ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಅಪಾರ್ಟ್‌ಮೆಂಟ್ ಹಾಗೂ ವಿಲ್ಲಾಗಳ ಪತ್ತೆಗೆ ಮುಂದಾದ ನಗರ ಯೋಜನೆ ಸ್ಥಾಯಿ ಸಮಿತಿ, ಅನಧಿಕೃತ ಕಟ್ಟಡಗಳ ನಿರ್ಮಾಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಲು ಆಯುಕ್ತರಿಗೆ ಶಿಫಾರಸ್ಸು ಮಾಡಲು ತೀರ್ಮಾನಿಸಿದೆ.
ನಗರದಲ್ಲಿ ನೂರಾರು ಅನಧಿಕೃತ ಅಪಾರ್ಟ್‌ಮೆಂಟ್ ನಿರ್ಮಾಣವಾಗುತ್ತಿದ್ದು ಪಾಲಿಕೆಯ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪ ಕಳೆದ ಬಿಬಿಎಂಪಿ ಕೌನ್ಸಿಲ್ ಸಭೆ ಕೇಳಿಬಂದ ಹಿನ್ನೆಲೆಯಲ್ಲಿ ಬುಧವಾರ ಬೊಮ್ಮನಹಳ್ಳಿ ವಲಯದಲ್ಲಿ ಕಾರ್ಯಾಚರಣೆ ನಡೆಸಿದ ಸ್ಥಾಯಿ ಸಮಿತಿ ಅನಧಿಕೃತ ಕಟ್ಟಡಗಳನ್ನು ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಬೊಮ್ಮನಹಳ್ಳಿ ವಲಯದ ಕೂಡ್ಲು ಗೇಟ್ ಬಳಿ ಝೆಸ್(ಝಡ್‌ಇಯುಎಸ್) ಸಂಸ್ಥೆ ಕೆರೆಯ ಬಫರ್ ಜೋನ್ ಒತ್ತುವರಿ ಮಾಡಿಕೊಂಡು ಕೋಟ್ಯಂತರ ಮೌಲ್ಯದ ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿದೆ. ಅಲ್ಲಿಗೆ ಭೇಟಿ ನೀಡಿದ ಸ್ಥಾಯಿ ಸಮಿತಿ ಕಾನೂನಿ ಪ್ರಕಾರ 30 ಮೀಟರ್ ಬಫರ್ ಜೋನ್ ಕಾಯ್ದುಕೊಳ್ಳ ಬೇಕೆಂಬ ನಿಮಯವಿದ್ದರೂ ಸಂಸ್ಥೆಯವರು ಕೇವಲ 2-3 ಮೀಟರ್ ಬಿಟ್ಟು ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿದ್ದಾರೆ. ಜತೆಗೆ ಪಾಲಿಕೆಯಿಂದ ಸ್ವಾಧೀನಾನುಭವ ಪತ್ರ ಪಡೆಯದೆ ವಿಲ್ಲಾವನ್ನು 4 ಕೋಟಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಸಮಿತಿ ಸದಸ್ಯರು ಆರೋಪಿಸಿದರು.
ಸಂಸ್ಥೆಯವರು ಕಟ್ಟಡ ನಿರ್ಮಾಣ ಆರಂಭಿಕ ಪ್ರಮಾಣ ಪತ್ರ ಹಾಗೂ ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಪಡೆಯದೆ ವಿಲ್ಲಾಗಳನ್ನು ಹಂಚಿಕೆ ಮಾಡಲಾಗಿದ್ದು, ಈಗಾಗಲೇ ಎರಡು ಮನೆಗಳಲ್ಲಿ ಜನರು ವಾಸವಿದ್ದಾರೆ. 2011ರಲ್ಲಿಯೇ ಸಂಸ್ಥೆಯವರು ಬಫರ್ ಜೋನ್ ಆಕ್ರಮಿಸಿ ಕಟ್ಟಡ ನಿರ್ಮಾಣಿ ಸಿದರೂ ಪಾಲಿಕೆಯ ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಮಿತಿ ಸದಸ್ಯರು ಹರಿಹಾಯ್ದರು.
ಮನಸೋ ಇಚ್ಛೆ ರಾಜಕಾಲುವೆ ತಿರುವು ಸಾವಿರಾರು ಮನೆಗಳನ್ನೊಳಗೊಂಡ ಅಪಾರ್ಟ್‌ಮೆಂಟ್ ನಿರ್ಮಾಣಕ್ಕಾಗಿ ಎಸ್‌ಎನ್‌ಎನ್ ಸಂಸ್ಥೆ 30 ಅಡಿಗಳ ರಾಜಕಾಲುವೆಯನ್ನು ತಮಗಿಷ್ಟ ಬಂದ ಹಾಗೆ ತಿರುವುಗೊಳಿಸಿದ್ದಾರೆ. 30 ಅಡಿಗಳ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು 5-8 ಅಡಿಗೆ ಕುಗ್ಗಿಸಿದ್ದು, ಬೊಮ್ಮನಹಳ್ಳಿಯ ನಗರ ಯೋಜನೆ ವಿಭಾಗದಿಂದಲೇ ನಕ್ಷೆ ಪಡೆದುಕೊಂಡಿದ್ದರೂ, ಅಧಿಕಾರಿಗಳು ಒತ್ತುವರಿ ತಡೆಲು ಮುಂದಾಗಿಲ್ಲ ಎಂದು ಸಮಿತಿ ಸದಸ್ಯ ನಾಗರಾಜ್ ಆರೋಪಿಸಿದರು.
ನಿಯಮ ಪಾಲಿಸದಿದ್ದರೂ ಕ್ರಮವಿಲ್ಲ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ಶಕೀಲ್ ಅಹಮದ್, ಅಪಾರ್ಟ್‌ಮೆಂಟ್ ಹಾಗೂ ವಿಲ್ಲಾಗಳ ನಿರ್ಮಾಣಕ್ಕಾಗಿ ಬಿಲ್ಡರ್‌ಗಳು ಕೆರೆ ಹಾಗೂ ರಾಜಕಾಲುವೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆಯಿಂದ 30 ಮೀಟರ್ ಬಫರ್ ಜೋನ್ ಕಾಯ್ದುಕೊಳ್ಳ ಬೇಕೆಂಬ ಹಳೆಯ ನಿಯಮವನ್ನೂ ಝೆಸ್ ಸಂಸ್ಥೆ ಪಾಲಿಸಿಲ್ಲ. ಅದೇ ರೀತಿ ಎಸ್‌ಎನ್‌ಎನ್ ಸಂಸ್ಥೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಸಾವಿರಾರು ಮನೆಗಳ ಅಪಾರ್ಟ್‌ಮೆಂಟ್ ನಿರ್ಮಿಸಿದೆ. ಆದರೂ, ಪಾಲಿಕೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಸಹಾಯಕ ಎಂಜಿನಿಯರ್ ಹಾಗೂ ಕಾರ್ಯಪಾಲಕ ಸಹಾಯಕ ಎಂಜಿನಿಯರ್ ಅವರನ್ನು ಅಮಾನತುಗೊಳಿಸುವಂತೆ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.