Advertisement

ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಗೆ ಅಧಿಕಾರಿಗಳ ಭೇಟಿ

12:14 PM Aug 22, 2017 | Team Udayavani |

ಹುಮನಾಬಾದ: ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಸೋಪ್‌, ಗ್ರೀಸ್‌, ರಸಗೊಬ್ಬರ ತಯಾರಿಕೆ ಹಾಗೂ ಎರಡು ರಾಸಾಯನಿಕ ಕಾರ್ಖಾನೆಗಳಿಗೆ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿ ದೀವಾಕರ್‌  ಕಾಟಾಚಾರಕ್ಕೆ ಎಂಬಂತೆ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮದ ಮುಖಂಡರು ಕೂಡ ಇದ್ದರು. ಅಧಿಕಾರಿಗಳು ಬಂದ ಸಂದರ್ಭದಲ್ಲಿ ಯಾವ ಕಾರ್ಖಾನೆಯಲ್ಲೂ ಮಾಲೀಕರು ಇರಲಿಲ್ಲ. ಅಧಿಕಾರಿಗಳು ಕಾರ್ಖಾನೆ ಒಳಗೆ ಹೋಗಿ ಒಂದು ಸುತ್ತು ತಿರುಗಿ ಹೊರಬಂದರು. ಈ ವೇಳೆ ಗ್ರಾಮಸ್ಥರು ಕೆಲ ಕಾರ್ಖಾನೆಗಳ ಬಾವಿಯ ನೀರನ್ನು ಕುಡಿಯುವಂತೆ ಕಾರ್ಖಾನೆಯವರಿಗೆ ಆಗ್ರಹಿಸಿದರು. ಆದರೆ ಕಾರ್ಖಾನೆಯವರು ಬಾವಿ ನೀರು ಕುಡಿಯಲು ಬಳಸುವುದಿಲ್ಲ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ವಾಗ್ವಾದ ಕೂಡ ನಡೆಯಿತು. ಗಡವಂತಿ ಗ್ರಾಮಕ್ಕೆ ತಟ್ಟಿದ ಶಾಪ ಇದೀಗ ಕಾರಂಜಾ ವ್ಯಾಪತಿಯ ಜನರಿಗೂ ತಟ್ಟಲಿದೆ. ಆದ್ದರಿಂ ಕಾರ್ಖಾನೆಯ ಮಾಲೀಕರು ಹಾಗೂ ಅಧಿಕಾರಿಗಳು ಮಾನವಿಯತೆ ಹೊಂದಬೇಕು. ನಮ್ಮ ಗ್ರಾಮದಲ್ಲಿ ನಿಮ್ಮ
ಮಕ್ಕಳು ಇದ್ದಿದ್ದರೆ ಹೇಗಿರುತ್ತಿತ್ತು ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಈ ಕಾರ್ಖಾನೆಗಳು ನಮ್ಮ ಗ್ರಾಮಸ್ಥರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿವೆ. ಅನೇಕರು ಚರ್ಮರೋಗದಿಂದ ಬಳಲುತ್ತಿದ್ದಾರೆ. ಇನ್ನಷ್ಟು ಜನರಿಗೆ ತುರಿಸುವಿಕೆ, ಮಲಬದ್ಧತೆ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತಿವೆ. ನಿಮ್ಮ ನಿರ್ಲಕ್ಷತನಕ್ಕೆ ನಾವೇಕೆ ಬಲಿಯಾಗಬೇಕು
ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಖಾನೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಯಾವ ಕಾರ್ಖಾನೆಗಳ
ಮುಖ್ಯಸ್ಥರಿಗೂ ಪರಿಸರ ಮಾಲಿನ್ಯದ ಬಗ್ಗೆ ಸ್ಪಷ್ಟನೆ ಕೇಳಲಿಲ್ಲ. ಕೊಳಕು ತ್ಯಾಜ್ಯವನ್ನು ಯಾಕೆ ಹೊರಬಿಡಲಾಗುತ್ತಿದೆ ಎಂದು ಪ್ರಶ್ನಿಸಲಿಲ್ಲ. ಅಧಿಕಾರಿಗಳು ಬರುತ್ತಿದ್ದಾರೆಂದು ತಿಳಿದ ವಿವಿಧ ಕಂಪನಿಗಳು ಪೂರ್ವ ಸಿದ್ಧತೆ ಮಾಡಿಕೊಂಡಿದ್ದವು. ಕೊಳಕು ತ್ಯಾಜ್ಯ ಹರಿದು ಹೋಗುವ ಸ್ಥಳಲ್ಲಿ ಮಣ್ಣು ಹಾಕಿರುವುದು ಕೂಡ ಕಂಡುಬಂದಿತು. ಹಾಗಾಗಿ ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಕುರಿತು ಪರಿಸರ ಮಾಲಿನ್ಯ ಅಧಿಕಾರಿ ದೀವಾಕರ್‌ ಅವರನ್ನು ವಿಚಾರಿಸಿದ್ದಾಗ, ಮೇಲ್ನೊಟಕ್ಕೆ ವಿವಿಧ ಕಾರ್ಖಾನೆಗಳಿಂದ ತ್ಯಾಜ್ಯ ಹೊರಬರುತ್ತಿದೆ. ಕೆಲವು ಕಡೆಯಿಂದ ನೀರಿನ ಮಾದರಿ ಪಡೆಯಲಾಗಿದೆ. ತನಿಖೆ ನಡೆಸಿ ಕಾರ್ಖಾನೆಗಳಿಗೆ ನೋಟಿಸ್‌ ನೀಡಲಾಗುವುದು. ಪರಿಸರ ಮಾಲಿನ್ಯ ಆಗದಂತೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು. ಈಗಾಗಲೇ ತ್ಯಾಜ್ಯ ಹಳ್ಳಗಳ ಮೂಲಕ ಕಾರಂಜಾ ಜಲಾಶಯಕ್ಕೆ ಸೇರುತ್ತಿದ್ದು, ಅಂತಹ ಕಂಪನಿಗಳ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿ ಜಾರಿಕೊಂಡರು. ತಾಪಂ ಇಒ ಡಾ| ಗೊವಿಂದ, ಗ್ರಾಪಂ ಅಧ್ಯಕ್ಷ ಬಸವರಾಜ ಮಾಲಿಪಾಟೀಲ, ಓಂಕಾರ ತುಂಬಾ, ಗಜೇಂದ್ರ ಕನಕಟ್ಟಕರ್‌, ಪ್ರಕಾಶ ರೋಗನ, ರವಿ ಹೊಸಳ್ಳಿ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next