ಶಿರಸಿ: ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇಲಾಖೆಗಳ ಸಮನ್ವಯತೆ ಕೊರತೆಯ ಪರಿಣಾಮ ರಾಜ್ಯಾದ್ಯಂತ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಗುರುವಾರ ತಾಲೂಕಿನ ಹುಲೇಕಲ್ ಗ್ರಾಪಂ ಆವಾರದಲ್ಲಿ ತಾಲೂಕಿನಾದ್ಯಂತ ಸಂಚರಿಸಲಿರುವ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಅಧಿಕಾರಿಗಳು ರೈತರ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ತೋರಬೇಕೆ ವಿನಃ ತಮ್ಮ ಆಡಳಿತಾತ್ಮಕ ತಪ್ಪಿನ ಪರಿಣಾಮವನ್ನು ರೈತರು ಅನುಭವಿಸುವಂತೆ ಆಗಬಾರದು ಎಂದರು.
ಜಿಲ್ಲಾದ್ಯಂತ ಕಳೆದ ಅವಧಿಯಲ್ಲಿ ರೈತರ ಬೆಳೆಯ ಮಾಹಿತಿ ಮತ್ತು ಚಿತ್ರಣಗಳ ಜೊತೆಗೆ ಜಿಪಿಎಸ್ ಮಾಡಲಾಗಿದೆ. ಆದರೆ ಪಹಣಿ ಪತ್ರಿಕೆಯಲ್ಲಿ ತದ್ವಿರುದ್ಧ ಬೆಳೆ ನಮೂದಾಗಿರುವ ಪರಿಣಾಮ ರೈತರು ಸಹಕಾರಿ ಸಂಘ ಮತ್ತು ಬ್ಯಾಂಕ್ ಗಳಲ್ಲಿ ಸಾಲ ಪಡೆಯಲು ತೀವ್ರ ಅನಾನುಕೂಲ ಉಂಟಾಗಿದೆ ಎಂದರು.
ರೈತರ ಬಂದೂಕು ಪರವಾನಗಿ ಪರಿಷ್ಕೃತ ಮಾಡಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಆರು ತಿಂಗಳ ಹಿಂದೆಯೆ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಆಗಿಲ್ಲ. ಚುನಾವಣೆ ನಿಮಿತ್ತ ಬಂದೂಕುಗಳನ್ನು ಠಾಣೆಯಲ್ಲಿ ಇಡಲಾಗಿದೆ. ಈಗ ರೈತರ ಬಳಿ ಪರವಾನಗಿ ಇಲ್ಲ ಎಂಬ ಕಾರಣಕ್ಕೆ ಬಂದೂಕುಗಳನ್ನು ಹಿಂತಿರುಗಿಸುತ್ತಿಲ್ಲ. ರೈತರು ತಮ್ಮ ಬೆಳಗೆಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಪ್ರಶ್ನಿಸಿದ ಅವರು, ಸರ್ಕಾರ ಸಾಲಮನ್ನಾ ವಿಚಾರವಾಗಿ ರೈತರಿಂದ ಪಡೆದಿದ್ದ ಮಾಹಿತಿಗಳು ಹಾಗೂ ವಿಧಿಸಿದ್ದ ನಿಯಮಗಳ ಗೊಂದಲಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
ಜಿಪಂ ಸದಸ್ಯ ಜಿ.ಎನ್ ಹೆಗಡೆ ಮುರೇಗಾರ್ ಮತಾನಾಡಿ, ಇಲಾಖೆಗಳ ಸಮನ್ವಯತೆ ಸರಿಯಾಗಿದ್ದಾಗ ಮಾತ್ರ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ಕೃಷಿಕರ ಎಲ್ಲ ಸಾಲಗಳು ಮನ್ನಾ ಆಗಬೇಕಿದೆ. ರೈತ ಸಮುದಾಯ ಸರ್ಕಾರಿ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದೆ. ರೈತರ ಮಕ್ಕಳ ನಗರ ಫಲಾಯನ ತಪ್ಪಿಸಲು ಸಬಲೀಕರಣ ಕಡ್ಡಾಯವಾಗಿ ಆಗಬೇಕಿದೆ ಎಂದರು.
ತಾಪಂ ಸದಸ್ಯರಾದ ನರಸಿಂಹ ಹೆಗಡೆ, ರವಿ ಹೆಗಡೆ ಹಳದೋಟ, ಸೋಂದಾ ಗ್ರಾಪಂ ಅಧ್ಯಕ್ಷ ಮಂಜುನಾಥ ಭಂಡಾರಿ, ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ, ಶಂಕರ ಹೆಗಡೆ ಇನ್ನಿತರರು ಇದ್ದರು.