಿಂಗಪ್ಪ ಕಾರ್ನಾಳ, ಭೀಮಬಾಯಿ, ಅನಿತಾ ರಾಠೊಡ, ಅಶೋಕರಡ್ಡಿ ಗೋನಾಳ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next