ಹುಮನಾಬಾದ: ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ವಿಧಾನ ಸಭಾಚುನಾವಣೆಯನ್ನು ವಿವಿಧ ಪಕ್ಷಗಳ ಮುಖಂಡರು ಬಹುದಿನಗಳಿಂದ ಎದುರು ನೋಡುತ್ತಿದ್ದು, ಚುನಾವಣಾಧಿಕಾರಿಗಳು ಚುನಾವಣೆಯ ಪೂರ್ವಸಿದ್ದತೆಗಾಗಿ ಆಯಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮತಗಟ್ಟೆಗಳ ಉಸ್ತುವಾರಿ ವಹಿಸಿ ಆದೇಶ ನೀಡಿದ್ದು, ಚುನಾವಣಾ ಕಾವು ಹೆಚ್ಚಿಸಿದಂತಾಗಿದೆ.
2018ರ ವಿಧಾನಸಭಾ ಚುನಾವಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಹುಮನಾಬಾದ ತಾಲೂಕಿನ ಸೆಕ್ಟರ್ ಅಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಅಧಿಕೃತ ಜ್ಞಾಪನ ಹೊರಡಿಸಿದ್ದಾರೆ. ಹುಮನಾಬಾದ ಮತ ಕ್ಷೇತ್ರದ ಒಟ್ಟು 248 ಮತಗಟ್ಟೆಗಳ ಪೈಕಿ ತಲಾ 20 ಮತಗಟ್ಟೆಗಳ ಉಸ್ತುವಾರಿಯನ್ನು ಒಬ್ಬ ತಾಲೂಕು ಅಧಿಕಾರಿಗೆ ವಹಿಸಲಾಗಿದೆ. ಒಟ್ಟು 13 ಅಧಿಕಾರಿಗಳು ಕ್ಷೇತ್ರದ 248 ಮತಗಟ್ಟೆಗಳ ಉಸ್ತುವಾರಿ ಕೆಲಸ ನಿರ್ವಹಿಸಲಿದ್ದಾರೆ. ಜ.8ರಿಂದಲೇ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ತೊಡಗಬೇಕಾಗಿದ್ದು, ತಪ್ಪಿದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1951ರನ್ವಯ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ಸೂಚಿಸಿದ್ದಾರೆ.
ಸೆಕ್ಟರ್ ಅಧಿಕಾರಿಗಳ ಕಾರ್ಯ: ಆಯಾ ಮತಗಟ್ಟೆಗಳ ವ್ಯಾಪ್ತಿಯಲ್ಲಿನ ಮತದಾರರ ಗುರುತಿನ ಚೀಟಿಗಳಿಗೆ ಸಂಬಂಧಿಸಿದಂತೆ ಫಾರಂ 6, 7, 8 ಹಾಗೂ 8ಎ ಅರ್ಜಿಗಗಳ ಕನಿಷ್ಠ ಶೆ.30ರಷ್ಟು ನೈಜತೆ ಪರಿಶೀಲಿಸಿ ಖಾತ್ರಿ ಪಡೆಸಿಕೊಂಡು ಮುಂದಿನ 7 ದಿನಗಳಲ್ಲಿ ಅನುಪಾಲನೆ ಸಲ್ಲಿಸುವುದು. ಆಯಾ ಮತಗಟ್ಟೆಗಳಿಗೆ ಅಧಿಕಾರಿಗಳು ಭೇಟಿನೀಡಿ ಅವುಗಳ ಸುಸ್ಥಿತಿ, ವಿದ್ಯುತ್ ದೀಪ, ಕೀಟಕಿ, ಬಾಗಿಲು ರ್‍ಯಾಂಪ್ ಸೇರಿದಂತೆ ಮತಗಟ್ಟೆಗಳಲ್ಲಿನ ಇನ್ನಿತರೆ ಮೂಲ ಸೌಲಭ್ಯಗಳ ಕುರಿತು ವರದಿ ಸಲ್ಲಿಸುವುದು. ಲಿಂಗ ಅನುಪಾತ ಹೆಚ್ಚಾಗಿದ್ದು, ತಾರತಮ್ಯ ಸರಿಪಡಿಸುವ ಕುರಿತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಂದ ಜನಸಂಖ್ಯಾ ವಿವರ ಪಡೆದು ಪರಿಶೀಲಿಸುವುದು ಹಾಗೂ ಸೂಕ್ತ ಅಭಿಪ್ರಾಯವನ್ನು ಇಲಾಖೆಗೆ ನೀಡುವುದು ಸೆಕ್ಟರ್ ಅಧಿಕಾರಿಗಳ ಮೊದಲ ಕರ್ತವ್ಯವಾಗಿದೆ.
ಹುಮನಾಬಾದ: ಯಾವ ಅಧಿಕಾರಿ ಎಲ್ಲೆಲ್ಲಿ ? ಕ್ಷೇತ್ರ ಶಿಕ್ಷಣಾಧಿ ಕಾರಿ ಮತಗಟ್ಟೆ ಸಂಖ್ಯೆ 1ರಿಂದ 20, ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತಗಟ್ಟೆ ಸಂಖ್ಯೆ 21ರಿಂದ 40, ಲೋಕೋಪಯೋಗಿ ಇಲಾಖೆಯ ಎಇಇ ಮತಗಟ್ಟೆ ಸಂಖ್ಯೆ 41ರಿಂದ 60, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಅಭಿಯಂತರರು ಮತಗಟ್ಟೆ ಸಂಖ್ಯೆ 61ರಿಂದ 80, ಕೃಷಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮತಗಟ್ಟೆ ಸಂಖ್ಯೆ 81ರಿಂದ 100, ಕೆಪಿಟಿಸಿಎಲ್ ಸಹಾಯಕ ಅಭಿಯಂತರರು ಮತಗಟ್ಟೆ ಸಂಖ್ಯೆ 101ರಿಂದ 120, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿದೇರ್ಶಕರು ಮತಗಟ್ಟೆ ಸಂಖ್ಯೆ 121ರಿಂದ 140, ಕಾರಂಜಾ ಯೋಜನೆಯ ಸಹಾಯ ಅಭಿಯಂತರರು ಮತಗಟ್ಟೆ ಸಂಖ್ಯೆ 141ರಿಂದ 160, ಶಿಶು ಅಅಭಿವೃದ್ಧಿ ಯೋಜನಾ ಧಿಕಾರಿ ಮತಗಟ್ಟೆ ಸಂಖ್ಯೆ 161ರಿಂದ 180, ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ಮತಗಟ್ಟೆ ಸಂಖ್ಯೆ 181ರಿಂದ 200, ವಲಯ ಅರಣ್ಯಾಧಿಕಾರಿ ಸಾಮಾಜಿಕ ಮತಗಟ್ಟೆ ಸಂಖ್ಯೆ 201ರಿಂದ 220, ಹಿರಿಯ ತೋಟಗಾರಿಕೆ ಅಧಿಕಾರಿ ಮತಗಟ್ಟೆ ಸಂಖ್ಯೆ 221ರಿಂದ 240, ಕೃಷಿ ಉತ್ಪನ ಮಾರುಕಟ್ಟೆ ಅಧಿಕಾರಿ ಮತಗಟ್ಟೆ ಸಂಖ್ಯೆ 241ರಿಂದ 248 ವರೆಗಿನ ಮತಗಟ್ಟೆಗಳ ಉಸ್ತುವಾರಿ ವಹಿಸಲಿದ್ದಾರೆ.
ದುರ್ಯೋಧನ ಹೂಗಾರ