Advertisement

ಮರಳು ದಂಧೆಯಲ್ಲಿ ಅಧಿಕಾರಿಗಳೇ ಶಾಮೀಲು

04:17 PM Jun 10, 2017 | Team Udayavani |

ದಾವಣಗೆರೆ: ಹರಪನಹಳ್ಳಿ ತಾಲೂಕಿನ ತಾವರೆಗೊಂದಿ, ಹಲವಾಗಲು ಮರಳು ಬ್ಲಾಕ್‌ಗಳಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ಅಧಿಕಾರಿಗಳೇ ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. 

Advertisement

ಶ್ರೀ ಜಯದೇವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಅಕ್ರಮ ಮರಳು ದಂಧೆಗೆ ಕಾರಣವಾದವರ ವಿರುದ್ಧ ಸಿಒಡಿ ತನಿಖೆ ನಡೆಸಿ, ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಒಳಗೊಂಡಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದರು. 

ಸರ್ಕಾರ ಜನಸಾಮಾನ್ಯರಿಗ ಸುಲಭವಾಗಿ ದೊರೆಯುವಂತೆ ಮರಳು ನೀತಿ ರೂಪಿಸಿದ್ದರೂ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಕೈ ಜೋಡಿಸಿ ನೈಸರ್ಗಿಕ ಸಂಪತ್ತಾದ ಮರಳು ಲೂಟಿ ಮಾಡುವ ಮೂಲಕ ಸರ್ಕಾರದ ಬೊಕ್ಕಸದ ನಷ್ಟಕ್ಕೆ ಕಾರಣವಾಗುತ್ತಿದ್ದಾರೆ. ಅಕ್ರಮ ಮರಳುಗಾರಿಕೆ, ಸಾಗಾಣಿಕೆ ತಡೆಯಬೇಕಾದವರೇ ಅಕ್ರಮ ಮರಳುಗಾರಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಹರಪನಹಳ್ಳಿ ತಾಲೂಕಿನ ಮರಳು ಬ್ಲಾಕ್‌ನಲ್ಲಿ ನಿರಂತರವಾಗಿ ಮರಳು ಮಾμಯಾ ನಡೆಯುತ್ತಿದೆ. ಗುತ್ತಿಗೆದಾರರಿಗೆ ನಿಗದಿಪಡಿಸಿದ ಜಾಗ ಬಿಟ್ಟು ಬೇರೆ ಕಡೆ ಮರಳು ತೆಗೆಯುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈವರೆಗೆ ಏನಿಲ್ಲವೆಂದರೂ 10 ಕೋಟಿಯಷ್ಟು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ದೂರಿದರು. 

ತಾವರಗೊಂದಿ, ಹಲವಾಗಲು ಬ್ಲಾಕ್‌ನಲ್ಲಿ ಸರ್ಕಾರದ ನಿಯಮ ಗಾಳಿಗೆ ತೂರಿ ಒಂದು ಪರ್ಮಿಟ್‌ ಹೆಸರಲ್ಲಿ 10 ಪರ್ಮಿಟ್‌ಗಳ ಮರಳು ಲೂಟಿ ಮಾಡಲಾಗುತ್ತಿದೆ. 6 ಟನ್‌ ಗಾಡಿಗೆ 20 ಟನ್‌ ಮರಳು ಹೇರುತ್ತಿದ್ದಾರೆ. ಒಂದೇ ಪರ್ಮಿಟ್‌ನಲ್ಲಿ ಮನಸ್ಸಿಗೆ ಬಂದಷ್ಟು ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಪರ್ಮಿಟ್‌ ನೀಡಬೇಕು ಎನ್ನುವ ನಿಯಮ ಗಾಳಿಗೆ ತೂರಿ ತಮಗೆ ಬೇಕಾದವರಿಗೆ ನೀಡಲಾಗುತ್ತಿದೆ.

Advertisement

ಅಲ್ಲದೆ ಅಕ್ರಮ ದರ ನಿಗದಿಪಡಿಸಿ, ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ದೂರಿದರು. ಎಲ್ಲಾ ಬ್ಲಾಕ್‌ಗಳಲ್ಲಿ ಕಡ್ಡಾಯವಾಗಿ ದರಪಟ್ಟಿ ಹಾಕಬೇಕು. ಹೊಸ ಮರಳುನೀತಿ ಅನ್ವಯ ಎಲ್ಲಾ ನಿಯಮಗಳನ್ನು  ಕಟ್ಟುನಿಟ್ಟಾಗಿ ಪಾಲಿಸಬೇಕು. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವ ಗುತ್ತಿಗೆದಾರರನ್ನ ಕಪ್ಪುಪಟ್ಟಿಗೆ ಸೇರಿಸಬೇಕು. ಗಣಿ ಮತ್ತು ಭೂ ವಿಜ್ಞಾನದ ಇಲಾಖೆಯ ಮೂಲಕವೇ ಪಾಸ್‌ ವಿತರಿಸುವ ವ್ಯವಸ್ಥೆ ಮಾಡಬೇಕು.

ಜಿಪಿಆರ್‌ಎಸ್‌ ಇದ್ದರೆ ಮಾತ್ರವೇ ವಾಹನಗಳಿಗೆ ಅನುಮತಿ ನೀಡುವುದು ಒಳಗೊಂಡಂತೆ ಇತರೆ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಎಚ್‌.ಎಂ. ಮಹೇಶ್ವರಸ್ವಾಮಿ, ಮಲ್ಲಾಪುರದ ದೇವರಾಜ್‌, ಬೂದಿಹಾಳ್‌ ಸಿದ್ದೇಶ್‌, ಬೇವಿನಹಳ್ಳಿ ಮಹೇಶ್‌, ಶμವುಲ್ಲಾ, ಮರುಳಸಿದ್ದಪ್ಪ, ಮಹೇಶಪ್ಪ, ಡಿ. ಶರಣಪ್ಪ, ಜಯಾನಾಯ್ಕ, ಗಂಗಾಧರ್‌, ಕೊಟ್ರೇಶ್‌, ಚಂದ್ರಪ್ಪ, ದಾನಪ್ಪ, ಪರಶುರಾಮಪ್ಪ, ಇಮಾಮ್‌ ಬೇಗ್‌ ಇತರರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next