Advertisement

ಪ್ರತಿ ತಿಂಗಳು ಅಧಿಕಾರಿಗಳ ಸಭೆ: ರೇವಣ್ಣ

09:53 PM Dec 21, 2019 | Lakshmi GovindaRaj |

ಚನ್ನರಾಯಪಟ್ಟಣ: “ನಾನು ಈಗ ಮಂತ್ರಿಯಾಗಿಲ್ಲ, ಮಾಡಲು ಕೆಲಸವಿಲ್ಲ, ಹೀಗಾಗಿ ಪ್ರತಿ ತಿಂಗಳು ದಂಡಿಗನಹಳ್ಳಿ ಹೋಬಳಿಗೆ ಸಂಬಂಧಿಸಿದಂತೆ ಚನ್ನರಾಯಪಟ್ಟಣದಲ್ಲಿ ಪ್ರತಿ ತಿಂಗಳು ಸಭೆ ಮಾಡುತ್ತೇನೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ತಿಳಿಸಿದರು. ಪಟ್ಟಣದಲ್ಲಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಮಂತ್ರಿಯಾಗಿದ್ದಾಗ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಆ ಅನುದಾನದಲ್ಲಿ ಹಲವು ಕಾಮಗಾರಿ ನಡೆಯಬೇಕಿದ್ದು ಇದನ್ನು ಅಧಿಕಾರಿಗಳ ಮೂಲಕ ಮಾಡಿಸುವುದು ಹಾಗೂ ಪ್ರತಿ ತಿಂಗಳು ಸಭೆ ಮಾಡಿ ಮಾಹಿತಿ ಪಡೆಯುವುದೇ ತನ್ನ ಮುಂದಿನ ಕೆಲಸ ಎಂದು ಹೇಳಿದರು.

ಉದಯಪುರದಲ್ಲಿ ಸಂತೆ: ದಂಡಿಗನಹಳ್ಳಿ ಹೋಬಳಿಯಲ್ಲಿ ಉದಯಪುರ ಗ್ರಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವುದಲ್ಲದೆ ಹತ್ತಾರು ಹಳ್ಳಿ ಮುಖ್ಯ ಕೇಂದ್ರವಾಗಿದೆ. ಅಲ್ಲಿ ವಾರದಲ್ಲಿ ಒಂದು ದಿನ ಸಂತೆ ಮಾಡಲು ಕೃಷಿ ಉತ್ಪನ್ನ ಮಾರಾಟ ಮಂಡಳಿ ಮುಂದಾಗಬೇಕು ಎಂದು ಹೇಳಿದ್ದಲ್ಲದೆ ಅಕ್ಕನಹಳ್ಳಿ ಸಂತೆಯನ್ನು ನಿಲ್ಲಿಸಿ ಮೊದಲು ಉದಯಪುರದಲ್ಲಿ ಸಂತೆ ಮಾಡುವ ಕಡೆ ಎಪಿಎಂಸಿ ಗಮನ ಹರಿಸಿ, ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗುವಂತೆ ಸೂಚಿಸಿದರು.

30 ವರ್ಷದಿಂದ ಹಕ್ಕು ಪತ್ರ ನೀಡಿಲ್ಲ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ದೂತನೂರು ಕಾವಲಿನಲ್ಲಿ ನೂರಾರು ಮಂದಿ ಕೃಷಿ ಭೂಮಿ ಹೊಂದಿದ್ದು ಮೂರು ದಶಕದಿಂದ ಅವರಿಗೆ ಹಕ್ಕು ಪತ್ರ ನೀಡಲಾಗಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಗುರುತಿಸಿ ಕೃಷಿ ಭೂಮಿ ಹೊಂದಿರುವ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡಲು ಮುಂದಾಗಬೇಕು. ಅಲ್ಲದೇ, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ನಾಡಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಬದಲಾಗಿ ಪ್ರತಿ ಗ್ರಾಮ ಭೇಟಿ ಮಾಡುವಂತೆ ಆದೇಶಿಸಿದರು.

ಪ್ರತಿ ಹಳ್ಳಿಗೆ ನದಿಯಿಂದ ನೀರು: ದಂಡಿನಹಳ್ಳಿ ಹೋಬಳಿ 87 ಹಳ್ಳಿಗೆ ಹೇಮಾವತಿ ನದಿಯಿಂದ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಈಗಾಗಲೇ ಆನೇಕೆರೆ ಗ್ರಾಮದಲ್ಲಿ ಶಂಕುಸಾಪನೆ ಮಾಡಿದ್ದು ಅಲ್ಲಿಂದ 66 ಹಳ್ಳಿಗೆ ನೀರು ಹರಿಯಲಿದೆ. ಹಾಗೆಯೇ ಹೊನ್ನಶೆಟ್ಟಿಹಳ್ಳಿ ಬಳಿಯಿಂದ ಆರು ಹಳ್ಳಿ ಕುಂಬೇನಹಳ್ಳಿ-ಅಗ್ರಹಾರದ ಬಳಿಯಿಂದ 15 ಗ್ರಾಮಗಳಿಗೆ ನದಿ ನೀರು ಸರಬರಾಜು ಮಾಡಲು ಯಂತ್ರಗಾರ ನಿರ್ಮಾಣವಾಗಲಿದೆ. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿ ವೀಕ್ಷಣೆ ಮಾಡಿ ಪ್ರತಿ ವಾರ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.

Advertisement

ಎನ್‌ಆರ್‌ಇಜಿ ಹಣ ಸಂಪೂರ್ಣ ಬಳಕೆಯಾಗಲಿ: ಉದ್ಯೋಗ ಖಾತ್ರಿ ಹಣ ಸಂಪೂರ್ಣ ಬಳಕೆಯಾಗಬೇಕು ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡು ಅನುದಾನ ಒಂದು ರೂ. ಸರ್ಕಾರಕ್ಕೆ ಹಿಂತಿರುಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು, ಕೃಷಿ, ರೇಷ್ಮೆ, ತೋಟಗಾರಿಕೆ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಒಟ್ಟಾಗಿ ಸಭೆ ಮಾಡಿ ರೈತರಿಗೆ ಎನ್‌ಆರ್‌ಇಜಿ ಮೂಲಕ ಕೆಲಸ ಮಾಡಿಸಬೇಕು, ಸರ್ಕಾರದ ಯೋಜನೆ ಕರಪತ್ರ ಮಾಡಿ ಪ್ರತಿ ಮನೆಗೆ ಹಂಚುವ ಮೂಲಕ ಸರ್ಕಾರದ ಯೋಜನೆ ಅನುಷ್ಟಾನಕ್ಕೆ ಅಧಿಕಾರಿಗಳು ಮುಂದಾಗುವಂತೆ ತಿಳಿಸಿದರು.

ತೋಟಗಾರಿಗೆ ಬೆಳೆ ಹೆಚ್ಚಿಸಿ: ರೈತರು ಆಹಾರ ಬೆಳೆ ಬೆಳೆಯುತ್ತಿದ್ದಾರೆ. ಅವರಿಗೆ ಆದಾಯ ತರುವ ನಿಟ್ಟಿನಲ್ಲಿ ತೋಟಗಾರಿಕೆ ಬೆಳೆ ಹೆಚ್ಚು ಮಾಡಿಸಲು ಇಲಾಖೆ ಮುಂದಾಗಬೇಕು, ತೆಂಗಿನ ತೋಟದಲ್ಲಿ ಸಪೋಟ ಸೇರಿದಂತೆ ಇತರ ಹಣ್ಣಿನ ಬೆಳೆ ಬೆಳೆಯಬೇಕು, ಬರಡು ಭೂಮಿಯಲ್ಲಿ ಹುಣಸೆ ಮರಗಳ ನಾಟಿ ಮಾಡಿ ವಾರ್ಷಿಕ ಆದಾಯ ರೈತರಿಗೆ ಸೇರುವಂತೆ ಮಾಡುವುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಕರ್ತವ್ಯ ಎಂದರು. ತಾಪಂ ಅಧ್ಯಕ್ಷರಾದ ಇಂದಿರಾ, ತಹಶೀಲ್ದಾರ್‌ ಜೆ.ಬಿ.ಮಾರುತಿ, ತಾಪಂ ಇಒ ಚಂದ್ರಶೇಖರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮನಾಥ ಮತ್ತಿತರರು ಉಪಸ್ಥಿತರಿದ್ದರು.

ನಾವೇ ಬೀಳುವ ಹಂತದಲ್ಲಿದ್ದೇವೆ: ಹಲವು ಶಾಲೆಗಳು ಬೀಳುವ ಹಂತದಲ್ಲಿವೆ, ಚುನಾವಣೆ ಸಮಯದಲ್ಲಿ ತೇಪೆ ಹಾಕುವ ಕೆಲಸ ಬಿಟ್ಟರೆ ಶಾಶ್ವತವಾಗಿ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಯೊಬ್ಬರು ಶಾಸಕರ ಗಮನಕ್ಕೆ ತಂದರು. ಈ ವೇಳೆ “ಶಾಲೆ ಏನು ನಾವೇ ಬೀಳುವ ಹಂತದಲ್ಲಿ ಇದ್ದೇವೆ’ ಇನ್ನು ಶಾಲೆ ಏನ್‌ ಮಾಡೋಣ. ಯಡಿಯೂರಪ್ಪ ಸರ್ಕಾರಿ ಶಾಲೆಗಳಿಗೆ ಕಟ್ಟಡ ಕಟ್ಟಲು ಹಣ ನೀಡುವುದಿಲ್ಲ ಎಲ್ಲಿಂತ ಹಣ ತಂದು ನಾನು ನಿರ್ಮಾಣ ಮಾಡಲಿ’ ಎಂದು ಶಾಸಕ ಎಚ್‌.ಡಿ.ರೇವಣ್ಣ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next