ಬೆಂಗಳೂರು: ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿ ಯನ್ನು ಸಮರ್ಥವಾಗಿ ನಿಭಾಯಿಸಲು ಸಂಬಂಧ ಪಟ್ಟ ಇಲಾಖೆಗಳ ಎಲ್ಲ ಹಂತದ ಅಧಿಕಾರಿಗಳು 3 ತಿಂಗಳವರೆಗೆ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಅಭಾವದ ಕಾರಣ ಬರ ಪರಿಸ್ಥಿತಿ ತಲೆದೋರಿರುವುದರಿಂದ ಬರ ನಿರ್ವಹಣೆಯಲ್ಲಿ ತೊಡಗಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಮೂರು ತಿಂಗಳ ಕಾಲ ರಜೆ ತೆಗೆದುಕೊಳ್ಳದೆ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ ಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಇಲಾಖೆಗಳ ಕಾರ್ಯ ದರ್ಶಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ನಿರ್ವಹಣೆ ನಮ್ಮ ಮೊದಲ ಆದ್ಯತೆ. ಯಾರೂ ಯಾವುದೇ ರೀತಿಯ ಸಬೂಬು ಹೇಳಬಾರದು. ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಲು ತಿಳಿಸಿದ್ದೇನೆ ಎಂದು ಹೇಳಿದರು.
ನೆಪ ಹೇಳುವಂತಿಲ್ಲ: ಯಾವುದೇ ಹಂತದ ಅಧಿಕಾರಿಗಳೂ ಶನಿವಾರ, ಭಾನುವಾರ ನೆಪ ಹೇಳದೇ ಬರ ಪರಿಹಾರ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ. ಬರ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡುವುದು, ಕುಡಿಯುವ ನೀರು ಸರಬರಾಜಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಾನುವಾರುಗಳಿಗೆ ಹೊರ ರಾಜ್ಯದಿಂದ ಮೇವು ಖರೀದಿ ಮಾಡುವ ಬದಲು ರಾಜ್ಯದಲ್ಲಿಯೇ ಕೊಳವೆ ಬಾವಿ ಹೊಂದಿರುವ ರೈತರು ಮೇವು ಬೆಳೆದು ಮಾರಾಟ ಮಾಡಲು ಸೂಚನೆ ನೀಡಲಾಗಿದೆ. ಇದುವರೆಗೂ ಪ್ರತಿ ಟನ್ ಹಸಿರು ಮೇವಿಗೆ ಮೂರು ಸಾವಿರ ರೂ. ನೀಡಲಾಗುತ್ತಿತ್ತು ಈ ಬಾರಿ ಪ್ರತಿ ಟನ್‌ಗೆ 4 ಸಾವಿರ ನೀಡಲು ತೀರ್ಮಾನಿಸಲಾಗಿದೆ ಎಂದರು.