Advertisement

ಆಶಾ ಐಹೊಳೆ ಪತ್ರದಲ್ಲಿ ಅಧಿಕಾರಿ ಸಹಿ ನಕಲು: ಪ್ರಕರಣ ದಾಖಲು

12:35 PM Apr 22, 2022 | Team Udayavani |

ಬೆಂಗಳೂರು: ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಪ್ರಶಾಂತರಾವ್‌ ಐಹೊಳೆ ಅವರು ಹಿಂಡಲಗಾ ಗ್ರಾಮದ 108 ಕಾಮಗಾರಿಗಳಿಗೆ ವಿಶೇಷ ಅನುದಾನ ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ (ಆರ್‌ ಡಿಪಿಆರ್‌) ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಅಧಿಕಾರಿಗಳ ಸಹಿ ನಕಲು ಮಾಡಿರುವ ಆರೋಪ ಕೇಳಿ ಬಂದಿದೆ. ಇದಕ್ಕೂ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಪ್ರಕರಣಕ್ಕೂ ಸಂಬಂಧ ಇದೆ ಎನ್ನಲಾಗಿದೆ.

Advertisement

ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಉಪ ನಿರ್ದೇಶಕ ರಮೇಶ್‌ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ.

ಬೆಳಗಾವಿ ಜಿಪಂ ಅಧ್ಯಕ್ಷೆ ಆಶಾ ಪ್ರಶಾಂತರಾವ್‌ ಐಹೊಳೆ ಅವರು 2021ರ ಫೆ.15ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು, ಬೆಳಗಾವಿ ತಾಲೂಕು ಹಿಂಡಲಗಾ ಗ್ರಾಮದಲ್ಲಿ 108 ವಿವಿಧ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಅನುದಾನ ನೀಡುವಂತೆ ಕೋರಿದ್ದಾರೆ. ಫೆ.17ರಂದು ಸದರಿ ಪತ್ರವನ್ನು ಸ್ವೀಕರಿಸಿ ಸ್ವೀಕೃತಿ ನೀಡಲಾಗಿದೆ. ಹಾಗೆಯೇ ಪತ್ರ ಹಾಗೂ 108 ಕಾಮಗಾರಿಗಳ ವಿವರಗಳ ಪಟ್ಟಿಯನ್ನು ಕಡತದಲ್ಲಿ ಅಡಕಗೊಳಿಸಲಾಗಿದೆ. ಆದರೆ, ಆ ಪತ್ರದಲ್ಲಿ ಯಾರೋ ಅಪರಿಚಿತರು ಹಸಿರು ಶಾಯಿಯಲ್ಲಿ ಇ.ಆಫಿಸ್‌ ನಂ.2247102 ಆದೇಶ ಪ್ರತಿಗಳನ್ನು 2021ರ ಮಾ.5ರಂದು ನೀಡಲಾಗುವುದು ಎಂದು ಕನ್ನಡದಲ್ಲಿ ಬರೆದು ಸಹಿ ಮಾಡಿದ್ದಾರೆ. ಕೊನೇ ಪುಟದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸಹಿ ಪಕ್ಕದಲ್ಲಿ ಅನುಮೋದನೆಗಾಗಿ ಆದೇಶಿಸಲಾಗಿದೆ ಎಂದು 2021ರ ಫೆ.26ರಂದು ಕನ್ನಡ ಅಕ್ಷರದಲ್ಲಿ ಹಸಿರು ಶಾಯಿಯಲ್ಲಿ ಬರೆದು ಸಹಿ ಮಾಡಿದ್ದಾರೆ.

ನಿಯಮದ ಪ್ರಕಾರ ದಿನನಿತ್ಯ ಯಾವುದೇ ಅರ್ಜಿಗಳು ಕಚೇರಿಗೆ ತಲುಪಿದಾಗ ಅವುಗಳನ್ನು ಸ್ವೀಕರಿಸಿ ಸ್ವೀಕೃತಿ ನೀಡಿ ಬಳಿಕ ಕಚೇರಿಯ ಕಡತದಲ್ಲಿ ಅಡಕಗೊಳಿಸಿ ಮೇಲಾಧಿಕಾರಿಗಳಿಗೆ ನಿವೇದಿಸಿಕೊಳ್ಳಲಾಗುತ್ತದೆ. ಯಾವುದೇ ಅರ್ಜಿದಾರರ ಪ್ರತಿಗಳ ಮೇಲೆ ಕಚೇರಿಯ ಟಿಪ್ಪಣಿಗಳಾಗಲಿ ಅಥವಾ ಷರಗಳಾಗಲಿ ನಮೂದಿಸುವುದಿಲ್ಲ.

ಹಾಗೆಯೇ ಅರ್ಜಿ ಪ್ರತಿಗಳ ಮೇಲೆ ಯಾವುದೇ ಅನುಮೋದನೆಗಳನ್ನು ನೀಡುವುದಿಲ್ಲ. ಹೀಗಾಗಿ ಈ ಪತ್ರದ ಮೇಲೆ ಅಧಿಕಾರಿಗಳ ಸಹಿಯನ್ನು ಫೋರ್ಜರಿ ಮಾಡಿ ಸರ್ಕಾರಕ್ಕೆ ಹಾಗೂ ಸರ್ಕಾರಿ ಕೆಲಸಕ್ಕೆ ಧಕ್ಕೆಯುಂಟು ಮಾಡಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖೀಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next