ಹಾಸನ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಸನ ಜಿಲ್ಲೆಯಲ್ಲಿ ವರ್ಗಾವಣೆಯ ಭರಾಟೆಗೆ ಅಧಿಕಾರಿಗಳು, ನೌಕರರು ಬೆಚ್ಚಿಬಿದ್ದಿದ್ದಾರೆ. ಯಾವ ದಿನ ತಮ್ಮ ವರ್ಗಾವಣೆ ಆದೇಶ ಹೊರ ಬೀಳುತ್ತದೋ ಎಂಬ ಆತಂಕದಲ್ಲಿಯೇ ಅಧಿಕಾರಿಗಳು ದಿನಗಳನ್ನು ದೂಡುತ್ತಿದ್ದು, ಆಡಳಿತ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೂ ಹಿನ್ನಡೆಯಾಗುತ್ತಿದೆ.
ಸ್ಥಳ ತೋರಿಸಿಲ್ಲ: ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಯಾಗಿದ್ದ ಎ.ಎನ್.ಪ್ರಕಾಶ್‌ಗೌಡ ಅವರಿಗೆ ಸ್ಥಳ ತೋರಿಸದೇ ವರ್ಗ ಮಾಡಿದ ಸರ್ಕಾರ ಅವರ ಸ್ಥಾನಕ್ಕೆ ರಾಂ ನಿವಾಸ್ ಸೆಪೆಟ್ ಅವರನ್ನು ವರ್ಗಾವಣೆ ಮಾಡಿತು. ಆನಂತರ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು 6 ತಿಂಗಳು ಅಧಿಕಾರವಧಿ ಪೂರ್ಣಗೊಳಿಸುವ ಮುನ್ನವೇ ಅವರಿಗೂ ಸ್ಥಳ ತೋರಿಸದೇ ವರ್ಗಾವಣೆ ಮಾಡಿದ ಸರ್ಕಾರ ಹಾಸನ ಜಿಲ್ಲಾಧಿಕಾರಿ ಹುದ್ದೆಗೆ ಆರ್.ಗಿರೀಶ್ ಅವರನ್ನು ವರ್ಗಾಯಿಸಿದೆ.
ಹಾಸನ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗೆ ಹಾಸನ ನಗರಸಭೆ ಆಯುಕ್ತರಾಗಿದ್ದ ಬಿ.ಎ. ಪರಮೇಶ್ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರ, ಹಾಸನ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಅವರನ್ನು ಹಾಸನ ನಗರಸಭೆ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹುದ್ದೆಗೆ ಬೆಳಗಾವಿ ಜಿಪಂ ಕಾರ್ಯದರ್ಶಿ ಯಾಗಿದ್ದ ಬಿ.ಎ.ಜಗದೀಶ್ ಅವರು ವರ್ಗವಾಗಿ ಬಂದಿದ್ದಾರೆ. ಬಿ.ಎ.ಜಗದೀಶ್ ಅವರು ಹಾಸನ ಜಿಪಂ ಸಿಇಒ ಬಿ.ಎ.ಪರಮೇಶ್ ಅವರ ಕಿರಿಯ ಸಹೋದರ.
ಶೀಘ್ರ ಡಿವೈಎಸ್ಪಿಗಳ ವರ್ಗಾವಣೆ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟರಮಣ ರೆಡ್ಡಿ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಈ ಹಿಂದೆ ಇದ್ದ ಶ್ರೀಧರ್ ಅವರನ್ನು ವರ್ಗಾಯಿಸಲಾಗಿದೆ.
ಹಾಸನ ನಗರ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಹುದ್ದೆ ಯಲ್ಲಿದ್ದ ಸತ್ಯನಾರಾಯಣ ಅವರನ್ನು ವರ್ಗಾಯಿಸಿ ಕೃಷ್ಣರಾಜು ಅವರನ್ನು ನಿಯೋಜಿ ಸಲಾಗಿದೆ. ಡಿ.ವೈಎಸ್ಪಿಗಳ ವರ್ಗಾವಣೆ ಸದ್ಯದಲ್ಲಿಯೇ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಪಿಎಸ್‌ಐಗಳ ವರ್ಗಾವಣೆ ಯಂತೂ ನಡೆಯುತ್ತಲೇ ಇದೆ. ಅರಸೀಕೆರೆ ನಗರಸಭೆಯ ಆಯುಕ್ತ ಪರಮೇಶ್ವರಪ್ಪ ಅವರನ್ನು ವರ್ಗಾವಣೆ ಮಾಡಿ ಆವರ ಸ್ಥಾನಕ್ಕೆ ಕಾಂತರಾಜ್ ಅವರನ್ನು ವರ್ಗಾಯಿಸಲಾಗಿದೆ. ಹೀಗೆ ಸರಣಿ ವರ್ಗಾವಣೆಯಿಂದಾಗಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದು, ಕೆಲಸ ಮಾಡುವ ಉತ್ಸಾಹವನ್ನೇ ಕಳೆದುಕೊಂಡಿದ್ದಾರೆ.
ವರ್ಗಾವಣೆಗೆ ಬಿಜೆಪಿ ಶಾಸಕರ ಒತ್ತಡ? ಇಷ್ಟೆಲ್ಲಾ ವರ್ಗಾವಣೆಯಾಗಿರುವುದು ಒಂದೂವರೆ ತಿಂಗಳಲ್ಲಿ. ಬಿಜೆಪಿಯ ಶಾಸಕರು ಹಾಗೂ ಆ ಪಕ್ಷದ ಮುಖಂಡರ ಒತ್ತಡದಿಂದಾದಾಗಿಯೇ ಈ ವರ್ಗಾವಣೆಗಳಾಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರಗಳು ಬದಲಾದಾಗ ಹಿರಿಯ ಅಧಿಕಾರಿಗಳ ವರ್ಗಾವಣೆ ಯಾಗುವುದು ಸಹಜ. ಆದರೆ ಈಗ ವರ್ಷದ ಮಧ್ಯ ಭಾಗದಲ್ಲಿ ವರ್ಗಾವಣೆಯಾಗುವುದರಿಂದ ಅಧಿಕಾರಿ ಗಳು ಮನೆ ಖಾಲಿ ಮಾಡುವುದು. ಮಕ್ಕಳ ವಿದ್ಯಾ ಭ್ಯಾಸದ ವ್ಯವಸ್ಥೆ ಮಾಡಲು ಪರದಾಡುವಂತಾಗಿದೆ.
ಅಧಿಕಾರಿಗಳ ಈ ಅಕಾಲಿಕ ವರ್ಗಾವಣೆಗೆ ಹಿಂದೆ ಅಧಿಕಾರದಲ್ಲಿದ್ದ ರಾಜಕಾರಣಿಗಳಿಗೆ ನಿಷ್ಠರಾಗಿದ್ದರು ಎಂಬ ಏಕೈಕ ಕಾರಣದಿಂದ ಅಧಿಕಾರಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂಬ ದೂರುಗಳಿವೆ.
● ಎನ್. ನಂಜುಂಡೇಗೌಡ