Advertisement

ಅಧಿಕಾರಿಗಳ ಪದೇ ಪದೆ ಕೋರ್ಟ್‌ಗೆ ಕರೆಸುವುದು ಸಲ್ಲ

06:42 AM Jan 01, 2019 | |

ಬೆಂಗಳೂರು: ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರು ತೀರಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಅಧಿಕಾರಿಗಳನ್ನು ಪದೇ ಪದೆ ಕೋರ್ಟ್‌ಗೆ ಕರೆಸುವುದು ಒಳ್ಳೆಯದಲ್ಲ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ವಿ. ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ “2019ರ ದಿನಚರಿ ಹಾಗೂ “ಭೂಸ್ವಾಧೀನ-ಬದಲಾದ ದೃಷ್ಟಿಕೋನ’ ಸಂಶೋಧನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. 

ಕಾನೂನು ಉಲ್ಲಂಘನೆ, ನ್ಯಾಯಾಂಗ ನಿಂದನೆಯಂತಹ ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಅಧಿಕಾರಿಗಳನ್ನು ಕೋರ್ಟ್‌ಗೆ ಕರೆಸುವುದು ಸಮರ್ಥನೀಯ. ಆದರೆ, ನ್ಯಾಯಾಧೀಶರು ವಿನಾಕಾರಣ ಪದೇ ಪದೆ ಅಧಿಕಾರಿಗಳನ್ನು ಕೋರ್ಟ್‌ಗೆ ಕರೆಸುವುದು ಒಳ್ಳೆಯದಲ್ಲ.

ಒಬ್ಬ ಅಧಿಕಾರಿ ಬೆಳಗ್ಗೆಯಿಂದ ಸಂಜೆ ತನಕ ಕೋರ್ಟ್‌ನಲ್ಲಿ ಸಮಯ ಕಳೆದರೆ, ಆತನಿಗಾಗಿ ಕಾಯುವ ನೂರಾರು ಜನ ಕಷ್ಟ ಅನುಭವಿಸಬೇಕಾಗುತ್ತದೆ. ನಾನು ಸೇವೆಯಲ್ಲಿದ್ದಾಗಲೂ ನನ್ನ ನಿಲುವು ಇದೇ ಆಗಿತ್ತು. ಈಗಲೂ ಆ ನಿಲುವಿಗೆ ನಾನು ಬದ್ಧನಾಗಿದ್ದೇನೆ ಎಂದು ನ್ಯಾ. ಪಾಟೀಲ್‌ ಹೇಳಿದರು.

ನಮ್ಮ ದೇಶದಲ್ಲಿ ಕಾನೂನುಗಳಿಗೆ ಕೊರತೆಯಿಲ್ಲ. ಅದರ ಅನುಸರಣೆ, ಅನುಷ್ಠಾನದಲ್ಲಿ ಸಮಸ್ಯೆಯಿದೆ. ಅದೇ ರೀತಿ ಭಾಷಣ ಮತ್ತು ಘೋಷಣೆಗಳಿಗೆ ಕೊರತೆಯಿಲ್ಲ. ಆದರೆ, ಆಚರಣೆ ಮತ್ತು ಅನುಷ್ಠಾನದ ಕೊರತೆಯಿದೆ. ಕಾರ್ಯಾಂಗ ಇಲ್ಲದೇ ಕಾನೂನುಗಳು ಮತ್ತು ಘೋಷಣೆಗಳ ಅನುಷ್ಠಾನ ಸಾಧ್ಯವಿಲ್ಲ.

Advertisement

ಜನರ ಸೇವೆಯಲ್ಲಿ ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ. ಅಧಿಕಾರ ಸಿಕ್ಕಾಗ ಸೇವೆ ಮಾಡಿ ಆಡಳಿತ ಅಲ್ಲ. ಕರ್ತವ್ಯ ನಿರ್ವಹಿಸಿ ಅಧಿಕಾರದ ಪ್ರದರ್ಶನ ಮಾಡಬೇಡಿ. ಸೇವೆಯಿಂದ ನಿವೃತ್ತಿ ಹೊಂದುವ ಮೊದಲು ನಿಮ್ಮ ಕೆಲಸ ಮಾಡಿ ಎಂದು ನ್ಯಾ. ಪಾಟೀಲ್‌ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. 

ಕಾರ್ಯಕ್ರಮದಲ್ಲಿ ಭೂಸ್ವಾಧೀನ-ಬದಲಾದ ದೃಷ್ಟಿಕೋನ ಗ್ರಂಥದ ಲೇಖಕ ಎಸ್‌.ಜಿ. ಬಿರಾದರ್‌, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್‌ ಪರ್ವೇಜ್‌, ಹಿರಿಯ ಐಎಎಸ್‌ ಅಧಿಕಾರಿ ಶಿವಯೋಗಿ ಕಳಸದ, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಅಧ್ಯಕ್ಷ ಜಯವಿಭವ ಸ್ವಾಮಿ ಮತ್ತಿತರರು ಇದ್ದರು. 

ಸಕಾಲಕ್ಕೆ ಬಡ್ತಿ ಮುಖ್ಯ – ಸಿಎಸ್‌: ಹುದ್ದೆಗಳು ಖಾಲಿಯಾದ ದಿನವೇ ಅಥವಾ ಅದಕ್ಕಿಂತ ಮೊದಲೇ ಡಿಪಿಸಿ ಸಿದ್ಧಪಡಿಸಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಅಧಿಕಾರಿಗಳಿಗೆ ಸಕಾಲದಲ್ಲಿ ಬಡ್ತಿ ಸಿಕ್ಕರೆ ಅದುವೇ ಅವರಿಗೆ ಪ್ರೇರಣೆ.

ಆದರೆ, ಬಿ.ಕೆ.ಪವಿತ್ರ ಪ್ರಕರಣದಿಂದ ಬಡ್ತಿಯಲ್ಲಿ ಸ್ವಲ್ಪ ವಿಳಂಬವಾಗುತ್ತಿದೆ. ಬಡ್ತಿ ಇಲ್ಲದೇ ಅನೇಕರು ನಿವೃತ್ತಿ ಹೊಂದುತ್ತಿರುವುದು ನನಗೂ ನೋವು ತರಿಸಿದೆ. ಬಿ.ಕೆ.ಪವಿತ್ರ ಪ್ರಕರಣ ಇತ್ಯರ್ಥಗೊಂಡರೆ ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next