Advertisement

ರಾಮಪ್ಪನ ತಾಂಡಾಕ್ಕೆ ಅಧಿಕಾರಿಗಳ ದೌಡು

04:02 PM Apr 02, 2019 | Team Udayavani |

ಮುದಗಲ್ಲ: ಸಮೀಪದ ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಿವಿಧ ಹಟ್ಟಿ, ತಾಂಡಾಗಳ ಜನತೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ ಹಿನ್ನೆಲೆಯಲ್ಲಿ ಮಸ್ಕಿ ತಹಶೀಲ್ದಾರ್‌ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ರಾಮಪ್ಪನ ತಾಂಡಾಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.

Advertisement

ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗೊಲ್ಲರಹಟ್ಟಿ, ವೇಣ್ಯಪ್ಪನ ತಾಂಡಾ, ಸೋಂಪುರ ತಾಂಡಾ, ರಾಮಪ್ಪನ ತಾಂಡಾ. ಲಿಂಬೆಪ್ಪನ ತಾಂಡಾ ಹಾಗೂ ಮೀಸೆ ಖೀರೆಣ್ಣನ ತಾಂಡಾಗಳಲ್ಲಿನ ಸಮಸ್ಯೆಗೆ ಬೇಸತ್ತು ಗ್ರಾಮಸ್ಥರು ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಅಧಿಕಾರಿಗಳಗೆ ಮನವಿ ಸಲ್ಲಿಸಿ ಎಚ್ಚರಿಸಿದ್ದರು. ಸಮಸ್ಯೆಗಳನ್ನು ಪರಿಹರಿಸಿದರೆ ಮಾತ್ರ ಮತ ಚಲಾಯಿಸುವುದಾಗಿ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಮಸ್ಕಿ ತಹಶೀಲ್ದಾರ್‌ ಬಲರಾಮ ಕಟ್ಟಿಮನಿ, ಲಿಂಗಸುಗೂರ ತಾಪಂ ಒಇ ಪ್ರಕಾಶ ಒಡ್ಡರ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ರಾಮಪ್ಪನ ತಾಂಡಾಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಚರ್ಚಿಸಿ ಮತ ಚಲಾಯಿಸುವಂತೆ ಮನವೊಲಿಸಿದರು.

ಕಾಟಾಚಾರದ ಸಭೆ: ಸುಮಾರು 6 ಹಳ್ಳಿಯ ಜನರು ಸೇರಿ ಕುಡಿಯುವ ನೀರು, ರಸ್ತೆ, ಅಂಗನವಾಡಿ, ವೃದ್ಧಾಪ್ಯ ವೇತನ, ವಿಧವಾ ವೇತನ. ಭೂ ದಾಖಲೆಗಳ ವರ್ಗಾವಣೆ, ತಿದ್ದುಪಡಿ ಹಾಗೂ ಆರೋಗ್ಯ ಸೇರಿದಂತೆ ಹತ್ತು ಹಲವು ಜ್ವಲಂತ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.

ಈ ವೇಳೆ ಮಾತನಾಡಿದ ಅಧಿಕಾರಿಗಳು ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ರಾಮಪ್ಪನ ತಾಂಡಾ ಮತ್ತು ವೇಣ್ಯಪ್ಪನ ತಾಂಡಾ ರಸ್ತೆ ಕಾಮಗಾರಿಯನ್ನು ಚುನಾವಣೆ ಬಳಿಕ ನೋಡೋಣ. ಕಂದಾಯ ಇಲಾಖೆಯ ಸಮಸ್ಯೆಗಳಿಗೆ ಮಸ್ಕಿ ತಹಶೀಲ್ದಾರ್‌ ಕಾರ್ಯಾಲಯಕ್ಕೆ ಬನ್ನಿ ಎಂದು ತಹಶೀಲ್ದಾರ್‌ ಬಲರಾಮ ಕಟ್ಟಿಮನಿ ಹೇಳುತ್ತಿದ್ದಂತೆ ಇತ್ತ ಜನರು ಮಸ್ಕಿ ಕಂದಾಯ ಇಲಾಖೆಯಲ್ಲಿ ಪೂರ್ವಜರು ಮರಣವಾದ ನಂತರ ಪೋತಿ ವೀರಾಸತ್‌ಗೆ ಸಲ್ಲಿಸಿದ ಅರ್ಜಿಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ತಿರಸ್ಕೃತಗೊಳಿಸಿದ್ದರು. ಆ ವಿಚಾರವಾಗಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲರು ಜನರಿಗೆ ತೊಂದರೆ ಕೊಡದೆ ನಿಯಮನುಸಾರ ಭೂ ದಾಖಲೆಗಳನ್ನು ವಿತರಿಸಿ ಎಂದು ಹೇಳಿ ವರ್ಷವಾಗಿದೆ. ತಹಶೀಲ್ದಾರ್‌ ಕೋರ್ಟ್‌ಗೆ ಅಲೆದರು ಇಲ್ಲಿನ ಜನರಿಗೆ ಭೂ ದಾಖಲೆಗಳು ಸಿಕ್ಕಿಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆಯಲು ರೈತರು, ಸಾರ್ವಜನಿಕರು ಕಂದಾಯ ಇಲಾಖೆಗೆ
ಅಲೆದರೂ ಕೆಲಸಗಳಾಗುತ್ತಿಲ್ಲ ಎಂದು ದೂರಿದರು.

Advertisement

ಈ ವೇಳೆ ಜನರನ್ನು ಸಮಾಧಾನ ಪಡಿಸಿದ ಅಧಿಕಾರಿಗಳು ನೆರೆದ ಗ್ರಾಮಸ್ಥರಿಗೆ ಮತದಾನದ ಪ್ರಮಾಣವಚನ ಬೋಧಿಸಿ, ಫೋಟೋ, ವಿಡಿಯೋ ಚಿತ್ರೀಕರಿಸಿಕೊಂಡು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಿದರು.

ಆದರೆ ಉಳಿದ ತಾಂಡಾಗಳ ಮತ್ತು ಗೊಲ್ಲರಹಟ್ಟಿಯ ಜನರ ಬಳಿಗೆ ಅಧಿಕಾರಿಗಳು ಹೋಗಿಲ್ಲ. ಅಧಿಕಾರಿಗಳು ಜನರ ಕಷ್ಟ ಕೆಳಲು ಸಭೆ ನಡೆಸುವ ದಿನಾಂಕ ಮತ್ತು ಸಮಯದ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಗೊಲ್ಲರಹಟ್ಟಿ, ವೇಣ್ಯಪ್ಪನ ತಾಂಡಾ, ಸೋಂಪುರ ತಾಂಡಾ ಹಾಗೂ ಮೀಸೆಖೀರಣ್ಣನ ತಾಂಡಾದ ನಿವಾಸಿಗಳು, ಗ್ರಾಪಂ ಮಾಜಿ ಸದಸ್ಯ ಹನುಮಂತ ಗೊಲ್ಲರ ತಿಳಿಸಿದ್ದಾರೆ. ‘

Advertisement

Udayavani is now on Telegram. Click here to join our channel and stay updated with the latest news.

Next