ಗಂಗಾವತಿ: ಕಠಿಣ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಕದ್ದುಮುಚ್ಚಿ ಬಟ್ಟೆಗಳನ್ನು ಹೆಚ್ಚು ಜನ ಗ್ರಾಹಕರನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ಇಲ್ಲಿನ ಆರಾಧನಾ ಫ್ಯಾಬ್ರಿಕ್ಸ್ ಬಟ್ಟೆ ಅಂಗಡಿಗೆ ಪೌರಾಯುಕ್ತ ಅರವಿಂದ ಜಮಖಂಡಿ ನೇತೃತ್ವದಲ್ಲಿ ಕಂದಾಯ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಸೀಲ್ ಮಾಡಿದ್ದಾರೆ.
ಓಎಸ್ ಬಿ ರೋಡ್ ನಲ್ಲಿರುವ ಬಹುತೇಕ ಬಟ್ಟೆ ಅಂಗಡಿ ಮಾಲೀಕರು ಕದ್ದುಮುಚ್ಚಿ ಗ್ರಾಹಕರನ್ನು ಪೋನ್ ಮಾಡಿ ಕರೆದು ವ್ಯಾಪಾರ ಮಾಡುತ್ತಿರುವ ಕುರಿತು ‘ಉದಯವಾಣಿ’ ದಿನಪತ್ರಿಕೆ ಮತ್ತು ವೆಬ್ ಸೈಟ್ ನಲ್ಲಿ ಪದೇ ಪದೇ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಮಂಗಳವಾರ ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಬಟ್ಟೆ ಅಂಗಡಿ ಮುಂದಿನ ಮತ್ತು ಹಿಂದಿನ ಶೆಟರ್ ಗೆ ಬೀಗ ಹಾಕಿ ಸೀಲ್ ಹಾಕಿದ್ದಾರೆ.
ಇದನ್ನೂ ಓದಿ:ಕೊಡಗು: ನಕಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ತಯಾರಿಸಿ ಕೊಡುತ್ತಿದ್ದ ಪತ್ರಕರ್ತ ಪೊಲೀಸರ ಬಲೆಗೆ
ಈ ಸಂದರ್ಭದಲ್ಲಿ ಪೌರಾಯುಕ್ತ ಅರವಿಂದ ಜಮಖಂಡಿ ಅವರು ‘ಉದಯವಾಣಿ’ ಜತೆ ಮಾತನಾಡಿ ಬಟ್ಟೆ ಅಂಗಡಿ ಮಾಲೀಕರಿಗೆ ಪದೇ ಪದೇ ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯ ಮಾಡಿ ಕದ್ದುಮುಚ್ಚಿ ಜನರನ್ನು ಸೇರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದು ನಿಯಮ ಉಲ್ಲಂಘನೆ ಮಾಡುವ ಬಟ್ಟೆ ಅಂಗಡಿಗಳಿಗೆ ಕಠಿಣ ಲಾಕ್ ಡೌನ್ ಅವಧಿ ಮುಗಿಯುವ ತನಕ ಬೀಗ ಹಾಕಿ ಸೀಲ್ ಹಾಕಲಾಗುತ್ತದೆ ಎಂದರು.
ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಆರೋಗ್ಯ ನೈರ್ಮಲ್ಯಾಧಿಕಾರಿ ನಾಗರಾಜ ಸೇರಿ ನಗರಸಭೆ ಅಧಿಕಾರಿಗಳಿದ್ದರು