Advertisement

ಅಧಿಕಾರಿ ಆತ್ಮಹತ್ಯೆ: ಚುರುಕುಗೊಂಡ ಸಿಐಡಿ ತನಿಖೆ

11:31 PM May 29, 2024 | Shreeram Nayak |

ಶಿವಮೊಗ್ಗ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿದೆ. ಪ್ರಕರಣ ತೀವ್ರತೆ ಪಡೆಯುತ್ತಿರುವ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಬುಧವಾರ ಕೂಡ ತನಿಖೆ ಮುಂದುವರಿಸಿದರು.

Advertisement

ಬುಧವಾರ ಚಂದ್ರಶೇಖರ್‌ ಅವರ ನಿವಾಸಕ್ಕೆ ಭೇಟಿ ನೀಡಿದ ಸಿಐಡಿ ಅಧಿಕಾರಿಗಳು ಕುಟುಂಬಸ್ಥರ ಜತೆ 4 ಗಂಟೆಗೂ ಅಧಿ ಕ ಕಾಲ ಮಾತುಕತೆ ನಡೆಸಿ ಅಗತ್ಯ ಮಾಹಿತಿ ಪಡೆದರು. ಚಂದ್ರಶೇಖರ್‌ ಬಳಸುತ್ತಿದ್ದ ಲ್ಯಾಪ್‌ಟಾಪ್‌ ಹಾಗೂ ಪ್ರಿಂಟರ್‌ ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಕೂಡ ಪೆನ್‌ಡ್ರೈವ್‌, ಡೆತ್‌ನೋಟ್‌, ಪೆನ್ನು ವಶಕ್ಕೆ ಪಡೆದಿದ್ದರು. ಗುರುವಾರ ಕೂಡ ತನಿಖೆ ಮುಂದುವರಿಯುವ ಸಾಧ್ಯತೆ ಇದೆ.

ಭುಗಿಲೆದ್ದ ಆಕ್ರೋಶ
ರಾಜ್ಯದ ಹಲವೆಡೆ ಸಚಿವ ನಾಗೇಂದ್ರ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು ಬಿಜೆಪಿ ಕಾರ್ಯ ಕರ್ತರು ಬಳ್ಳಾರಿಯ ರಾಯಲ್‌ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ, ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲೂ ಸಚಿವರ ಹೆಸರು ಹೇಳಿಲ್ಲ: ಪರಮೇಶ್ವರ್‌
ಬೆಂಗಳೂರು: ಮಹರ್ಷಿ ವಾಲಿ¾ಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಸಿಐಡಿ ತನಿಖೆ ನಡೆಸುತ್ತಿದೆ. ಬೇರೆ ಬೇರೆ ಐಟಿ ಕಂಪೆನಿಗಳಿಗೆ ವರ್ಗಾವಣೆ ಆಗಿರುವ ಆರೋಪ ತನಿಖೆಯಿಂದ ಹೊರಬರುತ್ತದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.

Advertisement

ಒಂದೊಂದು ಘಟನೆಯಾದಾಗಲೂ ವಿಪಕ್ಷದವರು ರಾಜೀನಾಮೆ ಕೇಳುತ್ತಾರೆ. ಹಣ ವರ್ಗಾವಣೆಗೆ ಮೌಖಿಕವಾಗಿ ಆದೇಶ ಕೊಟ್ಟಿದ್ದಾರೆ ಎಂಬ ಆರೋಪ ತನಿಖೆಯಲ್ಲಿ ಸಾಬೀತಾದರೆ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈಶ್ವರಪ್ಪ ಅವರ ವಿರುದ್ಧದ ಪ್ರಕರಣದಲ್ಲಿ ಅವರ ಹೆಸರನ್ನು ನೇರವಾಗಿ ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಸಚಿವರ ಹೆಸರನ್ನು ಎಲ್ಲಿಯೂ ನೇರವಾಗಿ ಹೇಳಿಲ್ಲ. ತನಿಖೆ ಆಗುವವರೆಗೂ ಕಾಯಬೇಕು ಎಂದು ಹೇಳಿದರು.

ಯೂನಿಯನ್‌ ಬ್ಯಾಂಕ್‌ ಸಿಇಒ ಸೇರಿ
6 ಮಂದಿ ವಿರುದ್ಧ ಎಫ್ಐಆರ್‌
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಸಂಬಂಧ ಯೂನಿಯನ್‌ ಬ್ಯಾಂಕ್‌ ಸಿಇಒ ಎ. ಮಣಿಮೇಖಲೈ ಸೇರಿದಂತೆ 6 ಮಂದಿ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ನಿಗಮದ ಪ್ರಧಾನ ವ್ಯವಸ್ಥಾಪಕ ಎ. ರಾಜಶೇಖರ್‌ ಅವರು ಈ ಕುರಿತು ದೂರು ನೀಡಿದ್ದು ಅದರನ್ವಯ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ. ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ವಹಿಸಿದ್ದು ಈ ಪ್ರಕರಣ ಕೂಡ ಸಿಐಡಿಯಿಂದಲೇ ತನಿಖೆ ಆಗಲಿದೆ. ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕಿ ಹಾಗೂ ಸಿಇಒ ಮಣಿಮೇಖಲೈ, ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ನಿತೇಶ್‌ ರಂಜನ್‌, ರಾಮಸುಬ್ರಮಣಿಯಂ, ಸಂಜಯ್‌ ರುದ್ರ, ಪಂಕಜ್‌ ದ್ವಿವೇದಿ ಹಾಗೂ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮಿತಾ ರೌಲ್‌ ವಿರುದ್ಧ ಎಫ್ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಮಾನತು ಆದೇಶದಲ್ಲಿ 89.63 ಕೋಟಿ; ಎಫ್ಐಆರ್‌ನಲ್ಲಿ 94.73 ಕೋಟಿ ರೂ.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಮತ್ತು ಲೆಕ್ಕಾಧಿಕಾರಿಯನ್ನು ಅಮಾನತುಗೊಳಿಸಿರುವ ಆದೇಶದಲ್ಲಿ 89.63 ಕೋಟಿ ರೂ. ಹಣ ದುರುಪಯೋಗ ಆಗಿದೆ ಎಂದು ಉಲ್ಲೇಖೀಸಿದ್ದರೆ, ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್‌ ನೀಡಿರುವ ದೂರಿನಲ್ಲಿ 94.73 ಕೋಟಿ ರೂ. ಬೇರೆ ಖಾತೆಗಳಿಗೆ ವರ್ಗಾವಣೆ ಆಗಿದೆ ಎಂದು ನಮೂದಿಸಿದ್ದಾರೆ. ಸರಕಾರಿ ಅದೇಶಕ್ಕೂ, ಪೊಲೀಸ್‌ ಎಫ್ಐಆರ್‌ಗೂ ಸಾಕಷ್ಟು ವ್ಯತ್ಯಾಸಗಳಿದ್ದು, ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next